ADVERTISEMENT

ಓದುಗ ಮುಖ್ಯವೋ ವಿಮರ್ಶಕ ಮುಖ್ಯವೋ...

​ಪ್ರಜಾವಾಣಿ ವಾರ್ತೆ
Published 25 ಜನವರಿ 2013, 19:59 IST
Last Updated 25 ಜನವರಿ 2013, 19:59 IST
`ನಾನು, ನನ್ನ ವಿಮರ್ಶಕರು ಮತ್ತು ಓದುಗರು' ಎಂಬ ಗೋಷ್ಠಿಯಲ್ಲಿ ವಿಮರ್ಶಕ ಡಾ.ಓ.ಎಲ್.ನಾಗಭೂಷಣ ಸ್ವಾಮಿ ಮಾತನಾಡಿದರು. ಕಥೆಗಾರರಾದ ರಾಘವೇಂದ್ರ, ನಾ.ಡಿಸೋಜಾ ಹಾಗೂ ಕವಿ ಬಿ.ಆರ್.ಲಕ್ಷ್ಮಣರಾವ್ ಭಾಗವಹಿಸಿದ್ದರು
`ನಾನು, ನನ್ನ ವಿಮರ್ಶಕರು ಮತ್ತು ಓದುಗರು' ಎಂಬ ಗೋಷ್ಠಿಯಲ್ಲಿ ವಿಮರ್ಶಕ ಡಾ.ಓ.ಎಲ್.ನಾಗಭೂಷಣ ಸ್ವಾಮಿ ಮಾತನಾಡಿದರು. ಕಥೆಗಾರರಾದ ರಾಘವೇಂದ್ರ, ನಾ.ಡಿಸೋಜಾ ಹಾಗೂ ಕವಿ ಬಿ.ಆರ್.ಲಕ್ಷ್ಮಣರಾವ್ ಭಾಗವಹಿಸಿದ್ದರು   

ಧಾರವಾಡ: ಲೇಖಕರಿಗೆ ಓದುಗರು ಮುಖ್ಯವೋ, ವಿಮರ್ಶಕರು ಮುಖ್ಯವೋ ಎಂಬ ಸಾರಸ್ವತ ಲೋಕದ ಬಹುಮುಖ್ಯ ಚರ್ಚೆಗೆ `ಧಾರವಾಡ ಸಾಹಿತ್ಯ ಸಂಭ್ರಮ' ಶುಕ್ರವಾರ ಸಾಕ್ಷಿಯಾಯಿತು.

`ಪ್ರಜಾವಾಣಿ' ಪ್ರಾಯೋಜಿಸಿದ್ದ `ನಾನು, ನನ್ನ ವಿಮರ್ಶಕರು ಮತ್ತು ಓದುಗರು' ಗೋಷ್ಠಿಯಲ್ಲಿ ಹಿರಿಯ ಲೇಖಕರಾದ ನಾ. ಡಿಸೋಜಾ, ರಾಘವೇಂದ್ರ ಪಾಟೀಲ, ಬಿ.ಆರ್. ಲಕ್ಷ್ಮಣರಾವ್ ಹಾಗೂ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಪಾಲ್ಗೊಂಡಿದ್ದರು.

ಸಾಹಿತಿಗಳಾದ ಗಿರೀಶ ಕಾರ್ನಾಡ, ಶ್ರೀನಿವಾಸ ವೈದ್ಯ, ಎಸ್. ದಿವಾಕರ್, ವಿವೇಕ ಶಾನಭಾಗ, ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಚಂದ್ರಶೇಖರ ಪಾಟೀಲ, ಪ್ರತಿಭಾ ನಂದಕುಮಾರ್, ವಿಮರ್ಶಕರಾದ ಡಾ. ಸಿ.ಎನ್.ರಾಮಚಂದ್ರನ್, ಗಿರಡ್ಡಿ ಗೋವಿಂದರಾಜ ಹಾಗೂ ಅನೇಕ ಸಭಿಕರು ಸಂವಾದ ನಡೆಸಿದರು.

