ADVERTISEMENT

ಕಬ್ಬಿನ ದರ ನಿಗದಿಗೆ ಸುಗ್ರೀವಾಜ್ಞೆ?

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ಸುವರ್ಣ ವಿಧಾನಸೌಧ (ಬೆಳಗಾವಿ): ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವ ಸಂಬಂಧ ಪ್ರತಿವರ್ಷ ಎದುರಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಜಾರಿ ಆಗಿರುವ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಮಸೂದೆಯನ್ನು ಈ ಸಲದ ಅಧಿವೇಶನದಲ್ಲೇ ಮಂಡಿಸಲು ಸಿದ್ಧತೆ ನಡೆಸಲಾಗಿದೆ. ಒಂದು ವೇಳೆ ತಕ್ಷಣಕ್ಕೆ ಸಾಧ್ಯವಾಗದಿದ್ದರೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬುಧವಾರ ವಿಧಾನಸಭೆಗೆ ತಿಳಿಸಿದರು.

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳ ಕಬ್ಬು ಬೆಳೆಗಾರರು ಸೂಕ್ತ ದರ ನಿಗದಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬುಧವಾರ ವಿಫಲಯತ್ನ ಕೂಡ ನಡೆಸಿದರು. ಮುಖ್ಯಮಂತ್ರಿ ಜತೆಗೂ ಮಾತುಕತೆ ನಡೆಸಿದರು.

ಈ ವಿಷಯವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರು ನಿಯಮ 69ರಡಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ, ಸೂಕ್ತ ಬೆಲೆಗೆ ಆಗ್ರಹಪಡಿಸಿದರು.

ಸುದೀರ್ಘ ಚರ್ಚೆ ನಂತರ ಮುಖ್ಯಮಂತ್ರಿ ಮಾತನಾಡಿ, `ಕಬ್ಬಿಗೆ ದರ ನಿಗದಿಪಡಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವೂ ಇಲ್ಲ. ಆದರೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಮಾತುಕತೆ ನಡೆಸುವುದರ ಮೂಲಕ ರೈತ ಪರವಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾ ಬಂದಿದೆ.

ಇತ್ತೀಚೆಗೆ ಇದು ಹೆಚ್ಚು ಸಮಸ್ಯೆಯಾಗುತ್ತಿರುವ ಕಾರಣ ಅದಕ್ಕೊಂದು ಕಾಯ್ದೆಯ ರೂಪ ನೀಡಲು ತೀರ್ಮಾನಿಸಲಾಗಿದೆ' ಎಂದು ಅವರು ಹೇಳಿದರು.

`ಸಾಧ್ಯವಾದರೆ ಬೆಳಗಾವಿ ಅಧಿವೇಶನದಲ್ಲೇ ಮಸೂದೆ ಮಂಡಿಸಲಾಗುವುದು. ಇದಕ್ಕೆ ಪೂರಕವಾದ ತಯಾರಿ ನಡೆದಿದೆ. ಎಸ್.ಎ.ಪಿ. ಜಾರಿ ಮಾಡಿರುವ ರಾಜ್ಯಗಳಲ್ಲಿನ ಮಾಹಿತಿಯನ್ನೂ ತರಿಸಿಕೊಂಡು ರೈತ ಪರವಾದ ಮಸೂದೆ ರೂಪಿಸಲಾಗುವುದು. ಒಂದು ವೇಳೆ ಸಾಧ್ಯವಾಗದಿದ್ದರೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗುವುದು. ಒಟ್ಟಿನಲ್ಲಿ ಶಾಶ್ವತ ಪರಿಹಾರಕ್ಕೆ ಏನೆಲ್ಲ ಮಾಡಬೇಕೊ ಅದನ್ನು ಮಾಡಿಯೇ ಮಾಡುತ್ತೇವೆ' ಎಂದು ವಿವರಿಸಿದರು.

ಸಕ್ಕರೆ ಕಾರ್ಖಾನೆ ಮಾಲೀಕರು, ಉಪ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ರೈತರಿಗೆ ಹಂಚಿಕೆ ಮಾಡುವುದಕ್ಕೂ ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದೂ ಅವರು ಹೇಳಿದರು. ಮುಖ್ಯಮಂತ್ರಿಯವರ ತೀರ್ಮಾನಕ್ಕೆ ಪ್ರತಿಪಕ್ಷ ಗಳಿಂದ ಮೆಚ್ಚುಗೆ ವ್ಯಕ್ತವಾಯಿತು.

ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, `ದೇಶದ ಇತರ ರಾಜ್ಯಗಳಲ್ಲಿ ಪ್ರತಿ ಟನ್ ಕಬ್ಬಿಗೆ 3,000 ರೂಪಾಯಿಗೂ ಹೆಚ್ಚು ದರ ನೀಡುತ್ತಿದ್ದು, ಈ ವ್ಯವಸ್ಥೆ ರಾಜ್ಯದಲ್ಲೂ ಜಾರಿ ಆಗಬೇಕು' ಎಂದು ಆಗ್ರಹಿಸಿದರು.

