ADVERTISEMENT

ಕಲ್ಮನೆ: ಶಾತವಾಹನರ ನಾಣ್ಯ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2011, 19:30 IST
Last Updated 22 ಡಿಸೆಂಬರ್ 2011, 19:30 IST
ಕಲ್ಮನೆ: ಶಾತವಾಹನರ ನಾಣ್ಯ ಪತ್ತೆ
ಕಲ್ಮನೆ: ಶಾತವಾಹನರ ನಾಣ್ಯ ಪತ್ತೆ   

ಮೈಸೂರು: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಶಾತವಾಹನರ ಕಾಲದ ನಾಣ್ಯಗಳು ಪತ್ತೆಯಾಗಿವೆ.

ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಸ್. ಜಿ. ರಾಮದಾಸರೆಡ್ಡಿ ಅವರು, ಮಂಡ್ಯದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಬಿ.ವಿ. ವಸಂತಕುಮಾರ ಮತ್ತು ರಾಮಕೃಷ್ಣ ಸೊರಬ ಅವರ ಸಹಕಾದೊಂದಿಗೆ ಕಲ್ಮನೆಯಲ್ಲಿ ಕ್ಷೇತ್ರ ಕಾರ್ಯ ಮಾಡಿ ಶಾತವಾಹನರ ಕಾಲದ 12 ನಾಣ್ಯಗಳನ್ನು ಪತ್ತೆ ಮಾಡಿದ್ದಾರೆ.

ಅಂಜನಾಪುರ ಹೋಬಳಿಯಲ್ಲಿ ಕುಮದ್ವತಿ ನದಿ ಎಡದಂಡೆಯ ಮೇಲಿರುವ ಈ ಗ್ರಾಮದಲ್ಲಿ ಸಿಕ್ಕಿರುವ ನಾಣ್ಯಗಳು ಕೋಳಿ ಮೊಟ್ಟೆ ಆಕಾರದ್ದಾಗಿವೆ. ಪೋಟೀನ್ ಮತ್ತು ಸೀಸದಿಂದ ಇವುಗಳನ್ನು ತಯಾರಿಸಲಾಗಿದ್ದು, 5 ಗ್ರಾಂ. ತೂಕ ಹಾಗೂ 20-19 ಮಿ.ಮೀ. ಅಗಲ ವಾಗಿವೆ.

ಈ ಹಿಂದೆ ಕರ್ನಾಟಕದ ಇತರ ಕೆಲವು ಜಿಲ್ಲೆಗಳಲ್ಲಿ ಶಾತವಾಹನರ ಕಾಲದ ನಾಣ್ಯಗಳು ಸಿಕ್ಕಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಸಿಕ್ಕಿರುವುದು ಇದೇ ಮೊದಲು. ಈ ನಾಣ್ಯಗಳು ಕ್ರಿ.ಶ. 2ನೇ ಶತಮಾನಕ್ಕೆ ಸೇರಿದ್ದು, ಇಂದಿಗೆ 1800 ವರ್ಷಗಳ ಹಿಂದಿನ ನಾಣ್ಯಗಳಾಗಿವೆ. ಶಾತವಾಹನರ ದೊರೆ ಸಾತಕಣಿ ಹಾಗೂ ಪುಳುಮಾವಿ ಎಂಬ ಇಬ್ಬರು ರಾಜರಿಗೆ ಸೇರಿದ್ದು.

ನಾಣ್ಯಗಳ ಮುಂಭಾಗದಲ್ಲಿ ಆನೆಯ ಚಿತ್ರ, ಅದರ ಮೇಲೆ ಪ್ರಾಕೃತ ಭಾಷೆಯ ಬ್ರಾಹ್ಮಿ ಲಿಪಿಯ ರಾಜರ ಹೆಸರಿನ ಬರಹವಿದೆ. ಹಿಂಭಾಗದಲ್ಲಿ ಉಜ್ಜಯಿನಿ ಚಿಹ್ನೆಯಿದೆ.

ಪುಳಮಾವಿ ನಾಣ್ಯಗಳು ಅತ್ಯಂತ ಮಹತ್ವದ್ದಾಗಿವೆ. ಇದಕ್ಕೆ ಕಾರಣವೆಂದರೆ ನಾಣ್ಯದ ಮೇಲೆ ಆನೆಯ ಮೇಲೆ ಕುಳಿತಿರುವ ರಾಜನ ಚಿತ್ರವಿದೆ. ಇಂತಹ ನಾಣ್ಯಗಳು ಇದುವರೆಗೆ ಎಲ್ಲಿಯೂ ಸಿಕ್ಕಿರಲಿಲ್ಲ.

ಈ ನಾಣ್ಯಗಳನ್ನು ಪರೀಕ್ಷಿಸಿದ ನಾಣ್ಯಶಾಸ್ತ್ರಜ್ಞ ಹಾಗೂ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ  ಡಾ. ಎ.ವಿ. ನರಸಿಂಹಮೂರ್ತಿ ಅವರು ಇದೊಂದು ಮಹತ್ವದ ಸಂಶೋಧನೆ ಎಂದು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.