ADVERTISEMENT

ಕಲ್ಲಿದ್ದಲು ಅಭಾವ: ಆತಂಕ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 19:38 IST
Last Updated 10 ನವೆಂಬರ್ 2017, 19:38 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಲ್ಲಿದ್ದಲು ಅಭಾವ ಮುಂದುವರಿದಿದ್ದು, ಪರಿಸ್ಥಿತಿ ಸುಧಾರಿಸದೇ ಇದ್ದರೆ ರಾಜ್ಯ ಕತ್ತಲಲ್ಲಿ ಮುಳುಗುವ ಆತಂಕ ಎದುರಾಗಿದೆ.

ವಿದ್ಯುತ್‌ ಅಭಾವ ನಿಭಾಯಿಸಲು ಹೆಚ್ಚುವರಿ 1300 ಮೆ.ವಾಟ್‌ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಲ್ಲಿದ್ದಲು ಖರೀದಿಗೂ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಪ್ರಜಾವಾಣಿಗೆ ತಿಳಿಸಿದರು.

ವಿದ್ಯುತ್‌ ಬೇಡಿಕೆ ಮತ್ತು ಉತ್ಪಾದನೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಈ ವಿಷಯದಲ್ಲಿ ಜನ ಆತಂಕಪಡಬೇಕಾಗಿಲ್ಲ ಎಂದೂ ಸಚಿವರು ಸ್ಪಷ್ಟಪಡಿಸಿದರು.

ADVERTISEMENT

ಸಂಗ್ರಹವೇ ಇಲ್ಲ: ‘ರಾಜ್ಯದಲ್ಲಿ ಕಿಂಚಿತ್ತೂ ಕಲ್ಲಿದ್ದಲು ಸಂಗ್ರಹವಿಲ್ಲ. ಒಂದು ವೇಳೆ ಸದ್ಯ ಪೂರೈಕೆ ಆಗುತ್ತಿರುವ ಕಲ್ಲಿದ್ದಲು ಕಾರಣಾಂತರಗಳಿಂದ ನಿಂತು ಹೋದರೆ ಎರಡು ದಿನಗಳಿಗೆ ಬೇಕಾದ ವಿದ್ಯುತ್‌ ಮಾತ್ರ ಉತ್ಪಾದನೆ ಮಾಡಬಹುದು’ ಎಂದು ಕೆಪಿಸಿಎಲ್‌ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ  ತಿಳಿಸಿದರು.

‘ರಾಜ್ಯಕ್ಕೆ ಈಗ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ನಾವು ವಿದ್ಯುತ್‌ ಉತ್ಪಾದಿಸಲು ನಿರಂತರ ಪೂರೈಕೆ ಆಗುತ್ತಲೇ ಇರಬೇಕು. ಕಲ್ಲಿದ್ದಲು ಹೊತ್ತು ಬರುವ ರೈಲು ಹಳಿ ತಪ್ಪಿದರೆ ಅಥವಾ ಕಲ್ಲಿದ್ದಲು ಗಣಿಯಲ್ಲಿ ಮುಷ್ಕರ ಹೂಡಿ ಗಣಿಗಾರಿಕೆ ಮಾಡದೇ ಇದ್ದರೆ ತಕ್ಷಣವೇ ವಿದ್ಯುತ್‌ ಸಿಗುವುದು ಕಷ್ಟ’ ಎಂದು ಅವರು  ತಿಳಿಸಿದರು.

‘ಕಲ್ಲಿದ್ದಲಿಗೆ ಭಿಕ್ಷೆ ಬೇಡುವ ಸ್ಥಿತಿ ಎದುರಾಗಿದೆ. ಪ್ರಭಾವ ಇದ್ದವರು ಕಲ್ಲಿದ್ದಲು ಪಡೆಯುತ್ತಿದ್ದಾರೆ. ಇಲ್ಲದವರು ನಮ್ಮಂತೆ ಕಂಬ ಕಂಬ ಸುತ್ತಬೇಕಾಗಿದೆ.  ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ’ ಎಂದೂ ಅವರು ಕಳವಳ ವ್ಯಕ್ತಪಡಿಸಿದರು.

