ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದ ಕೆಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.
ಯಡಿಯೂರಪ್ಪ ಜತೆ ಗುರುತಿಸಿಕೊಂಡಿದ್ದ ಕೆಜೆಪಿಯ ಕೆಲ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ನಿರಾಕರಿಸಿದೆ.
ಹೀಗಾಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದು, 2–3 ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಲಕ್ಷ್ಮಿನಾರಾಯಣ ವಿಧಾನ ಪರಿಷತ್‌ನ ನಾಮಕರಣ ಸದಸ್ಯ. ಪರಿಷತ್‌ನ ದಾಖಲೆಗಳ ಪ್ರಕಾರ ಅವರು ಪಕ್ಷೇತರರಾಗಿದ್ದಾರೆ. ಹೀಗಾಗಿ ಯಾವುದೇ ಪಕ್ಷಕ್ಕೆ ಸೇರಿದರೂ ಸದಸ್ಯತ್ವಕ್ಕೆ ಧಕ್ಕೆಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಬಿ.ಪಿ.ಹರೀಶ್ ಕೂಡ ಕಾಂಗ್ರೆಸ್‌ನತ್ತ: ಹರಿಹರದ ಮಾಜಿ ಶಾಸಕ ಬಿ.ಪಿ.ಹರೀಶ್ ಕೂಡ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಸೇರಿದರೂ, ಪಕ್ಷದಲ್ಲಿ ತಮಗೆ ಸೂಕ್ತ ಸ್ಥಾನಮಾನ ಕೊಡಿಸಿಲ್ಲ ಎಂಬ ಬೇಸರದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಲ್ಲಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷ ಸೇರುವ ಯೋಚನೆ ಇದೆ. ಈ ಕುರಿತು ನನ್ನ ಬೆಂಬಲಿಗರ ಜೊತೆ ಸಮಾಲೋಚನೆ ನಡೆಸುತ್ತೇನೆ. ಬಳಿಕ ಅಂತಿಮ ನಿರ್ಧಾರಕ್ಕೆ ಬರುತ್ತೇನೆ’ ಎಂದರು.
ಧನಂಜಯ ಕುಮಾರ್ ಜೆಡಿಎಸ್‌ನಿಂದ ಸ್ಪರ್ಧೆ ಯಡಿಯೂರಪ್ಪ ಅವರ ಇನ್ನೊಬ್ಬ ಆಪ್ತ ವಿ.ಧನಂಜಯ ಕುಮಾರ್ ಜೆಡಿಎಸ್ ಸೇರುವುದು ಖಚಿತವಾಗಿದೆ.
ಈ ಸಂಬಂಧ ಅವರು ಬುಧವಾರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರನ್ನು ಭೆಟಿಯಾಗಿ ಚರ್ಚಿಸಿದರು.
ಚಿಕ್ಕಮಗಳೂರು – ಉಡುಪಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಧನಂಜಯ ಕುಮಾರ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ‘ಸ್ಪರ್ಧೆ ಮಾಡುವಂತೆ ದೇವೇಗೌಡರು ಸಲಹೆ ಮಾಡಿದ್ದಾರೆ. 2–3 ದಿನದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.