ADVERTISEMENT

ಕಳಪೆ ಆಹಾರ ಸೇವನೆ : 27 ವಿದ್ಯಾರ್ಥಿನಿಯರು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 17:55 IST
Last Updated 3 ಫೆಬ್ರುವರಿ 2011, 17:55 IST


ಮೊಳಕಾಲ್ಮುರು: ಕಳಪೆ ಆಹಾರ ಸೇವಿಸಿ 27 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಇಲ್ಲಿನ ಕಸ್ತೂರ ಬಾ ವಸತಿ ಶಾಲೆಯಲ್ಲಿ ಗುರುವಾರ ನಡೆದಿದೆ.

ಬೆಳಿಗ್ಗೆ 8ಗಂಟೆ ಸುಮಾರಿಗೆ ತೀವ್ರ ಹೊಟ್ಟೆನೋವು, ವಾಂತಿ, ತಲೆಸುತ್ತು ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಪೈಕಿ ಪದ್ಮಾ, ನಂದಿನಿ, ಸಾವಿತ್ರಿ, ಅಶ್ವಿನಿ, ಕಾವೇರಿ, ಶಶಿಕಲಾ, ಹನುಮಕ್ಕ, ಸುಶ್ಮಿತಾ ಸೇರಿದಂತೆ ಒಂಬತ್ತು ವಿದ್ಯಾರ್ಥಿನಿಯರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯತ್ತಿದ್ದಾರೆ. ಉಳಿದಂತೆ ಪ್ರಭಾ, ರೇಷ್ಮಾ, ಮಂಗಳ, ಜ್ಯೋತಿ, ಮಂಜಮ್ಮ, ಗೌರಮ್ಮ, ಜಯಮ್ಮ ಸೇರಿದಂತೆ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವೆಂಕಟಶಿವಾರೆಡ್ಡಿ, ಬಿಇಒ ಬಿ. ಉಮಾದೇವಿ, ಶಿಕ್ಷಣ ಇಲಾಖೆಯ ರುದ್ರಯ್ಯ, ಸತ್ಯವಾನ್ ಬೋಗಾರ್, ವೆಂಕಟೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳಪೆ ಅಕ್ಕಿ: ಮಾಧ್ಯಮ ಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ಶಾಲೆಗೆ ಭೇಟಿ ನೀಡಿದ ಶಿಕ್ಷಣಾಧಿಕಾರಿಯವರು ಅಡುಗೆ ಮನೆಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಹುಳು ಬಿದ್ದಿದ್ದ ಮತ್ತು ಹಸಿರು ಬಣ್ಣಕ್ಕೆ ತಿರುಗಿದ ಹಾಗೂ ದೂಳು ಮಿಶ್ರಿತ ಅಕ್ಕಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ಪರಿಕ್ಷಿಸಲು ಆರೋಗ್ಯ ಸಿಬ್ಬಂದಿ ಅಕ್ಕಿ ವಶಕ್ಕೆ ತೆಗೆದುಕೊಂಡರು. ಸುಸಜ್ಜಿತ ಅಡುಗೆ ಮನೆ ಇದ್ದರೂ ಸಹ ಹೊರಗೆ ಅಡುಗೆ ಮಾಡುತ್ತಿರುವುದು, ಸ್ಥಳದಲ್ಲಿ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿತು. ಈ ಹಿಂದೆ ಎರಡು ಬಾರಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದೆ. ಈಗ ಮತ್ತೆ ನಿರ್ಲಕ್ಷ್ಯ ಮಾಡಿರುವ ಪ್ರೇರಣಾ ಸ್ವಯಂ ಸೇವಾ ಸಂಸ್ಥೆಗೆ ನೋಟಿಸ್ ಜಾರಿ ಮಾಡುವುದಾಗಿ ಉಮಾದೇವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.