‘ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಅವರದ್ದೇ ಆದ ಕಲ್ಲಿದ್ದಲು ಗಣಿಗಳು ಇವೆ. ನಮ್ಮ ರಾಜ್ಯಕ್ಕೆ ಕಲ್ಲಿದ್ದಲು ಗಣಿ ಇಲ್ಲ. ಸಿಂಗರೇಣಿಯಿಂದಲೇ ಪಡೆಯಬೇಕು. ಉಳಿದ ರಾಜ್ಯಗಳು ಪ್ರಭಾವ ಬೀರಿ ಹೆಚ್ಚಿನ ಪ್ರಮಾಣದ ಕಲ್ಲಿದ್ದಲು ಪಡೆಯುತ್ತಿವೆ. ಸಿಂಗರೇಣಿಯಿಂದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿಗೆ ಕಲ್ಲಿದ್ದಲು ಪೂರೈಸಿದ ಬಳಿಕವೇ ನಮಗೆ ನೀಡುತ್ತಾರೆ. ಪ್ರಭಾವ ಬೀರಿ ಹೆಚ್ಚಿನ ಕಲ್ಲಿದ್ದಲನ್ನು ಪಡೆಯುವ ಸಾಮರ್ಥ್ಯ ನಮ್ಮ ರಾಜಕ್ಕೆ ಇಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಆರ್‌ಟಿಪಿಎಸ್‌) 1,720 ಮೆ.ವಾಟ್‌, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಬಿಟಿಪಿಎಸ್‌) 1,700 ಮೆ.ವಾಟ್‌ ಸಾಮರ್ಥ್ಯ ಹೊಂದಿವೆ. ಒಟ್ಟು ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ 3,420 ಮೆ.ವಾಟ್‌ಗಳು. ಇವೆರಡೂ ಕೇಂದ್ರಗಳಿಗೆ ವಿದ್ಯುತ್‌ ಉತ್ಪಾದನೆಗೆ ಕ್ರಮವಾಗಿ ಪ್ರತಿ ದಿನ 28,000 ಟನ್‌ ಮತ್ತು 25,000 ಟನ್‌ ಕಲ್ಲಿದ್ದಲು ಬೇಕು. ಅಂದರೆ, ಪ್ರತಿ ದಿನ 9 ರೈಲು ಲೋಡ್‌ ಕಲ್ಲಿದ್ದಲು ಬೇಕಾಗುತ್ತದೆ. ಈಗ ಪೂರೈಕೆ ಆಗುತ್ತಿರುವುದು 4 ರೈಲು ಲೋಡ್‌ ಮಾತ್ರ. ಶೇ 50 ಕ್ಕಿಂತಲೂ ಕಡಿಮೆ ಎಂದು ಅವರು ತಿಳಿಸಿದರು.

ಕಳೆದ ಏಳು ತಿಂಗಳಲ್ಲಿ ವೆಸ್ಟರ್ನ್‌ ಕೋಲ್‌ ಫೀಲ್ಡ್‌ನಿಂದ ಪೂರೈಕೆಯಾದ ಕಲ್ಲಿದ್ದಲು ಪ್ರಮಾಣವು ನಿಗದಿಯಾದ ಪ್ರಮಾಣಕ್ಕಿಂತ ಶೇ 50 ರಷ್ಟು ಕಡಿಮೆ. ಇದರಿಂದ ಆರ್‌ಟಿಪಿಎಸ್‌ನ ಕಲ್ಲಿದ್ದಲು ಸಂಗ್ರಹ ಕನಿಷ್ಠ ಮಟ್ಟ ತಲುಪಿದೆ. ಸಿಂಗರೇಣಿ ಮತ್ತು ವೆಸ್ಟರ್ನ್‌ ಕೋಲ್‌ ಫೀಲ್ಡ್‌ ಜೊತೆಗೆ 92 ಲಕ್ಷ ಟನ್‌ ಕಲ್ಲಿದ್ದಲು ಪೂರೈಕೆಗೆ ಒಪ್ಪಂದವಾಗಿದ್ದು, ಅಕ್ಟೋಬರ್‌ವರೆಗೆ ಶೇ 21 ರಷ್ಟು ಮಾತ್ರ ಪೂರೈಕೆಯಾಗಿದೆ. ಪರಿಣಾಮವಾಗಿ ಕಲ್ಲಿದ್ದಲು ಸಂಗ್ರಹ ಇನ್ನೂ ಕಡಿಮೆ ಆಗಿದೆ ಎಂದು ಅಧಿಕಾರಿ ತಿಳಿಸಿದರು.

ಬಿಟಿಪಿಎಸ್‌ 3 ನೇ ಘಟಕ ಮತ್ತು ವೈಟಿಪಿಎಸ್‌ಗೆ (ಯರಮರಸ್‌) ಕಲ್ಲಿದ್ದಲು ಗಣಿಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಆದರೂ ಕಲ್ಲಿದ್ದಲು ಸಿಗುತ್ತಿಲ್ಲ.  ಕೇಂದ್ರ ಕಲ್ಲಿದ್ದಲು ಸಚಿವಾಲಯದ ನಿರ್ದೇಶನದ ಮೇರೆಗೆ  ಕೆಪಿಸಿಎಲ್‌ ಒಡಿಶಾದ ಗೋಗರ್‌ಪಲ್ಲಿ ಮತ್ತು ಡೀಪ್‌ಸೈಡ್‌ ಆಫ್‌ ಗೋಗರ್‌ಪಲ್ಲಿ ಗಣಿಗಳ ಹಂಚಿಕೆಗೆ 2016ರ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿ ಹಂಚಿಕೆಗೆ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.