ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ- ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಬೆಂಗಳೂರು: `ನಾವು ಬರೀ ರಾಜ್ಯವಾಳುವವರು ಮಾತ್ರ. ಪ್ರಶಸ್ತಿ ಪಡೆದ ಕಲಾವಿದರಾದ ಇವರು ರಾಜ್ಯದ ಜನತೆಯ ಮನಸ್ಸನ್ನು ನಿಜ ಅರ್ಥದಲ್ಲಿ ಆಳುವವರು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ 2009 ಮತ್ತು 2010 ನೆಯ ಸಾಲಿನ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಹಚ್ಚುವೆನು ಹಣತೆಯ, ಕತ್ತಲನು ಗೆಲುವೆನೆಂಬ ಜಿದ್ದಿನಿಂದಲ್ಲ..
ಹಣತೆಯ ಬೆಳಕಿನಲ್ಲಿ ನಿನ್ನ ಮುಖ ನಾ ಕಂಡು, ನನ್ನ ಮುಖ ನೀ ಕಂಡು...
ಒಬ್ಬರನ್ನೊಬ್ಬರ ಅರಿತು ಪ್ರೀತಿಸಬೇಕು..~

ಎಂದು ತಮಗೆ ಸ್ಫೂರ್ತಿಯಾದ ಚನ್ನವೀರ ಕಣವಿಯವರ ಕವನದ ಸಾಲುಗಳನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ನೆನಪಿಸಿಕೊಂಡರು.

`ಕಣವಿಯರ ಈ ಕವನ ಕತ್ತಲನ್ನು ಓಡಿಸಿ, ಬೆಳಕನ್ನು ಚೆಲ್ಲುವ ಕ್ರಮಕ್ಕೆ ಸ್ಫೂರ್ತಿಯಾಗುತ್ತದೆ. ಬೆಳಕಿನಲ್ಲೂ ನಾವು ಒಂದು ಹಣತೆಯನ್ನು ಬೆಳಗಿಸುತ್ತೇವೆ. ಏಕೆಂದರೆ, ಹಣತೆ ಕತ್ತಲನ್ನು ಓಡಿಸುವ ಬೆಳಕಿನ ಸಂಕೇತ.

ನಾವೆಲ್ಲ ಪ್ರೀತಿಯಿಂದ, ಭಾವನಾತ್ಮಕವಾಗಿ ಬದುಕಬೇಕು~ ಎಂದರು. `ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಳ್ಳಿಯ ಪ್ರತಿ ಮೂಲೆಯಲ್ಲಿರುವ ಕಲಾವಿದರನ್ನು ಗುರುತಿಸಿ, ಅವರ ಕಲೆಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಿದೆ. ಜಾನಪದ ಶ್ರೀ ಪ್ರಶಸ್ತಿ ಪಡೆದ ಪುಟ್ಟಮಲ್ಲೇಗೌಡ ಮತ್ತು ದರೋಜಿ ಈರಮ್ಮನವರು ಇದಕ್ಕೆ ಸಾಕ್ಷಿಯಾಗಿದ್ದಾರೆ~ ಎಂದರು.

`ಯಾವುದೇ ಕಲಾವಿದನಿಗೆ ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸಿದರೆ, ಅವರಿಗೆ ಆಗುವ ಆನಂದ ಅಷ್ಟಿಷ್ಟಲ್ಲ. ಅಂತಹ ಆನಂದವನ್ನು ಇಲ್ಲಿ ನಾವು ಕಾಣಬಹುದು. ಯಾವುದೇ ಕಲಾವಿದನಿಗೆ ಮನ್ನಣೆ ದೊರೆತರೆ ಅವನ ಬಾಳು ಸಾರ್ಥಕವಾಗುತ್ತದೆ~ ಎಂದರು.

`ರಂಗಭೂಮಿ ಕ್ಷೇತ್ರಕ್ಕೆ ಆಯವ್ಯಯದಲ್ಲಿ  5 ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡಬೇಕು~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಎಂ.ಕಾರಜೋಳ ಅವರು  ಮುಖ್ಯಮಂತ್ರಿಗಳಲ್ಲಿ ಮನವಿ  ಮಾಡಿದರು.

