ADVERTISEMENT

ಕಂಬಾರರಿಗೆ ತವರಿನಲ್ಲೇ ಜ್ಞಾನಪೀಠ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST
ಕಂಬಾರರಿಗೆ ತವರಿನಲ್ಲೇ ಜ್ಞಾನಪೀಠ
ಕಂಬಾರರಿಗೆ ತವರಿನಲ್ಲೇ ಜ್ಞಾನಪೀಠ   

ಬೆಳಗಾವಿ: ಮಹಾನಗರ ಪಾಲಿಕೆ ವತಿಯಿಂದ `ಪೌರ ಸನ್ಮಾನ~ ಮಾಡಲು ಮರಾಠಿ ಭಾಷಿಕ ಸದಸ್ಯರು ಅಡ್ಡಿಪಡಿಸಿದ್ದ ನೆಲದಲ್ಲೇ ಡಾ. ಚಂದ್ರಶೇಖರ ಕಂಬಾರ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ `ಜ್ಞಾನಪೀಠ~ ಪ್ರಶಸ್ತಿ ಪ್ರದಾನ ಮಾಡಲಿರುವುದು ಕನ್ನಡ ಭಾಷೆಗಾಗಿ ಹೋರಾಡಿದ ಮನಸ್ಸುಗಳಲ್ಲಿ ನವ ಚೈತನ್ಯ ತಂದಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಪಾಲಿಕೆ ಸದಸ್ಯರಿಂದ ಅವಮಾನಕ್ಕೆ ಒಳಗಾಗಿದ್ದ ಕಂಬಾರರಿಗೆ ತವರು ಜಿಲ್ಲೆಯಲ್ಲೇ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ `ಜ್ಞಾನಪೀಠ~ ಅಲಂಕರಿಸುವ ಗೌರವ ಲಭಿಸಿದೆ. ಇಲ್ಲೇ ಪ್ರಶಸ್ತಿ ಸ್ವೀಕರಿಸಬೇಕು ಎಂಬ ಅವರ ಕನಸು ಇಲ್ಲಿನ ಮಹಾತ್ಮ ಗಾಂಧಿ ಭವನದಲ್ಲಿ ಇದೇ 11ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ನನಸಾಗಲಿದೆ.

ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನಡೆಯಬೇಕು ಎಂದು ಪ್ರತಿಪಾದಿಸಿದ್ದ ಕಂಬಾರರು 2010ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಸಂದರ್ಭದಲ್ಲಿ 2011 ಸೆಪ್ಟೆಂಬರ್ 22ರಂದು ನಡೆದ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅವರಿಗೆ `ಪೌರ ಸನ್ಮಾನ~ ಮಾಡಬೇಕು ಎಂಬ ಪ್ರಸ್ತಾವವನ್ನು ಕನ್ನಡ ಪರ ಸದಸ್ಯರು ಇಟ್ಟಿದ್ದರು.

ಆದರೆ, ಎಂಇಎಸ್ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಅಗೌರವ ತೋರಿದ್ದರು. ಎಂಇಎಸ್‌ನವರ ಪುಂಡಾಟಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪಾಲಿಕೆಯನ್ನೇ ಡಿಸೆಂಬರ್ 15ರಂದು `ಸೂಪರ್‌ಸೀಡ್~ ಮಾಡಿದ್ದು ಈಗ ಇತಿಹಾಸ.

`ಕಂಬಾರರಿಗೆ `ಪೌರ ಸನ್ಮಾನ~ ಮಾಡಲು ಪಾಲಿಕೆಯ ಮರಾಠಿ ಭಾಷಿಕ ಸದಸ್ಯರು ಅಡ್ಡಿಯಾದರೂ ಬೆಳಗಾವಿಯಲ್ಲಿಯೇ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರದಾನ ಮಾಡಬೇಕು ಎಂಬುದು `ದೈವ ಸಂಕಲ್ಪ~ವಾಗಿರಬೇಕು. ಈ ಸಮಾರಂಭದಲ್ಲಿ ಸಾಹಿತಿಗಳಿಗೆ ಹೆಚ್ಚು ಅವಕಾಶ ಕಲ್ಪಿಸುವ ಮೂಲಕ ಇದನ್ನು ಅತ್ಯುನ್ನತ ಸಾಹಿತ್ಯಿಕ ಕಾರ್ಯಕ್ರಮವನ್ನಾಗಿ ರೂಪಿಸಬೇಕು~ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT