ADVERTISEMENT

ಕಂಬಾರರಿಗೆ ಪ್ರಶಸ್ತಿ; ರಾಷ್ಟ್ರದ ಗಮನ ಕನ್ನಡದೆಡೆಗೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 20:05 IST
Last Updated 19 ಸೆಪ್ಟೆಂಬರ್ 2011, 20:05 IST
ಕಂಬಾರರಿಗೆ ಪ್ರಶಸ್ತಿ; ರಾಷ್ಟ್ರದ ಗಮನ ಕನ್ನಡದೆಡೆಗೆ
ಕಂಬಾರರಿಗೆ ಪ್ರಶಸ್ತಿ; ರಾಷ್ಟ್ರದ ಗಮನ ಕನ್ನಡದೆಡೆಗೆ   

ಕಂಬಾರರು ಆಡುಭಾಷೆಯ ಸೊಗಡಿನೊಂದಿಗೆ ಕಾವ್ಯ ಕಟ್ಟಿದರು. ಉತ್ತರ ಕರ್ನಾಟಕದ ಸಾಮಾನ್ಯರ ಬದುಕನ್ನು ಆರಿಸಿ ಕೃತಿಗಳನ್ನು ರಚಿಸಿದರು. ಅರ್ಹತೆಗೆ ತಕ್ಕೆ ಪ್ರಶಸ್ತಿ ಲಭಿಸಿದೆ.
 - ಡಾ.ಚಿದಾನಂದಮೂರ್ತಿ, ಸಂಶೋಧಕ

ಯಾರಿಗೆ ಪ್ರಶಸ್ತಿ ಸಿಗಬೇಕಿತ್ತೋ ಅವರಿಗೇ ಸಿಕ್ಕಿದೆ. ಎಂಟನೇ ಜ್ಞಾನಪೀಠ ದೊರೆತಿರುವುದರಿಂದ ಕನ್ನಡಕ್ಕೆ ಮತ್ತೊಂದು ಕೋಡು ಮೂಡಿದೆ. ಪ್ರಶಸ್ತಿ ಪಡೆಯುವ ಮೂಲಕ ರಾಷ್ಟ್ರದ ಗಮನವನ್ನು ಅವರು ಕನ್ನಡದೆಡೆಗೆ ಸೆಳೆದಿದ್ದಾರೆ.
 ಎಚ್.ಎಸ್.ವೆಂಕಟೇಶಮೂರ್ತಿ, ಕವಿ

ಕಂಬಾರರು ವರ್ತಮಾನ ಕಾಲದ ಸಾಂಸ್ಕೃತಿಕ ವಕ್ತಾರ. ನಮ್ಮಂತಹ ಕಿರಿಯ ತಲೆಮಾರನ್ನು ಪರವಶಗೊಳಿಸಿದ ಲೇಖಕ. ಪ್ರಶಸ್ತಿಯಿಂದ ಉತ್ತರ ಕರ್ನಾಟಕ ಭಾಷೆಗೆ ಶಕ್ತಿ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅವರ `ಶಿಖರ ಸೂರ್ಯ~ ಮತ್ತಿತರ ಕೃತಿಗಳು ಇಂಗ್ಲೀಷ್‌ನಲ್ಲಿ ರಚನೆಯಾಗಿದ್ದರೆ ಅವುಗಳಿಗೆ ನೊಬೆಲ್ ದೊರೆಯುತ್ತಿತ್ತು. ನಮ್ಮ ನಡುವೆ ಇಂತಹ ಲೇಖಕ ಇರುವುದೇ ಸಂತಸದ ವಿಚಾರ.
 - ಕುಂ.ವೀರಭದ್ರಪ್ಪ, ಕಥೆಗಾರ

ADVERTISEMENT

ಕಂಬಾರರು ನವ್ಯ ಕಾವ್ಯಕ್ಕೆ ಜಾನಪದದ ಎಳೆಯನ್ನು ತಂದು ಸೇರಿಸಿದರು. ಅವರ ಮೊದಲ ಕೃತಿ `ಹೇಳತೇನ ಕೇಳ~ದಿಂದಲೇ ಪ್ರತಿಭೆಯನ್ನು ಅರಿಯಬಹುದು. ಬಹಳ ಬಡತನವಿದ್ದರೂ ಸ್ವಂತಶಕ್ತಿಯಿಂದ ಮೇಲೆ ಬಂದರು. ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುವ ಅವರಿಗೆ ಇದು ದೊರೆಯಲೇ ಬೇಕಾದ ಪ್ರಶಸ್ತಿ.
 - ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಕವಿ

