ADVERTISEMENT

ಕವಿ ಮಹಲಿಂಗರಂಗ ಮರತೇ ಹೋದರೆ?

ಮಲ್ಲೇಶ್ ನಾಯಕನಹಟ್ಟಿ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST
ಕವಿ ಮಹಲಿಂಗರಂಗ ಮರತೇ ಹೋದರೆ?
ಕವಿ ಮಹಲಿಂಗರಂಗ ಮರತೇ ಹೋದರೆ?   

ದಾವಣಗೆರೆ: ಸಂಸ್ಕೃತ ಪ್ರಬಲ ಭಾಷೆಯಾಗಿದ್ದ ಕಾಲದಲ್ಲಿ ಸಂಸ್ಕೃತ ಪಂಡಿತರಿಗೆ ಸವಾಲು ಎಸೆದು ಕನ್ನಡದಲ್ಲಿ ಕಾವ್ಯ ರಚಿಸಿದ ಕವಿ `ಮಹಲಿಂಗರಂಗ~ ಅವರ ಸಮಾಧಿ- ಸ್ಮಾರಕ ನಿರ್ಲಕ್ಷ್ಯಕ್ಕೀಡಾಗಿದೆ.

ಚಾಮರಸರ ಕಾಲದಲ್ಲಿ ಆಗಿನ ಬಳ್ಳಾರಿ ಜಿಲ್ಲೆಗೆ ಸೇರಿದ್ದ ಉಚ್ಚಂಗಿ ದುರ್ಗದಲ್ಲಿ ಜನಿಸಿದ ಕವಿ `ಮಹಲಿಂಗರಂಗ~ ನಂತರ ದಾವಣಗೆರೆಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದರು. ಭಾಷಾ ರಾಜಕಾರಣದಿಂದ ಬೇಸತ್ತ ಅವರು, ಕನ್ನಡದಲ್ಲಿ ಭಾಮಿನೀ ಷಟ್ಪದಿಯಲ್ಲಿ `ಅನುಭವಾಮೃತ~ ಕೃತಿ ರಚಿಸಿದ್ದರು.

ಕೇವಲ ಪಂಡಿತರಿಗಷ್ಟೇ ಮೀಸಲೆಂಬಂತಿದ್ದ ಸಂಸ್ಕೃತದ ಉಪನಿಷತ್ತುಗಳನ್ನು ಅವರು ಕನ್ನಡೀಕರಿಸಿ ಪಾಮರರಿಗೂ ಅರ್ಥವಾಗುವಂತೆ ಮಾಡಿದ್ದರು. ಕನ್ನಡದ ಅಂತಹ ಮಹಾನ್ ಕವಿಯ ಸಮಾಧಿ ಇದೀಗ ಅಳಿವಿನಂಚಿಗೆ ತಲುಪಿದೆ.

ಮಹಲಿಂಗರಂಗರ ಅನೇಕ ರಚನೆಗಳು ಈಗಲೂ ಸಿಕ್ಕಿಲ್ಲ. ಹಿರಿಯ ಸಾಹಿತಿ ಅರಾಸೇ ಅವರ ಪರಿಶ್ರಮದಿಂದಾಗಿ ಹೊರಬಂದ `ಅನುಭವಾಮೃತ~ ಕೃತಿ ನಂತರ ಮರು ಮುದ್ರಣ ಕಂಡಿರಲಿಲ್ಲ. ಆದರೆ, 2004ರಲ್ಲಿ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರು ಸಂಪಾದಿಸಿದ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್  ಮರು ಮುದ್ರಣ ಮಾಡಿಸಿತ್ತು.  ಸಾಹಿತ್ಯ ಸಂಶೋಧಕರಲ್ಲಿ `ಮಹಲಿಂಗರಂಗ~ರ ಜನ್ಮಸ್ಥಳದ ಬಗ್ಗೆ ಜಿಜ್ಞಾಸೆ ಇದೆ.

ಭಕ್ತರೊಬ್ಬರು ಮಹಲಿಂಗರಂಗ ಸಮಾಧಿಗೆ ನಿತ್ಯ ಪೂಜೆ ಮಾಡುತ್ತಾ ಬರುತ್ತಿರುವುದರಿಂದ ಅದಿನ್ನೂ ಉಳಿದುಕೊಂಡು ಬಂದಿದೆ. ನಗರದ ಗೌರಮ್ಮ ಪಿ. ರಾಮರಾವ್ ಟ್ರಸ್ಟ್ ಮಹಲಿಂಗರಂಗ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಅವರ ನೆನಪು ಉಳಿಸುವ ಕಾರ್ಯ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.