ADVERTISEMENT

ಕನ್ನಡ ಧ್ವಜ: ಹೈಕಮಾಂಡ್ ಕೆಂಡ

ಸಿದ್ದರಾಮಯ್ಯ ಜೊತೆ ವೇಣುಗೋಪಾಲ್‌ ಚರ್ಚೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ಕನ್ನಡ ಧ್ವಜ: ಹೈಕಮಾಂಡ್ ಕೆಂಡ
ಕನ್ನಡ ಧ್ವಜ: ಹೈಕಮಾಂಡ್ ಕೆಂಡ   

ನವದೆಹಲಿ/ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕವಾದ ನಾಡಧ್ವಜ ರೂಪಿಸಿ, ಅದಕ್ಕೆ ಕಾನೂನು ಚೌಕಟ್ಟು ನೀಡುವುದಕ್ಕಾಗಿ ಒಂಬತ್ತು ಮಂದಿ ಸದಸ್ಯರ ಸಮಿತಿ ರಚಿಸಿರುವ ರಾಜ್ಯ ಸರ್ಕಾರದ ನಡೆಯಿಂದ ಸಿಟ್ಟಿಗೆದ್ದಿರುವ ಕಾಂಗ್ರೆಸ್‌ ಹೈಕಮಾಂಡ್‌, ಈ ಬಗ್ಗೆ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ನಡುವೆ, ‘ಯಾವುದೇ ರಾಜ್ಯವು ಪ್ರತ್ಯೇಕ ಧ್ವಜವನ್ನು ಹೊಂದುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಕೇಂದ್ರದ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ದೇಶವು ಒಂದೇ ಧ್ವಜ ಹೊಂದಿರಬೇಕು. ಈ ಸಂಬಂಧದ ಗೊಂದಲ ಕೊನೆಗೊಳಿಸುವಂತೆ ಮುಖ್ಯಮಂತ್ರಿಗೆ ಸೂಚಿಸಲಾಗಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ರಾಜ್ಯ ಸರ್ಕಾರ ವಜಾಕ್ಕೆ ಆಗ್ರಹ: ಈ ಮಧ್ಯೆ, ‘ಪ್ರತ್ಯೇಕ ಧ್ವಜದ ಬಗ್ಗೆ ಪ್ರಸ್ತಾಪಿಸಿರುವ ಕರ್ನಾಟಕ ಸರ್ಕಾರವು ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿದೆ. ಏಕತೆಗೆ ಭಂಗ ತರಲು ಯತ್ನಿಸುತ್ತಿರುವ ಈ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು’ ಎಂದು ಶಿವಸೇನೆ ವಕ್ತಾರ ಸಂಜಯ್‌ ರಾವತ್‌ ಆಗ್ರಹಿಸಿದ್ದಾರೆ.

‘ಯಾವುದೇ ರಾಜ್ಯವು ಪ್ರತ್ಯೇಕ ಧ್ವಜವನ್ನು ಹೊಂದುವುದು ಸಂವಿಧಾನ ವಿರೋಧಿಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಸಂವಿಧಾನ ತಜ್ಞ ಸುಭಾಷ್‌ ಕಶ್ಯಪ್‌ ಅಭಿಪ್ರಾಯಪಟ್ಟಿದ್ದಾರೆ.

ನಾಡಧ್ವಜ ರೂಪಿಸಲು ಸಮಿತಿ: ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸಿ, ಕಾನೂನು ಚೌಕಟ್ಟು ನೀಡಲು ಜೂನ್‌  6ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗೃಹ ಇಲಾಖೆ, ಕಾನೂನು ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರು ಸದಸ್ಯರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಬಿಜೆಪಿ ಆಕ್ಷೇಪ: ‘ರಾಜ್ಯಕ್ಕೆ ಪ್ರತ್ಯೇಕವಾದ ನಾಡಧ್ವಜ ಅಗತ್ಯವಿಲ್ಲ. ಸಂವಿಧಾನದ ಪ್ರಕಾರ ರಾಷ್ಟ್ರಕ್ಕೆ ಒಂದೇ ಧ್ವಜ ಇರಬೇಕು. ಕನ್ನಡ ಧ್ವಜಕ್ಕೆ ಮಾನ್ಯತೆ ಸಂಬಂಧ ಸಮಿತಿ ರಚನೆ ಮಾಡಿದ್ದೇ ಸರಿಯಲ್ಲ’ ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಆಕ್ಷೇಪವ್ಯಕ್ತಪಡಿಸಿದರು.

