ADVERTISEMENT

ಕಾಂಗ್ರೆಸ್ ಅಧಿಕೃತ ಪ್ರಚಾರಕ್ಕೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:38 IST
Last Updated 12 ಏಪ್ರಿಲ್ 2013, 19:38 IST

ಬೆಂಗಳೂರು: ಕಾಂಗ್ರೆಸ್ ಶನಿವಾರದಿಂದ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸುತ್ತಿದೆ. ಇನ್ನೂ ಅಭ್ಯರ್ಥಿಯ ಹೆಸರು ಪ್ರಕಟವಾಗದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲೇ ಮೊದಲ ಪ್ರಚಾರ ಸಭೆ ನಡೆಯಲಿದೆ.

ವಿಧಾನ ಪರಿಷತ್‌ನ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ನೇತೃತ್ವದ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಈ ಚುನಾವಣೆಯ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮಗಳ ನಿಗದಿ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಬುಧವಾರದಿಂದ ನಾಮಪತ್ರ ಸಲ್ಲಿಕೆಗೆ ಚಾಲನೆ ದೊರೆತಿರುವುದರಿಂದ ಶನಿವಾರದಿಂದಲೇ (ಏ.13) ಪಕ್ಷದ ಚುನಾವಣಾ ಪ್ರಚಾರ ಆರಂಭಿಸಲು ಸಮಿತಿ ಸಿದ್ಧತೆ ನಡೆಸಿದೆ.

`ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಲ್ಲೇಶ್ವರ ಮೈದಾನದಲ್ಲಿ ಶನಿವಾರ ಮೊದಲ ಪ್ರಚಾರ ಸಭೆ ನಡೆಯಲಿದೆ. ಇದರೊಂದಿಗೆ ಪಕ್ಷದ ಅಧಿಕೃತ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು' ಎಂದು ವೀರಣ್ಣ ಮತ್ತಿಕಟ್ಟಿ ಅವರು `ಪ್ರಜಾವಾಣಿ'ಗೆ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ, ಎಐಸಿಸಿ ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವರು. ಚುನಾವಣಾ ಪ್ರಚಾರ ಸಮಿತಿಯ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ವಿವರಿಸಿದರು.

ಅಭ್ಯರ್ಥಿ ಹೆಸರಿಸದ ಕ್ಷೇತ್ರ: ಒಟ್ಟು 177 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಏ.5ರಂದು ಕಾಂಗ್ರೆಸ್ ಪ್ರಕಟಿಸಿದೆ. ಬೆಂಗಳೂರಿನ ಹತ್ತು ಸೇರಿದಂತೆ 47 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಪಕ್ಷದ ಮೊದಲ ಪ್ರಚಾರ ಸಭೆ ನಡೆಯುತ್ತಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರವೂ ಅವುಗಳಲ್ಲಿ ಒಂದು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರ ಸಹೋದರ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಲ್ಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಕೆಪಿಸಿಸಿ ಚುನಾವಣಾ ಸಮಿತಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರೊಬ್ಬರ ಹೆಸರನ್ನೇ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಹಾಗೂ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಇರುವವರ ಕುಟುಂಬದ ಸದಸ್ಯರು, ಹತ್ತಿರದ ಸಂಬಂಧಿಗಳಿಗೆ ಪಕ್ಷದ ಟಿಕೆಟ್ ನೀಡಬೇಕೇ, ಬೇಡವೇ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಪರಿಶೀಲಿಸುತ್ತಿದೆ. ಇದರಿಂದಾಗಿ ಮಲ್ಲೇಶ್ವರದ ಅಭ್ಯರ್ಥಿ ಯಾರು ಎಂಬುದನ್ನು ಕಾಂಗ್ರೆಸ್ ಇನ್ನೂ ಖಚಿತಪಡಿಸಿಲ್ಲ. ಕೆಪಿಸಿಸಿ ಮೂಲಗಳ ಪ್ರಕಾರ ಶಿವರಾಂ ಶನಿವಾರ ನಡೆಯುವ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಾರೆ.

ಪ್ರಚಾರಕರ ಪಟ್ಟಿಯೂ ಬಾಕಿ: ಪಕ್ಷದ ಪರ ಮತ ಯಾಚನೆಗಾಗಿ 40 ಮಂದಿಯನ್ನು ತಾರಾ ಪ್ರಚಾರಕರನ್ನಾಗಿ ಬಳಸಿಕೊಳ್ಳಲು ಯೋಚಿಸಿರುವ ಪ್ರಚಾರ ಸಮಿತಿ, ಈ ಸಂಬಂಧ ಪಟ್ಟಿಯೊಂದನ್ನು ಎಐಸಿಸಿಗೆ ರವಾನಿಸಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಸಂಸದ ಮತ್ತು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಕೇಂದ್ರದ 20 ಮಂದಿ ಈ ಪಟ್ಟಿಯಲ್ಲಿದ್ದಾರೆ. ಉಳಿದ 20 ಮಂದಿ ರಾಜ್ಯ ಕಾಂಗ್ರೆಸ್ ಮುಖಂಡರು ಹಾಗೂ ಚಿತ್ರರಂಗದ ಕೆಲ ಪ್ರಮುಖರು.

`ಚುನಾವಣಾ ಸಮಿತಿ ಕಳುಹಿಸಿರುವ ತಾರಾ ಪ್ರಚಾರಕರ ಪಟ್ಟಿಗೆ ಇನ್ನೂ ಅನುಮೋದನೆ ದೊರೆತಿಲ್ಲ. ಸೋನಿಯಾ, ರಾಹುಲ್ ಅವರ ಸಮಯ ಕೂಡ ನಿಗದಿಯಾಗಿಲ್ಲ. ಕೆಪಿಸಿಸಿ ಇನ್ನೂ ಎಐಸಿಸಿಯಿಂದ ಈ ಕುರಿತ ಸಂದೇಶದ ನಿರೀಕ್ಷೆಯಲ್ಲಿದೆ' ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.