ADVERTISEMENT

`ಕಪಟರಿಂದ ಸಂಸ್ಕೃತಿ ರಕ್ಷಣೆ ಬೇಡ'

ಎಂ.ನಾಗರಾಜ
Published 10 ಫೆಬ್ರುವರಿ 2013, 19:59 IST
Last Updated 10 ಫೆಬ್ರುವರಿ 2013, 19:59 IST
ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ನಡೆದ `ವರ್ತಮಾನದ ತಲ್ಲಣಗಳು' ಗೋಷ್ಠಿಯಲ್ಲಿ ಚಿಂತಕರಾದ ಡಾ. ಕೆ.ನೀಲಾ, ಡಾ. ನಟರಾಜ್ ಹುಳಿಯಾರ್, ಕರ್ನಾಟಕ ಜನಶಕ್ತಿ ವೇದಿಕೆ ಸಂಚಾಲಕ ಡಾ. ವಾಸು, ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಭಾಗವಹಿಸಿದ್ದರು.
ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ನಡೆದ `ವರ್ತಮಾನದ ತಲ್ಲಣಗಳು' ಗೋಷ್ಠಿಯಲ್ಲಿ ಚಿಂತಕರಾದ ಡಾ. ಕೆ.ನೀಲಾ, ಡಾ. ನಟರಾಜ್ ಹುಳಿಯಾರ್, ಕರ್ನಾಟಕ ಜನಶಕ್ತಿ ವೇದಿಕೆ ಸಂಚಾಲಕ ಡಾ. ವಾಸು, ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಭಾಗವಹಿಸಿದ್ದರು.   

ವಿಜಾಪುರ: ರಾಜ್ಯದಲ್ಲಿ ಅದೂ ದಕ್ಷಿಣ ಕನ್ನಡದಲ್ಲಿ ತಲೆಎತ್ತಿರುವ ನೈತಿಕ ಪೊಲೀಸ್ ಹಾಗೂ ವ್ಯವಸ್ಥೆ ವಿರುದ್ಧದ ಧ್ವನಿಗೆ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ `ವರ್ತಮಾನದ ತಲ್ಲಣಗಳು' ಗೋಷ್ಠಿ ಭಾನುವಾರ ಸಾಕ್ಷಿಯಾಯಿತು.

ಗೋಷ್ಠಿಯಲ್ಲಿ ಮಾತನಾಡಿದ, ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್, ಡಾ. ನಟರಾಜ್ ಹುಳಿಯಾರ್, ಕೆ.ನೀಲಾ ಅವರು ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ಕಪಟ ರಕ್ಷಕರು ಮುಗ್ಧ ಜನರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದಾಗ ಕಂಠಿ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಜನಸ್ತೋಮ ಚಪ್ಪಾಳೆ ತಟ್ಟಿ ಸ್ವಾಗತಿಸಿತು.

ಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ ಡಾ. ಬಂಜಗೆರೆ, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದು ಕುವೆಂಪು ಅವರು ಹೇಳಿದರೆ, ನೈತಿಕ ಪೊಲೀಸರು ಪಬ್‌ಗಳಲ್ಲಿ ಕುಳಿತವರು, ಕಾರುಗಳಲ್ಲಿ ಓಡಾಡುವ ಜೋಡಿಗಳನ್ನು ನೋಡಿ, ಅನ್ಯ ಕೋಮಿನವರೊಂದಿಗೆ ಹೆಣ್ಣು ಮಕ್ಕಳಿದ್ದರೆ ಹಿಡಿದು ಥಳಿಸುವ ಹೀನ ಕೃತ್ಯಕ್ಕಿಳಿಯುತ್ತಿದ್ದಾರೆ.

