ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರದ ಭಾಗವಾಗಿ ಕಾಂಗ್ರೆಸ್ ಭಾನುವಾರ ರಾಜ್ಯದಾದ್ಯಂತ ‘ಭಾರತ ನಿರ್ಮಾಣ ಯಾತ್ರೆ’ ಹೆಸರಿನಡಿ ಪಾದಯಾತ್ರೆಗೆ ಚಾಲನೆ ನೀಡಿದೆ.
ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭಾಗವಹಿಸಿ, ಪಕ್ಷದ ಪರ ಪ್ರಚಾರ ನಡೆಸಿದರು.
ಬೆಳಿಗ್ಗೆಯೇ ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪಾದಯಾತ್ರೆ ಆರಂಭವಾಗಿತ್ತು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಎ.ಬಾವಾ ಮತ್ತಿತರರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದರು.
ಜಿಂಕೆ ಉದ್ಯಾನದಿಂದ ಆರಂಭವಾದ ಪಾದಯಾತ್ರೆ ಮಧ್ಯಾಹ್ನದವರೆಗೂ ಸಾಗಿತ್ತು. ಈ ಅವಧಿಯಲ್ಲಿ 10 ಕಿ.ಮೀ.ಗೂ ಹೆಚ್ಚು ಕ್ರಮಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಬೆಂಬಲಕ್ಕೆ ನಿಲ್ಲುವಂತೆ ಜನರಿಗೆ ಮನವಿ ಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು, ಯೋಜನೆಗಳನ್ನು ವಿವರಿಸುವ ಕರಪತ್ರಗಳನ್ನು ಹಂಚಿದರು. ಜೊತೆಯಲ್ಲೇ ವಿರೋಧ ಪಕ್ಷಗಳು ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಗೆ ಉತ್ತರವಿರುವ ಕರಪತ್ರಗಳನ್ನೂ ವಿತರಿಸಿದರು.
ಅಧಿಕೃತ ಚಾಲನೆ: ಮೈಸೂರು ರಸ್ತೆ ವೃತ್ತದ ಡಾ.ರಾಜ್‌ಕುಮಾರ್ ಪ್ರತಿಮೆ ಬಳಿ ಮಧ್ಯಾಹ್ನ 3 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಪರಮೇಶ್ವರ್ ಅವರು ಪಾದಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಬಳಿಕ ಸಂಗಂ ವೃತ್ತ, ಜಗಜೀವನ್ ರಾಮ್ ನಗರ ಮತ್ತಿತರ ಕಡೆಗಳಲ್ಲಿ ಭಾರತ ನಿರ್ಮಾಣ ಯಾತ್ರೆ ನಡೆಯಿತು.
ಸಚಿವರಾದ ಎಚ್.ಆಂಜನೇಯ, ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಜಿ.ಎ.ಬಾವಾ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪರಮೇಶ್ವರ್, ‘ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಏಳು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ದಿನ 10ರಿಂದ 15 ಕಿ.ಮೀ. ಪಾದಯಾತ್ರೆ ನಡೆಸಲಾಗುವುದು.
ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೇ ಪಾದಯಾತ್ರೆಯ ನೇತೃತ್ವ ವಹಿಸುತ್ತಾರೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.