`ಟಿ.ಚೌಡಯ್ಯ ಪ್ರಶಸ್ತಿಯನ್ನು 1 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಅಲ್ಲದೇ, ಉಳಿದ ಪ್ರಶಸ್ತಿಗಳನ್ನು 3 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಇದು ಕಲಾವಿದರ ಬದುಕಿನ ಸಾಧನೆಗೆ ನೀಡುವ ಅತಿ ಚಿಕ್ಕ ಗೌರವವಾಗಿದೆ~ ಎಂದು ಹೇಳಿದರು.

`ಎಲ್ಲ ಕಲಾವಿದರು ತಮ್ಮ ಕುಲಕಸುಬನ್ನು ಮುಂದುವರಿಸಿ ಅತಿ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಅಂತಹವರಿಗೆ ಪ್ರೋತ್ಸಾಹ ನೀಡುವ ಕಾರ್ಯ ಇನ್ನೂ ಬಹಳಷ್ಟು ಆಗಬೇಕಾಗಿದೆ~ ಎಂದರು.

`ಕಲಾವಿದ ತನ್ನ ಆನಂದಕ್ಕಾಗಿ, ಬಾಳಿನ ಸಾರ್ಥಕತೆಗಾಗಿ ಕಲೆಯನ್ನು ಆರಾಧಿಸುತ್ತಾರೆ~ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಹೇಳಿದರು.

`ಇಲ್ಲಿ ಯಾವುದೇ ಜಾತಿ, ಭಾಷೆ ಮತ್ತು ಪ್ರಾದೇಶಿಕತೆಯ ಸುಳಿವಿಲ್ಲದೆ, ಎಲ್ಲ ಕಲಾವಿದರನ್ನು ಗುರುತಿಸುವ ಕಾರ್ಯವಾಗಿರುವುದು ಸಂತಸ ನೀಡಿದೆ~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ, ಶಾಸಕ ಡಾ.ಡಿ.ಹೇಮಚಂದ್ರ ಸಾಗರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಡಾ.ಮನು ಬಳಿಗಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು  ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತ ಕಲಾವಿದರು

ವಾದ್ಯ ಸಂಗೀತ ಕ್ಷೇತ್ರದ ಟಿ.ಚೌಡಯ್ಯ ಪ್ರಶಸ್ತಿಯನ್ನು ಎನ್. ರಾಜಮ್, ರಂಗಭೂಮಿಯ ಡಾ.ಗುಬ್ಬಿವೀರಣ್ಣ ಪ್ರಶಸ್ತಿಯನ್ನು ಪಿ.ವಜ್ರಪ್ಪ, ಪ್ರಮೀಳಮ್ಮ ಗುಡೂರ, ನೃತ್ಯ ಕ್ಷೇತ್ರದ ಶಾಂತಲಾ ನಾಟ್ಯ ಪ್ರಶಸ್ತಿಯನ್ನು ಉಳ್ಳಾಲ ಮೋಹನ್ ಕುಮಾರ್, ರಾಧಾ ಶ್ರೀಧರ್, ಶಿಲ್ಪ ಕಲೆಯ ಜಕಣಾಚಾರಿ ಪ್ರಶಸ್ತಿಯನ್ನು ಕೆ.ಸಿ.ಪುಟ್ಟಣ್ಣಾಚಾರ್, ವೆಂಕಟಾಚಲಪತಿ, ಸುಗಮ ಸಂಗೀತ ಕ್ಷೇತ್ರದ ಸಂತ ಶಿಶುನಾಳ ಷರೀಫ್ ಪ್ರಶಸ್ತಿಯನ್ನು ಟಿ.ವಿ.ರಾಜು, ಬಿ.ಕೆ.ಸುಮಿತ್ರ, ಸಾಹಿತ್ಯ ಆಧಾರಿತವಾದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ಶಾಂತಾದೇವಿ ಕಣವಿ, ಡಾ.ಸುಧಾಮೂರ್ತಿ, ಜಾನಪದ ಶ್ರೀ ಪ್ರಶಸ್ತಿ ಪುಟ್ಟಮಲ್ಲೇಗೌಡ, ದರೋಜಿ ಈರಮ್ಮ, ಕುಮಾರವ್ಯಾಸ ಪ್ರಶಸ್ತಿಯನ್ನು ರಘುಪತಿ ಶಾಸ್ತ್ರಿ ಅವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.