`ಇಬ್ಬರು ಮಾತನಾಡುತ್ತಿರುವಾಗ ಕೇವಲ ಅವರಷ್ಟೇ ಇರುವುದಿಲ್ಲ. ಸುಪ್ತಾವಸ್ಥೆಯ ವಿಮರ್ಶಕನೂ ಕೆಲಸ ಮಾಡುತ್ತಿರುತ್ತಾನೆ ಎಂಬ ಮಾಸ್ತಿ ವೆಂಕಟೇಶ ಅಯ್ಯಂಗಾರರ ಮಾತನ್ನು ಪ್ರಸ್ತಾಪಿಸುವ ಮೂಲಕ ಗೋಷ್ಠಿಯ ನಿರ್ದೇಶಕ ಓ.ಎಲ್.ನಾಗಭೂಷಣ ಸ್ವಾಮಿ ಚರ್ಚೆ ಆರಂಭಿಸಿದರು.

ನಾ.ಡಿಸೋಜಾ, `ವಿಮರ್ಶಕರು, ಓದುಗರಿಗಿಂತಲೂ  ಹೆಚ್ಚಾಗಿ ಲೇಖಕನಿಗೆ ತುಡಿತ ಎಂಬುದಿರುತ್ತದೆ. ಮತ್ತೊಬ್ಬರನ್ನು ತೃಪ್ತಿಪಡಿಸಲೆಂದು ಆತ ಬರೆಯವುದಿಲ್ಲ' ಎಂದರು. ಈ ಮಾತಿಗೆ ದನಿಗೂಡಿಸಿದ ಬಿ.ಆರ್. ಲಕ್ಷ್ಮಣರಾವ್, `ನಾನು ಸುಳ್ಳು ಹೇಳಿಕೊಳ್ಳದೇ ಬರೆಯುತ್ತೇನೆ. ಇಲ್ಲಿ ಯಾವ ವಯಸ್ಸಿನ, ಯಾವ ವರ್ಗದ ಓದುಗನಿಗೆ ಬರೆಯುತ್ತಿದ್ದೇನೆ ಎಂಬುದು ಮುಖ್ಯವಲ್ಲ' ಎಂದು ಸಮರ್ಥಿಸಿಕೊಂಡರು.

ರಾಘವೇಂದ್ರ ಪಾಟೀಲ ಮಾತನಾಡಿ `ಬರೆಯುವ ವ್ಯಕ್ತಿತ್ವಕ್ಕೂ, ಓದುವ ವ್ಯಕ್ತಿತ್ವಕ್ಕೂ ವ್ಯತ್ಯಾಸ ಇರುತ್ತದೆ, ಒಬ್ಬ ಲೇಖಕನೊಳಗೇ ಮೊದಲ ಓದುಗ ಕೂಡ ಇರುತ್ತಾನೆ' ಎಂದರು.

`ಕೋಗಿಲೆ ಕೂಡ ತನ್ನ ಸಂಗಾತಿಯನ್ನು ಸೆಳೆಯಲು ಹಾಡುತ್ತದೆ. ಹೀಗಾಗಿ ಲೇಖಕ ಯಾರನ್ನೂ ಉದ್ದೇಶಿಸದೇ ಬರೆಯುತ್ತಾನೆ ಎಂಬುದು ಸುಳ್ಳು' ಎನ್ನುವ ಮೂಲಕ ಸಿ.ಎನ್. ರಾಮಚಂದ್ರನ್ ಚರ್ಚೆಯನ್ನು ಭಿನ್ನ ನೆಲೆಗೆ ಕೊಂಡೊಯ್ದರು. ನಂತರ ಗಿರಡ್ಡಿ ಗೋವಿಂದರಾಜ `ಬರಹಗಾರರು ರಮ್ಯ ನೆಲೆಯಲ್ಲಿ ಯೋಚಿಸಿದಾಗ ಸಮಸ್ಯೆಗಳು ಉಂಟಾಗುತ್ತವೆ. ಸಾಹಿತ್ಯ ಸಂವಹನವಾಗದಿರುವ ಸಾಧ್ಯತೆಗಳೂ ಇರುತ್ತವೆ' ಎಂದರು. ರಾಘವೇಂದ್ರರ ಮಾತನ್ನು ಪ್ರಸ್ತಾಪಿಸಿದ ಚಂದ್ರಶೇಖರ ಪಾಟೀಲ, `ಖಂಡಿತಾ ಲೇಖಕನೊಳಗಿರುವ ಓದುಗ ವಿಮರ್ಶೆಯ ಕೆಲಸವನ್ನೂ ಮಾಡುತ್ತಿರುತ್ತಾನೆ' ಎಂದು ಪ್ರತಿಪಾದಿಸಿದರು.