ಬೇಂದ್ರೆ ನಂತರ ಅಚ್ಚಗನ್ನಡದ ಹಿನ್ನೆಲೆಯಲ್ಲಿ ಸಾಹಿತ್ಯ ರಚಿಸಿದ್ದು ಕಂಬಾರರು ಮಾತ್ರ. ಅವರು ದೊಡ್ಡ ನಾಟಕಕಾರ. ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪಡೆಯುವ ಮೂಲಕ ಕನ್ನಡದ ಪ್ರತಿಷ್ಠೆ ಹೆಚ್ಚಿದೆ.
 - ಕೆ.ಮರುಳಸಿದ್ದಪ್ಪ, ಸಾಹಿತಿ

ಇದಕ್ಕಿಂತ ಸಂತೋಷ ಬೇರೆ ಏನಿದೆ? ಆಧುನಿಕ ಕಾವ್ಯದ ಜಾನಪದ ಸತ್ವಕ್ಕೆ ಮಹತ್ವ ಬಂದಂತಾಯಿತು. ಕನ್ನಡ ಸತ್ವ ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಯಿತು. ಕಂಬಾರರಿಗೆ ಅಭಿನಂದನೆಗಳು
 - ವೈದೇಹಿ, ಲೇಖಕಿ

ಕಂಬಾರರಿಗೆ ಪ್ರಶಸ್ತಿ ಬಂದಿರುವುದರಿಂದ ಜಾನಪದ ಜಗತ್ತಿಗೇ ಪ್ರಶಸ್ತಿ ಬಂದಂತಾಗಿದೆ. ಕಾವ್ಯಕ್ಕೆ ಜಾನಪದ ಸಂಸ್ಕಾರವನ್ನು ತಂದುಕೊಟ್ಟವರು ಅವರು. ಶಿಷ್ಟ ಪಂಥವನ್ನು ಮೀರಿ ಜಾನಪದ ನಾಟಕಗಳನ್ನು ರಚಿಸಿದರು. ಜಾನಪದ ಅಕಾಡೆಮಿ ಅವರನ್ನು ಅಭಿನಂದಿಸುತ್ತದೆ.
 - ಗೊ.ರು.ಚನ್ನಬಸಪ್ಪ,
 ಜಾನಪದ ಅಕಾಡೆಮಿ ಅಧ್ಯಕ್ಷ
ಕಂಬಾರರಲ್ಲಿ ಜಾನಪದ ಸೊಗಡು, ಆಧುನಿಕ ಸಂವೇದನೆ ಸಮ್ಮಿಲನಗೊಂಡಿದೆ. ವಸಾಹತುಶಾಹಿ ಹಾಗೂ ಜಾಗತೀಕರಣದ ಕ್ರೌರ್ಯವನ್ನು ಅವರ ಕೃತಿಗಳಲ್ಲಿ ಎದುರಿಸಿದ್ದಾರೆ.
 - ಡಾ.ಸಿದ್ದಲಿಂಗಯ್ಯ,
 ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ

ಕನ್ನಡಕ್ಕೆ ಇದೊಂದು ದೊಡ್ಡ ಆನಂದ. ಇದುವರೆಗೆ ಜ್ಞಾನಪೀಠ ಪಡೆದವರಿಗಿಂತಲೂ ಕಂಬಾರರ ಪ್ರತಿಭೆ ವಿಭಿನ್ನ, ಜಾಗತೀಕರಣದ ಬಗ್ಗೆ ದೇಸಿ ನೆಲೆಗಟ್ಟಿನಲ್ಲಿ ಚಿಂತಿಸಿದವರು.
 - ಅಗ್ರಹಾರ ಕೃಷ್ಣಮೂರ್ತಿ,
 ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ


`ಅತಿ ಸಂತೋಷವಾಗಿದೆ~ ಎಂದು ಧಾರವಾಡದ ಮನೋಹರ ಗ್ರಂಥಮಾಲೆಯ ಡಾ. ಡಾ.ರಮಾಕಾಂತ ಜೋಶಿ. ಹೇಳಿದರು.  1967ರಲ್ಲಿ ಅವರ ಸಂಗ್ಯಾಬಾಳ್ಯಾ ಹಾಗೂ 1969ರಲ್ಲಿ ಋಷ್ಯಶೃಂಗ ನಾಟಕಗಳನ್ನು ಮನೋಹರ ಗ್ರಂಥಮಾಲೆಯಿಂದ ಪ್ರಕಟಿದ್ದೆವು. ಬೇಂದ್ರೆ ತರುವಾಯ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ಬಳಸಿದವರು ಕಂಬಾರರು~ ಎಂದು ಜೋಶಿ ಖುಷಿಯಾಗಿ ಹೇಳಿದರು.
 -ರಮಾಕಾಂತ ಜೋಶಿ

ಕನಾಟಕ ತೆಲುಗು ಅಕಾಡೆಮಿ ಅಧ್ಯಕ್ಷ ರಾಧಾಕೃಷ್ಣರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಮೇಯರ್ ಶಾರದಮ್ಮ ಮತ್ತಿತರರು ಕಂಬಾರರಿಗೆ ತಮ್ಮ ಅಭಿನಂದನೆಯನ್ನು  ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.