ಕಾರ್ಖಾನೆಗಳು ನಷ್ಟದಲ್ಲಿವೆ ಎಂದು ಹೇಳುವ ಅವುಗಳ ಮಾಲೀಕರು ಹೊಸ ಕಾರ್ಖಾನೆಗಳನ್ನು ಸ್ಥಾಪಿಸುತ್ತಲೇ ಇದ್ದಾರೆ. ನಷ್ಟ ಆಗುತ್ತಿದ್ದರೆ ಹೊಸ ಕಾರ್ಖಾನೆಗಳನ್ನು ಏಕೆ ಆರಂಭಿಸುತ್ತಿದ್ದರು ಎಂದು ಸಚಿವರಾದ ಉಮೇಶ ಕತ್ತಿ ಮತ್ತು ಮುರುಗೇಶ್ ನಿರಾಣಿ ಅವರನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು. ಇವರು ಸ್ವತಃ ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಆದ ಕಾರಣ ಅವರ ವಿರುದ್ಧ ಬಾಣಗಳನ್ನೂ ಬಿಟ್ಟರು. ಬಳಿಕ ಉಮೇಶ ಕತ್ತಿ ಮಾತನಾಡಿ, `ನಮ್ಮ ಬಳಿ ಸಕ್ಕರೆ ಕಾರ್ಖಾನೆಗಳು ಇರುವುದು ಲಾಭ ಮಾಡುವ ಉದ್ದೇಶದಿಂದ ಅಲ್ಲ. ರಾಜಕಾರಣಕ್ಕಾಗಿ ಸಕ್ಕರೆ ಕಾರ್ಖಾನೆಗಳು ಬೇಕಾಗಿವೆ' ಎಂದು ಹೇಳಿದರು.

`ಮಹಾರಾಷ್ಟ್ರದಲ್ಲಿ ರಾಜಕಾರಣಿಗಳು ಒಂದಕ್ಕಿಂತ ಹೆಚ್ಚು ಕಾರ್ಖಾನೆಗಳ ಒಡೆಯರು. ಅವರು ಕೂಡ ರಾಜಕೀಯಕ್ಕೆ ಅದನ್ನು ಬಳಸಿಕೊಂಡಿದ್ದಾರೆ. ಅದೇ ಸಂಪ್ರದಾಯ ಈ ಭಾಗದಲ್ಲೂ ಇದೆ' ಎಂದು ಅವರು ವಿವರಿಸಿದರು. ಈ ತರ್ಕವನ್ನು ಸಿದ್ದರಾಮಯ್ಯ ಒಪ್ಪಲಿಲ್ಲ.

ಮತ್ತೊಬ್ಬ ಸಕ್ಕರೆ ಕಾರ್ಖಾನೆ ಮಾಲೀಕರೂ ಆದ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, `5-10 ಸಾವಿರ ಟನ್ ಕಬ್ಬು ಅರೆಯುವ ಕಾರ್ಖಾನೆಗಳಿಗೆ 30ರಿಂದ 50 ಕೋಟಿ ರೂಪಾಯಿ ಲಾಭ ಬರುತ್ತದೆ ಎನ್ನುವುದು ಸುಳ್ಳು. ಒಂದು ವೇಳೆ ಅದು ನಿಜವೇ ಆಗಿದ್ದರೆ ನಾಳೆಯಿಂದ ನೀವೇ ಕಾರ್ಖಾನೆಯನ್ನು ವಹಿಸಿಕೊಳ್ಳಿ' ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದರು.
`ನನಗೆ ಕಾರ್ಖಾನೆ ನಡೆಸುವುದು ಗೊತ್ತಿಲ್ಲ. ಹೀಗಾಗಿ ಆ ವ್ಯವಹಾರಕ್ಕೆ ಬರುವುದಿಲ್ಲ' ಎಂದ ಅವರು ರೈತರ ಪರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಸಚಿವರಲ್ಲಿ ಮನವಿ ಮಾಡಿದರು.

ಜೆಡಿಎಸ್‌ನ ಎಚ್.ಡಿ.ರೇವಣ್ಣ ಮಾತನಾಡಿ, ಬಾದಾಮಿ ತಾಲ್ಲೂಕಿನ ಕೇದಾರನಾಥ ಸಕ್ಕರೆ ಕಾರ್ಖಾನೆ ರೈತರಿಗೆ ಬಾಕಿ ಉಳಿಸಿಕೊಂಡಿದ್ದು, ಆದಷ್ಟು ಬೇಗ ಕೊಡಿಸಬೇಕು ಎಂದು ಆಗ್ರಹಪಡಿಸಿದರು.

ಜೆಡಿಎಸ್‌ನ ಸುಭಾಷ್ ಗುತ್ತೇದಾರ್, ಬಂಡೆಪ್ಪ ಕಾಶಂಪುರ, ಬಿಜೆಪಿಯ ಸಿದ್ದು ಸವದಿ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ಇತರರು ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.