ಬರಹಗಾರರಿಗೂ ಓದುಗರಿಗೂ ವಿಮರ್ಶಕರ ಮೇಲೇಕೆ ಕೋಪ ಎಂಬ ಪ್ರಶ್ನೆ ಸ್ವಾರಸ್ಯಪೂರ್ಣ ಚರ್ಚೆಯನ್ನು ಹುಟ್ಟುಹಾಕಿತು. ರಾಘವೇಂದ್ರ ಪಾಟೀಲರು `ನಮಗೆ ಸಹೃದಯರ ಬಗ್ಗೆ ಆಕ್ಷೇಪ ಇಲ್ಲ. ಸಹೃದಯರು ಭಾರತೀಯ ಸಾಹಿತ್ಯ ಪರಂಪರೆಯಲ್ಲಿದ್ದಾರೆ. ಆದರೆ ವಿಮರ್ಶಕರು ಹೊರಗಿನಿಂದ ಬಂದವರು' ಎಂದದ್ದು ಆಕ್ಷೇಪಣೆಗೆ ಗುರಿಯಾಯಿತು.

ಸಂಸ್ಕೃತ ಶ್ಲೋಕವನ್ನು ಪ್ರಸ್ತಾಪಿಸಿದ ಸಿ.ಎನ್. ರಾಮಚಂದ್ರನ್, `ವಿಮರ್ಶಕರು ಪಾಶ್ಚಾತ್ಯರಿಂದ ಬಂದವರು ಎಂದು ಹೇಗೆ ಹೇಳುತ್ತೀರಿ? ಸಹೃದಯನಿಗೆ ಕೂಡ ವಿಶಾಲವಾದ ಓದು ಇರಬೇಕು ಎನ್ನುತ್ತದೆ ಭಾರತೀಯ ಸಾಹಿತ್ಯ ಪರಂಪರೆ. ಆದರ್ಶ ಓದುಗರು, ಲೇಖಕರು ಇಲ್ಲದೇ ಇರುವುದರಿಂದ ಆದರ್ಶ ವಿಮರ್ಶಕರೂ ಇಲ್ಲ' ಎಂದು ಚುಚ್ಚಿದರು.

ನವ್ಯದ ಸಂದರ್ಭದಲ್ಲಿ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಸಾಹಿತ್ಯವನ್ನು ಕೈ ಹಿಡಿದು ನಡೆಸುವಂತಹ ವಿಮರ್ಶಕರ ಸಂಖ್ಯೆ ಹೆಚ್ಚಬೇಕಿದೆ ಎಂಬ ಅಭಿಪ್ರಾಯ ಇದೇ ಸಂದರ್ಭದಲ್ಲಿ ಕೇಳಿ ಬಂತು. ಆದರೆ ವಿಮರ್ಶಕರು ತಿದ್ದಲು ಮುಂದಾದರೂ ಕೆಲವು ಲೇಖಕರು ಅದನ್ನು ಇಚ್ಛೆಪಡುವುದಿಲ್ಲ ಎಂಬ ಅಸಮಾಧಾನ ವ್ಯಕ್ತವಾಯಿತು. ವಿಮರ್ಶಕರು ನಡೆಸುವ ರಾಜಕಾರಣ, ವಿಮರ್ಶೆಯ ಅವೈಜ್ಞಾನಿಕತೆಯ ಕುರಿತು ಪ್ರಸ್ತಾಪವಾಯಿತು. ಈ ಕುರಿತು ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾದವು.