ಈ ಕಪಟ ಸಂಸ್ಕೃತಿ ರಕ್ಷಕರಿಗೆ ನೀವು ಹೇಳಿದ ಲಾಂಛನದ ಅಡಿಯಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆಯಾಗುವುದು ಬೇಡ ಎಂಬುದನ್ನು ಸಾಹಿತ್ಯ ಸಮ್ಮೇಳನ ಗಟ್ಟಿ ಧ್ವನಿಯಲ್ಲಿ ಹೇಳಬೇಕು' ಎಂದು ಪೀಠಿಕೆ ಹಾಕಿದರು. ಇದನ್ನು ಪುಷ್ಟೀಕರಿಸಿದ ಡಾ. ನೀಲಾ, ಸನಾತನ ಮತ್ತು ಪಾಳೆಗಾರಿಕೆ ವ್ಯವಸ್ಥೆ ಜನಸಾಮಾನ್ಯರು ಬದುಕಬಾರದು ಎಂದು ಭಾವಿಸಿರುವಂತಿದೆ. ಸಂಸ್ಕೃತಿ ಮೇಲೆ ದಾಳಿ ನಡೆಸುವುದಕ್ಕಾಗಿಯೇ   1925ರಲ್ಲಿ ಆರ್‌ಎಸ್‌ಎಸ್ ಜನ್ಮ ತಳೆಯಿತು.

ದೆಹಲಿಯಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದ ಘಟನೆ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆಯ ಬಗ್ಗೆ ಚಿಂತನೆ ನಡೆಸಿ, ಅವರನ್ನು ಪ್ರಶ್ನಿಸಬೇಕು ಎಂದರು. ದಲಿತ, ರೈತ, ಮಹಿಳಾ, ಬಂಡಾಯ ಚಳವಳಿಗಳೆಲ್ಲವೂ ಒಟ್ಟಾಗಿ ಜನತೆ ಪರವಾದ ಸಾಂಸ್ಕೃತಿಕ ರಾಜಕಾರಣಕ್ಕಾಗಿ ಜನತೆಯ ಮುಂದೆ ಹೋಗಬೇಕಿದೆ ಎಂದರು.

ಚುನಾವಣಾ ಪ್ರಣಾಳಿಕೆಯಲ್ಲಿ ್ಙ 2 ಗೆ ಒಂದು ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿದ್ದ ಬಿಜೆಪಿ, ನಾಲ್ಕೂವರೆ ವರ್ಷದ ಆಡಳಿತದ ನಂತರ  ಮುಂದಿನ ವರ್ಷದಿಂದ ್ಙ 2 ಗೆ ಅಕ್ಕಿ ಕೊಡುವುದಾಗಿ ಪ್ರಕಟಿಸಿದೆ. ಇದು ನಾಚಿಕೆಗೇಡು ಹಾಗೂ ನಾಡಿನ ದುರಂತ. ಮತಕ್ಕಾಗಿ ಸರ್ಕಾರ ಈ ಯೋಜನೆಯನ್ನು ಪ್ರಕಟಿಸಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಅವರ ಭಾಷಣ ಆಲಿಸಿದ ಜನತೆ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಒಂದು ಹಂತದಲ್ಲಿ, ನರಹತ್ಯೆ ಮಾಡಿದ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಬಿಜೆಪಿ ಹೊರಟಿದೆ ಎಂದು ನೀಲಾ ಅವರು ಹೇಳಿದಾಗ, ಕೆಲವರು ಕೂಗಿದರು. ನಂತರ ಈ ವಿಚಾರವನ್ನು ನೀಲಾ ಮುಂದುವರಿಸಲಿಲ್ಲ. ಆರ್ಥಿಕತೆಯ ಚಲನೆ ಕುರಿತು ಮಾತನಾಡಿದ ಕರ್ನಾಟಕ ಜನಶಕ್ತಿ ವೇದಿಕೆ ಡಾ. ವಾಸು, `ಶುಕ್ರವಾರ ಮಂಡನೆಯಾದ ರಾಜ್ಯ ಸರ್ಕಾರದ ಬಜೆಟ್ ಐದು ವರ್ಷದ ಹಿಂದೆಯೇ ತೀರ್ಮಾನವಾಗಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಹೇಗೆ ರೂಪುಗೊಳ್ಳಬೇಕು ಎಂಬುದಕ್ಕೆ ಕಾನೂನು ರಚನೆಯಾಗಿದೆ. ಬಜೆಟ್ ಬಗೆಗಿನ ಕಾತರ, ಚರ್ಚೆ ಎಲ್ಲವೂ ಹಾಸ್ಯಾಸ್ಪದ. ಇದು ಬೋಗಸ್' ಎಂದರು. ಆರ್ಥಿಕ ಚಲನೆ ಒಂದೇ ದಿಕ್ಕಿನತ್ತ ಸಾಗಿದೆ. ಎಂಟು ವರ್ಷದಲ್ಲಿ ಸಂಪೂರ್ಣ ನೀರಾವರಿ ಸೌಲಭ್ಯ ಪಡೆದಿರುವ ಬಾಗಲಕೋಟೆಯ ಇಂಗಳಗಿಯಲ್ಲಿ ಯಥೇಚ್ಛವಾಗಿ ಕಬ್ಬು ಬೆಳೆಯಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ನಾಯಿಕೊಡೆಯಂತೆ ಹುಟ್ಟಿಕೊಳ್ಳುತ್ತಿವೆ.

ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ಸಕ್ಕರೆ ಉದ್ಯಮಿಗಳು ನಿಯಂತ್ರಿಸುತ್ತಿದ್ದಾರೆ. ಅದಕ್ಕೆ ಮೂಲ ಕಾರಣ ಇಥೆನಾಲ್. ಇಥೆನಾಲ್‌ಗೆ ಜಾಗತಿಕ ಮಾರುಕಟ್ಟೆ ಇದೆ. ಮುಂದಿನ ಐದು ವರ್ಷದಲ್ಲಿ ಇಂಗಳಗಿ ಗ್ರಾಮದಲ್ಲಿ ಕಬ್ಬು ಬೆಳೆಯಲು ಭೂಮಿಯೂ ಸಿಗುವುದಿಲ್ಲ. ಬಹುತೇಕ ಎಲ್ಲೆಡೆ ಸಕ್ಕರೆ ಕಾರ್ಖಾನೆಗಳೇ ನಿರ್ಮಾಣವಾಗಬಹುದು ಎಂದು ಪರೋಕ್ಷವಾಗಿ ಎಚ್ಚರಿಸಿದರು.

ಸಾಂಸ್ಕೃತಿಕ ಚಲನೆ ಕುರಿತು ಮಾತನಾಡಿದ ಡಾ. ನಟರಾಜ್ ಹುಳಿಯಾರ್, ಭಾಷೆ, ಧರ್ಮ ಮತ್ತು ಪೂರ್ವಗ್ರಹವನ್ನು ಬಳಸಿಕೊಂಡು ಸಂಸ್ಕೃತಿ ಉತ್ಪಾದಿಸುವ ಕೆಲಸ ನಡೆದಿದೆ. ಧರ್ಮ ಕೂಡ ಮಾರುಕಟ್ಟೆಯ ಸರಕು ಆಗಿದೆ ಎಂದರು.
ಜಿ.ಬಿ.ನಾಗರಾಜ್ ಸ್ವಾಗತಿಸಿದರು. ವೈ.ಎಲ್.ಹನುಮಂತರಾವ್ ವಂದಿಸಿದರು.

ಏಕರೂಪ ಶಿಕ್ಷಣವೇ ಮದ್ದು

ADVERTISEMENT

ಶಿಕ್ಷಣ ಹಕ್ಕು ಜಾರಿ ಮೂಲಕ ಖಾಸಗಿ ಸಂಸ್ಥೆಗಳಿಗೆ ಅನುದಾನ ನೀಡುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಇದರ ಬದಲು ಪ್ರಗತಿಪರ ಸಂಘಟನೆಗಳು ಸುಮಾರು 25 ವರ್ಷಗಳಿಂದ ಒತ್ತಾಯಿಸುತ್ತಿರುವಂತೆ ಎಲ್ಲರಿಗೂ ಏಕರೂಪ, ಕಡ್ಡಾಯ ಶಿಕ್ಷಣ ಜಾರಿಗೊಳಿಸಬೇಕು.
- ಡಾ. ಬಂಜಗೆರೆ ಜಯಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.