ನಾಡ ಧ್ವಜ ಇದ್ದರೆ ತಪ್ಪೇನಿಲ್ಲ: ಸಿದ್ದರಾಮಯ್ಯ

‘ಕರ್ನಾಟಕಕ್ಕೆ ನಾಡಧ್ವಜ ಇದ್ದರೆ ತಪ್ಪೇನು ಇಲ್ಲ. ಇದಕ್ಕೆ ಸಂವಿಧಾನದ ನಿರ್ಬಂಧವೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

‘ರಾಜ್ಯದಲ್ಲಿ ಈಗಾಗಲೇ ನಾಡಗೀತೆ ಅಧಿಕೃತವಾಗಿ ಇದೆ. ಅದೇ ರೀತಿ ನಾಡ ಧ್ವಜ ಇದ್ದರೆ ತಪ್ಪೇನೂ ಇಲ್ಲ. ಧ್ವಜ ರೂಪಿಸುವ ಸಂಬಂಧ ಸಮಿತಿ ರಚಿಸಲಾಗಿದೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಂಗಳವಾರ ತಿಳಿಸಿದರು.

‘ಕನ್ನಡ ನಾಡಧ್ವಜವನ್ನು ವಿನ್ಯಾಸಗೊಳಿಸಿ ಅದಕ್ಕೆ ಕಾನೂನಿನ ಸ್ವರೂಪ ನೀಡಬೇಕು ಎಂದು ಡಾ. ಪಾಟೀಲ ಪುಟ್ಟಪ್ಪ ಅವರೂ ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಾರರು ಮನವಿ ಸಲ್ಲಿಸಿದ್ದಾರೆ’ ಎಂದೂ ವಿವರಿಸಿದರು.

‘ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಧ್ವಜ ರಚನೆಗೆ ಸಮಿತಿ ಮಾಡಿದ್ದಲ್ಲ. 2018ರ ಮೇನಲ್ಲಿ ಚುನಾವಣೆ ಇದೆ. ಧ್ವಜ ಸಂಹಿತೆ ಕುರಿತು ಸಂವಿಧಾನದಲ್ಲಿ ಏನಿದೆ ಎಂಬುದನ್ನು ತಿಳಿದುಕೊಂಡು ಬಿಜೆಪಿ ನಾಯಕರು ಮಾತನಾಡಲಿ’ ಎಂದರು.

ಕನ್ನಡ ಧ್ವಜ ವಿವಾದ

2012ರಲ್ಲಿ  ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಮಂಡಿಸಿದ್ದ ಬಜೆಟ್‌ನಲ್ಲಿ ‘ನವೆಂಬರ್ 1 ರಂದು ರಾಜ್ಯದ ಎಲ್ಲ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ’  ಎಂದು  ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಸುತ್ತೋಲೆಯನ್ನೂ ಹೊರಡಿಸಲಾಗಿತ್ತು.

ಏತನ್ಮಧ್ಯೆ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದ ಪ್ರಕಾಶ ಶೆಟ್ಟಿ ಎಂಬುವರು, ‘ಕನ್ನಡ ಧ್ವಜವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಕೋರಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿದ್ದ  ಹೈಕೋರ್ಟ್‌, ಕನ್ನಡ ಧ್ವಜ ಅಧಿಕೃತವೇ ಎಂಬ ಬಗ್ಗೆ  ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿತ್ತು.

2012ರ ಅಕ್ಟೋಬರ್‌ 4ರಂದು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದ  ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ, ‘ಕನ್ನಡ ಧ್ವಜಾರೋಹಣ ಕಡ್ಡಾಯಗೊಳಿಸಿದ ಆದೇಶ ವಾಪಸ್ ಪಡೆಯಲಾಗಿದೆ’ ಎಂದು ಹೇಳಿತ್ತು.

* ಸಿದ್ದರಾಮಯ್ಯ ಅನಗತ್ಯವಾಗಿ ಈ ಗೊಂದಲ ಸೃಷ್ಟಿಸಿರುವುದು ಪಕ್ಷವನ್ನು ಮುಜುಗರಕ್ಕೆ ಈಡುಮಾಡಿದೆ

–ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.