ADVERTISEMENT

ಕಾಂಗ್ರೆಸ್‌ನಿಂದಷ್ಟೇ `ಝಗಮಗ'

ರಾಜ್ಯದ ಜನತೆಗೆ ರಾಹುಲ್ ಗಾಂಧಿ ವಾಗ್ದಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:25 IST
Last Updated 23 ಏಪ್ರಿಲ್ 2013, 19:25 IST

ರಾಯಚೂರು/ ವಿಜಾಪುರ/ ಬಾಗಲಕೋಟೆ: `ಬಿಜೆಪಿಯ ಐದು ವರ್ಷಗಳ ಭ್ರಷ್ಟ ಆಡಳಿತದಿಂದ ಕತ್ತಲೆಯಲ್ಲಿ ಮುಳುಗಿದ್ದ ರ್ನಾಟಕವನ್ನು ಮತ್ತೆ ಝಗಮಗಿಸುವಂತೆ ಮಾಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ. ಅಂಥ ಅವಕಾಶವನ್ನು ನಮಗೆ ಕೊಡಿ'. ಇದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದ ಮತದಾರರಿಗೆ ಮಾಡಿಕೊಂಡ ಮನವಿ.

ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ಕೈಗೊಳ್ಳುವ ಮೂಲಕ ಖದರ್ ತುಂಬಲು ಮಂಗಳವಾರ ಆಗಮಿಸಿದ ಅವರು ರಾಯಚೂರು ಜಿಲ್ಲೆಯ ಸಿಂಧನೂರು, ವಿಜಾಪುರ ಮತ್ತು ಇಳಕಲ್‌ಗಳಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ ಭರವಸೆಗಳ ಮಹಾಪೂರವನ್ನೇ ಹರಿಸಿದರು.

ಕೃಷ್ಣಾ ಮೇಲ್ದಂಡೆಯ ಬಿ ಸ್ಕೀಮ್ ಯೋಜನೆಗೆ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದ ಅವರು, ಬಳ್ಳಾರಿಯಲ್ಲಿ ಉಕ್ಕು ಉತ್ಪಾದನಾ ಘಟಕಗಳನ್ನು ಸ್ಥಾಪನೆ ಮಾಡಿ ಉದ್ಯೋಗ ಸೃಷ್ಟಿಗೆ ಒತ್ತು ಕೊಟ್ಟು ಚೀನಾ ಸೇರಿದಂತೆ ಬೇರೆ ರಾಷ್ಟ್ರಕ್ಕೆ ರಫ್ತು ಮಾಡುವ ಯೋಜನೆ ರೂಪಿಸಿದ್ದು,  ಹೈ ಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಕಲಂ ತ್ವರಿತ ಜಾರಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಭರವಸೆ ನೀಡಿದರೆ ಅದರಂತೆ ನಡೆದುಕೊಳ್ಳುತ್ತದೆ. ಘೋಷಿಸಿದ ಯೋಜನೆ ಅನುಷ್ಠಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಉದಾಹರಣೆ 371(ಜೆ) ಎಂದು ಸಿಂಧನೂರು ಸಭೆಯಲ್ಲಿ ಅವರು ಹೇಳಿದಾಗ ಜನ ಹಷೋದ್ಗಾರ ಮಾಡಿದರು.

ವಿದ್ಯುತ್ ಸಮಸ್ಯೆಯಿಂದ ಸಂಕಷ್ಟ ಎದುರಿಸುವ ರೈತರಿಗೆ ನಿತ್ಯ 8 ತಾಸು ವಿದ್ಯುತ್ ಪೂರೈಸಲಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗುವುದು. ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಇದೆ. ಅದನ್ನು ಬೇರೆ ರಾಷ್ಟ್ರಕ್ಕೆ ರಫ್ತು ಮಾಡದೇ ಇಲ್ಲಿಯೇ ಉಕ್ಕು ಉತ್ಪಾದನಾ ಘಟಕ ಆರಂಭಿಸುವುದು, ಇಲ್ಲಿನವರಿಗೆ ಉದ್ಯೋಗ ಕಲ್ಪಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ ಎಂದು ತಿಳಿಸಿದರು.

ಐದು ವರ್ಷಕ್ಕೂ ಹಿಂದೆ ಕರ್ನಾಟಕವೆಂದರೆ ವಿಶ್ವ ಮಟ್ಟದಲ್ಲಿ ಮಿಂಚಿಗೆ (ಚಮಕ್ತಿ) ಹೆಸರಾಗಿತ್ತು. ಅಮೆರಿಕ, ಜಪಾನ್ ದೇಶದವರು ಉದ್ಯೋಗ ಅರಸಿ ಇಲ್ಲಿ ಬರುತ್ತಿದ್ದರು. ಬಿಜೆಪಿ ಸರ್ಕಾರದ ಐದು ವರ್ಷದ ಆಡಳಿತ  ಆ `ಝಗಮಗಿಸುವ ಕರ್ನಾಟಕ'ವನ್ನು ಕತ್ತಲೆಗೆ ನೂಕಿತು ಎಂದು ವ್ಯಂಗ್ಯವಾಡಿದರು.

