ADVERTISEMENT

ಕಲಿತ ವೈದ್ಯ ಪದ್ಧತಿಯಲ್ಲೇ ಚಿಕಿತ್ಸೆ ನೀಡಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST

ಮಂಗಳೂರು: ~ವೈದ್ಯರು ವ್ಯಾಸಂಗ ನಡೆಸಿದ ಪದ್ಧತಿಯನ್ನು ಹೊರತು ಪಡಿಸಿ ಬೇರೆ ವೈದ್ಯಪದ್ಧತಿಯಲ್ಲಿ ಚಿಕಿತ್ಸೆ ನೀಡುವುದು ಅಪರಾಧ~ ಎಂದು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ ಮಾಜಿ ಸದಸ್ಯ ಡಾ.ಪಿ.ಡಿ.ಶೆಣೈ ಹೇಳಿದರು.

ಯುನೆಸ್ಕೊದ ಜೈವಿಕ ನೀತಿಸಂಹಿತೆ (ಬಯೊಎಥಿಕ್ಸ್) ಪೀಠದ ದಕ್ಷಿಣ ಭಾರತದ ಘಟಕ ಹಾಗೂ ಫಾದರ್ ಮುಲ್ಲರ್ಸ್‌ ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ, ಕಾಲೇಜಿನ ವಿಂಶತಿ ಸ್ಮಾರಕ ಭವನದಲ್ಲಿ ಮಂಗಳವಾರ ಅವರು ವೈದ್ಯಕೀಯ ನಿರ್ಲಕ್ಷ ಕುರಿತು ಉಪನ್ಯಾಸ ನೀಡಿದರು.

`ವೈದ್ಯರು ರೋಗಿಗಳ ಪರೀಕ್ಷೆಗೆ ಸರಾಸರಿ ಒಂದು ನಿಮಿಷಕ್ಕೂ ಕಡಿಮೆ ಅವಧಿಯನ್ನು ವಿನಿಯೋಗಿಸುತ್ತಾರೆ. ಶೇ 33ರಷ್ಟು ರೋಗಿಗಳಿಗೆ ಔಷಧಿಯನ್ನು ಸೇವಿಸುವ ವಿಧಾನವೇ ಸಮರ್ಪಕವಾಗಿ ತಿಳಿದಿರುವುದಿಲ್ಲ. ಶೇ 20ರಿಂದ 50ರಷ್ಟು ಔಷಧಿಗಳೇ ಲಭ್ಯ ಇಲ್ಲ. ಶೇ 66ರಷ್ಟು ಜೀವರಕ್ಷಕ ಔಷಧಿಗಳನ್ನು ವೈದ್ಯರ ಸೂಚನೆ ಇಲ್ಲದೆಯೇ ಮಾರಲಾಗುತ್ತದೆ~ ಎಂದು ಅವರು ಅಂಕಿ-ಅಂಶ ಸಹಿತ ವಿವರಿಸಿದರು.

ಇತ್ತೀಚಿನ ದಿನಗಳಲ್ಲಿ ಸಹಜ ಹೆರಿಗೆ ಬದಲು ಸಿಜೇರಿಯನ್‌ಗಳು ಮಿತಿ ಮೀರಿ ಹೆಚ್ಚುತ್ತಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.ವೈದ್ಯರ ನಿರ್ಲಕ್ಷ್ಯದಿಂದ ರೋಗಿ ತೊಂದರೆಗೊಳಗಾದರೆ ಜಿಲ್ಲಾ ಮಟ್ಟದ ಗ್ರಾಹಕರ ವೇದಿಕೆಯಲ್ಲಿ ದೂರು ನೀಡಬಹುದು. 20 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾದ ಪ್ರಕರಣಗಳನ್ನು ಜಿಲ್ಲಾ ಮಟ್ಟದಲ್ಲೇ ಬಗೆಹರಿಸಬಹುದು. ಗ್ರಾಹಕರ ಆಯೋಗ ಅಥವಾ ರಾಷ್ಟ್ರೀಯ ಆಯೋಗಗಳಿಗೂ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ~ ಎಂದರು.

`ಎಲ್ಲಾ ಸೇವೆಯನ್ನು ಉಚಿತವಾಗಿ ನೀಡುವ ಆಸ್ಪತ್ರೆ ವಿರುದ್ಧ ರೋಗಿಯು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಲು ಅವಕಾಶವಿಲ್ಲ. ಶುಲ್ಕ ಪಡೆದು ಚಿಕಿತ್ಸೆ ನೀಡುವ ಆಸ್ಪತ್ರೆಗಳ ವೈದ್ಯರ ನಿರ್ಲಕ್ಷ್ಯದ ಬಗ್ಗೆ ದೂರು ನೀಡಬಹುದು. ವೈದ್ಯರ ವಿರುದ್ಧ ನಿರ್ಲಕ್ಷ್ಯ    ಪ್ರಕರಣ ದಾಖಲಿಸಿದರೂ ಈ ಆಧಾರದಲ್ಲಿ ಪೊಲೀಸರು ವೈದ್ಯರನ್ನು ಬಂಧಿಸುವಂತಿಲ್ಲ~ ಎಂದರು.

ಫಾದರ್ ಮುಲ್ಲರ್ಸ್‌ ವೈದ್ಯಕೀಯ ಕಾಲೇಜಿನ ಡೀನ್ ಡಾ.ಜೆ.ಪಿ.ಆಳ್ವ, ಮುಖ್ಯ ವೈದ್ಯಾಧಿಕಾರಿ ಡಾ.ಸಂಜೀವ ರೈ, ಯುನೆಸ್ಕೊ ಪೀಠದ ಡಾ.ಪ್ರಿನ್ಸಿ ಲೂಯಿಸ್ ಪಲಾಟಿ, ಕಾರ್ಯದರ್ಶಿ ಡಾ.ನಾಗೇಶ್ ಕೆ.ಆರ್., ಮೂಳೆರೋಗ ವಿಭಾಗದ ಮುಖ್ಯಸ್ಥ ಜೇಕಬ್ ಚಾಕೊ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.