
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 25ನೇ ಅಧ್ಯಕ್ಷರಾಗಿ ಮನು ಬಳಿಗಾರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ಮತ್ತು ನಿಕಟಪೂರ್ವ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಮನು
ಬಳಿಗಾರ್ ಅವರಿಗೆ ಕನ್ನಡ ಧ್ವಜವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ನಂತರ ಮಾತನಾಡಿದ ಪುಂಡಲೀಕ ಹಾಲಂಬಿ, ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಹೋರಾಟವನ್ನು ಮುಂದುವರಿಸುವಂತೆ ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.
‘ಚುನಾವಣೆ ಮುಗಿದಿದೆ. ಇನ್ನು ಎಲ್ಲರೂ ಒಂದಾಗಬೇಕು. ಸಾಹಿತ್ಯದ ಕೆಲಸವನ್ನು, ನಾಡು–ನುಡಿಯ ಹೋರಾಟವನ್ನು ಒಟ್ಟಾಗಿ ಮಾಡಬೇಕು. ಸಾಹಿತಿಗಳು ಎಲ್ಲ ವಿಚಾರಕ್ಕೂ ಸ್ಪಂದಿಸದೆ ಪರದೆ ಹಾಕಿ ಕುಳಿತುಕೊಳ್ಳುವುದು ಸರಿಯಲ್ಲ’ ಎಂದರು.
ಕನ್ನಡ ಕಡ್ಡಾಯಕ್ಕೆ ಕ್ರಮ: ‘ರಾಜ್ಯದಲ್ಲಿರುವ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷಾ ಪಠ್ಯವನ್ನು ಅಳವಡಿಸುವ ಕುರಿತು ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮನು ಬಳಿಗಾರ್ ಹೇಳಿದರು.
‘ಹೊಟೇಲು, ಮಾಲ್‌ಗಳಲ್ಲಿ ಕನ್ನಡವನ್ನು ಬಳಸುವಂತೆ ಮನವೊಲಿಸಲಾಗುವುದು. ಖಾಸಗಿ ಕಂಪೆನಿಗಳಲ್ಲಿ ಕನ್ನಡ ಅನುಷ್ಠಾನಗೊಳಿಸಲು ಉದ್ಯಮಿಗಳಾದ ಸುಧಾ ಮೂರ್ತಿ, ಅಜೀಂ ಪ್ರೇಮ್‌ಜಿ ಮುಂತಾದವರನ್ನು ಬಳಸಿಕೊಳ್ಳಲಾಗುವುದು ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.