ಹನ್ನೆರಡು ತಾಸು ವಿದ್ಯುತ್, ನಿರುದ್ಯೋಗಿಗಳಿಗೆ ಉದ್ಯೋಗ, ಮಹಿಳೆಯರ ಏಳಿಗೆಗೆ ಯೋಜನೆ ಹೀಗೆ ಬಿಜೆಪಿ ನೀಡಿದ ಹುಸಿ ಭರವಸೆಗೆ ಮರುಳಾಗಿ ಮತ ಕೊಟ್ಟು ಐದು ವರ್ಷ ಬರೀ ಕಷ್ಟವನ್ನೇ ಕರ್ನಾಟಕ ಜನ ಅನುಭವಿಸಿದರು ಎಂದು ರಾಹುಲ್ ಗಾಂಧಿ ಬಿಜೆಪಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ. ವಸಂತಕುಮಾರ ಅವರು ರಾಹುಲ್ ಅವರಿಗೆ ಪೇಟ ಹಾಗೂ ಬೆಳ್ಳಿ ಕಿರೀಟ ತೊಡಿಸಿ ಸತ್ಕರಿಸಿದರು.

ವಿಜಾಪುರ ವರದಿ: `ಕನ್ನಡಿಗರ ಸ್ವಾಭಿಮಾನ, ಕರ್ನಾಟಕದ ಘನತೆಯ ಪುನರ್ ಸ್ಥಾಪನೆಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ' ಎಂದು ರಾಹುಲ್ ಇಲ್ಲಿ ಮನವಿ ಮಾಡಿದರು.

`ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಬಹುಮತ ನೀಡಿ. ಸಮ್ಮಿಶ್ರ ಸರ್ಕಾರ ಆಡಳಿತ ಬಂದರೆ ನಾವು ಅಂದುಕೊಂಡಂತೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ' ಎಂದರು.

`ಕರ್ನಾಟಕದಲ್ಲಿರುವುದು ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ. ಜನಸಾಮಾನ್ಯರ ಹಿತ ಬಲಿಕೊಟ್ಟು ಬಳ್ಳಾರಿ ಸಹೋದರರ ಪರವಾಗಿ ಕೆಲಸ ಮಾಡಿತು. ನೀರು-ವಿದ್ಯುತ್-ಉದ್ಯೋಗದ ಸಮಸ್ಯೆ ಅವರಿಗೆ ಕಾಣಲಿಲ್ಲ. ಕೇವಲ ಐಶ್ವರ್ಯವನ್ನು ಕೊಳ್ಳೆ ಹೊಡೆಯುವುದೇ ಅವರ ಉದ್ದೇಶವಾಗಿತ್ತು' ಎಂದು ಅವರು ಇಳಕಲ್ ಸಭೆಯಲ್ಲಿ ದೂರಿದರು.

ಕಾಂಗ್ರೆಸ್ ಮುಖಂಡರಾದ ಮಧುಸೂದನ ಮಿಸ್ತ್ರಿ, ಡಾ.ಜಿ. ಪರಮೇಶ್ವರ, ಸಿದ್ದರಾಮಯ್ಯ, ಎಂ.ಬಿ. ಪಾಟೀಲ, ಪ್ರಕಾಶ ರಾಠೋಡ ಮತ್ತಿತರರು ವೇದಿಕೆಯಲ್ಲಿದ್ದರು.

ರಾಹುಲ್ ವ್ಯಂಗ್ಯಬಾಣ
-ಭ್ರಷ್ಟಾಚಾರದ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಮೊದಲ ಸ್ಥಾನ
-ಬಿಜೆಪಿ ಐದು ವರ್ಷ ಅಧಿಕಾರದಲ್ಲಿದ್ದು ಮಾಡಿದ್ದು ಒಂದೇ ಕೆಲಸ. ಜನತೆಯ ಹಣ ಲೂಟಿ
-ಈ ಬಾರಿಯೂ ಬಿಜೆಪಿಗೆ ಅಧಿಕಾರ ಕೊಟ್ಟರೆ ವಿಧಾನಸೌಧ ಕೊಳ್ಳೆ ಹೊಡೆಯುತ್ತಾರೆ
-ಮತ್ತೆ ನಿಮ್ಮದೇ ಹಣವನ್ನು ಐದು ವರ್ಷ ಪೂರ್ತಿ ಲೂಟಿ ಮಾಡುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.