ADVERTISEMENT

ಕಷ್ಟಕರವಾಗಿರುವ ವ್ಯಕ್ತಿ ವಿಮರ್ಶೆ

ಸಾಹಿತಿ ಚಂದ್ರಶೇಖರ ಪಾಟೀಲ ವಿಷಾದ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2016, 19:30 IST
Last Updated 10 ಏಪ್ರಿಲ್ 2016, 19:30 IST
ಚಂದ್ರಶೇಖರ ಪಾಟೀಲ
ಚಂದ್ರಶೇಖರ ಪಾಟೀಲ   

ಮೈಸೂರು: ‘ವ್ಯಕ್ತಿಯನ್ನು ಆರಾಧಿಸುವ ಪ್ರವೃತ್ತಿಯು ಈಗ ಹೆಚ್ಚುತ್ತಿದ್ದು, ಇದರಿಂದಾಗಿ ವ್ಯಕ್ತಿಗಳ ಬಗ್ಗೆ ಪ್ರಾಮಾಣಿಕ ವಿಮರ್ಶೆ ಮಾಡುವುದು ಕಷ್ಟಸಾಧ್ಯವಾಗಿದೆ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ವಿಷಾದ ವ್ಯಕ್ತಪಡಿಸಿದರು.

ನೀಲು ಕರ್ನಾಟಕ, ಮೈಸೂರು ಸಂಸ್ಥೆಯು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪಿ. ಲಂಕೇಶ್‌ ಜೊತೆ ಒಂದು ದಿನ– ನಮ್ಮೆಲ್ಲರ ಆತ್ಮಾವಲೋಕನ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಆತ್ಮಾವಲೋಕನ ಎನ್ನುವುದು ಈಗ ಫ್ಯಾಷನ್‌ ಆಗಿಬಿಟ್ಟಿದೆ. ‘ಸಮಕಾಲೀನ ಸಾಹಿತ್ಯದಲ್ಲಿ ವಸ್ತುನಿಷ್ಠ ವಿಮರ್ಶೆ ಸಾಧ್ಯವಿಲ್ಲ’ ಎಂದು ಗೋಪಾಲಕೃಷ್ಣ ಅಡಿಗರು ಹೇಳುತ್ತಿದ್ದರು. ಆ ಮಾತು ನಿಜ. ನಾನು ಲಂಕೇಶರ ಸಮಕಾಲೀನ ವ್ಯಕ್ತಿ. ವ್ಯಕ್ತಿ ಬದುಕಿದ್ದಾಗ ವಸ್ತುನಿಷ್ಠ ವಿಮರ್ಶೆ ಕಷ್ಟ, ಅಂತೆಯೇ ವ್ಯಕ್ತಿ ಗತಿಸಿದ ನಂತರವೂ ಕಷ್ಟವೇ. ಆದರೆ, ಲಂಕೇಶರನ್ನು ಕುರಿತು ನಾನು ಅವರು, ಬದುಕಿದ್ದಾಗಲೂ ಸತ್ತ ನಂತರವೂ ಸಾಕಷ್ಟು ವಿಮರ್ಶೆ ಮಾಡಿದ್ದೇನೆ. ಅದನ್ನು ಬರಹ ರೂಪದಲ್ಲಿ ದಾಖಲಿದ್ದೇನೆ’ ಎಂದು ಅವರು ತಿಳಿಸಿದರು.

ಲಂಕೇಶ್‌ ಅವರು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಅತಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದು ನಿಜವೇ ಆದರೂ, ಅವರಲ್ಲಿ ಗೌಡಿಕೆ ಪ್ರವೃತ್ತಿ ವಿಪರೀತವಿತ್ತು; ಅವರೊಬ್ಬ ಪಾಳೇಗಾರ. ಅವರು ಪ್ರಜಾಪ್ರಭುತ್ವವಾದಿಯೇ ಆಗಿದ್ದರೂ, ತಾನು ಹೇಳಿದ್ದೇ ಆಗಬೇಕು, ತಾನು ಹೇಳಿದ್ದನ್ನು ಇತರರು ಕೇಳಬೇಕು ಎನ್ನುವ ಪ್ರವೃತ್ತಿಯಿತ್ತು. ವ್ಯಕ್ತಿಯೊಬ್ಬರ ಏಳಿಗೆಯನ್ನು ಸಹಿಸಲಾಗದೆ ಸವರಿ ಹಾಕುವ ದುಷ್ಟತನವೂ ಅವರಲ್ಲಿತ್ತು ಎಂದು ವಿವರಿಸಿದರು.

ವಾಸ್ತವ, ವರ್ತಮಾನ, ಭೂತಗಳನ್ನು ಅರ್ಥಮಾಡಿಕೊಂಡು ಭವಿಷ್ಯದ ಚಿಂತನೆ ಮಾಡಿ, ಸಾಂಸ್ಕೃತಿಕ ನಾಯಕತ್ವ ಸಾಧಿಸಿದ್ದು ಕುವೆಂಪು ಅವರೊಬ್ಬರೇ. ಯಾವುದೇ ಚಳವಳಿಯಲ್ಲಿ ನೇರವಾಗಿ ಭಾಗವಹಿಸದೆ ನಾಯಕತ್ವ ವಹಿಸಿಕೊಳ್ಳದೆ, ಪತ್ರಿಕೆಯೊಂದರ ಸಂಪಾದಕರಾಗದೆ ಅವರು ಇಡೀ ಸಮಾಜಕ್ಕೆ ಸಾಂಸ್ಕೃತಿಕ ನಾಯಕರಾದರು. ಅವರ ಸ್ಥಾನವನ್ನು ಲಂಕೇಶ್‌ ಅವರಿಗಾಗಲೀ, ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರಿಗಾಗಲೀ ತುಂಬಲು ಆಗಲಿಲ್ಲ. ಇದಕ್ಕೆ ಕಾರಣ, ಅವರಲ್ಲಿದ್ದ ದರ್ಪ ಸ್ವಭಾವ, ಪಾಳೇಗಾರಿಕೆ ಪ್ರವೃತ್ತಿ ಎಂದು ಕುಟುಕಿದರು.

ಪತ್ರಕರ್ತ ಸುಗತ ಶ್ರೀನಿವಾಸರಾಜು ‘ಲಂಕೇಶ್‌ ಪತ್ರಿಕೆ’ ಕುರಿತು ಮಾತನಾಡಿ, ಪತ್ರಿಕೋದ್ಯಮದಲ್ಲಿ ಸ್ವತಂತ್ರ ಚಿಂತನೆಗೆ ಹೊಸ ಆಯಾಮವನ್ನು ಲಂಕೇಶ್‌ ಬೆಳೆಸಿದರು. ಈಗ ಸ್ವತಂತ್ರ ಚಿಂತನೆ ಹಾಗೂ ಅಭಿವ್ಯಕ್ತಿ ಎರಡೂ ಕಷ್ಟಕರವಾಗಿದೆ. ಏನನ್ನೇ ಬರೆಯಬೇಕಾದರೂ ಹೆದರಿ ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಲೇಖಕ ಅಗ್ರಹಾರ ಕೃಷ್ಣಮೂರ್ತಿ, ಪತ್ರಕರ್ತ ಎನ್‌.ಎಸ್‌. ಶಂಕರ್‌ ಅವರೂ ಮಾತನಾಡಿದರು. ರಚನಾ ಕಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.