ಎಸ್. ದಿವಾಕರ್, `ಲೇಖಕನಿಗೆ ತನ್ನ ನಿಜವಾದ ಓದುಗ ಯಾರೆಂಬುದು ಗೊತ್ತಿರುವುದಿಲ್ಲ. ಸಂಗೀತ, ನಾಟಕ ಸಿನಿಮಾಗಳಲ್ಲಿ ಈ ರೀತಿ ಆಗುವುದಿಲ್ಲ' ಎಂದಾಗ ನಾ. ಡಿಸೋಜಾ ಅಸಮ್ಮತಿ ಸೂಚಿಸಿದರು. `ನನಗೆ ನನ್ನ ಓದುಗರ ಬಗ್ಗೆ ಅರಿವಿದೆ' ಎಂದು ವಾದಕ್ಕೆ ತೆರೆ ಎಳೆದರು. ವಿವೇಕ ಶಾನಭಾಗ, `ತನ್ನ ಬಗ್ಗೆ ಬರೆದ ವಿಮರ್ಶೆಯನ್ನು ಮಾತ್ರ ಲೇಖಕ ಓದಬಾರದು. ಇತರರ ಬಗ್ಗೆ ಬರೆದಿದ್ದನ್ನು ಓದಿದರೆ ತಾನು ತಿದ್ದಿಕೊಳ್ಳುವುದು ಸಾಧ್ಯವಾಗುತ್ತದೆ' ಎಂದರು.

ಪ್ರತಿಭಾ ನಂದಕುಮಾರ್, `ಹೊಸ ತಲೆಮಾರಿನ ಬರಹಗಾರರನ್ನು ಹಾಗೂ ಹೊಸ ಹೊಸ ತಲ್ಲಣಗಳನ್ನು ಅರ್ಥಮಾಡಿಕೊಳ್ಳುವ ವಿಮರ್ಶೆ ನಡೆಯುತ್ತಿಲ್ಲ. ಇದರಿಂದಾಗಿ ಹೊಸ ಪ್ರತಿಭೆಗಳಿಗೆ ನಷ್ಟವಾಗುತ್ತಿದ್ದು ವಿಮರ್ಶಕರು ಇದರತ್ತ ಮುಖ ಮಾಡಬೇಕಿದೆ' ಎಂದು ಸಲಹೆ ನೀಡಿದರು.

`ದ.ರಾ. ಬೇಂದ್ರೆ ಅವರಿಗೆ ಕೀರ್ತಿನಾಥ ಕುರ್ತಕೋಟಿ, ಕೆ.ಎಸ್. ನರಸಿಂಹಸ್ವಾಮಿ ಅವರಿಗೆ ವಿ. ಸೀತಾರಾಮಯ್ಯ, ಗೋಪಾಲಕೃಷ್ಣ ಅಡಿಗರಿಗೆ ಅನಂತಮೂರ್ತಿ ಅವರಿದ್ದಂತೆ ಪ್ರತಿಯೊಬ್ಬ ಲೇಖಕರಿಗೂ ಆಪ್ತ ಓದುಗನಿರಬೇಕು. ಆಗ ಮಾತ್ರ ಬರಹಗಾರ ಬೆಳೆಯಲು ಸಾಧ್ಯವಾಗುತ್ತದೆ' ಎಂದು ಎಚ್.ಎಸ್. ವೆಂಕಟೇಶಮೂರ್ತಿ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.