ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಅಕ್ರಮ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST

ನವದೆಹಲಿ: ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿರುವ ನರಣ್‌ಭಾಯಿ ರಥ್ವಾ ಅವರ ನಾಮಪತ್ರ ಸಲ್ಲಿಕೆಯಲ್ಲಿ ಅಕ್ರಮ ನಡೆದಿವೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ಮಂಗಳವಾರ ರಾತ್ರಿ ದೂರು ನೀಡಿದೆ. ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್‌, ಅನಂತ ಕುಮಾರ್‌, ಪೀಯೂಷ್‌ ಗೋಯಲ್‌, ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರನ್ನೊಳಗೊಂಡ ನಿಯೋಗ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್‌ ಅವರನ್ನು ಭೇಟಿಯಾಗಿ ವಿರುದ್ಧ ದೂರು ಸಲ್ಲಿಸಿತು.

‘ನಾಮಪತ್ರದ ಜತೆಗೆ ಲೋಕಸಭೆಯಿಂದ ಯಾವುದೇ ಬಾಕಿ ಇಲ್ಲದ ಪ್ರಮಾಣಪತ್ರ ಸಲ್ಲಿಸಲು ರಥ್ವಾ ವಿಫಲರಾಗಿದ್ದಾರೆ. ಬಾಕಿ ಇಲ್ಲದ ಪ್ರಮಾಣಪತ್ರವನ್ನು ಮಾರ್ಚ್‌ 12ರಂದು ಮಧ್ಯಾಹ್ನ 3.30ಕ್ಕೆ ಲೋಕಸಭೆ ಸಚಿವಾಲಯ ನೀಡಿದೆ. ಆದರೆ, ಈ ವೇಳೆಗೆ ನಾಮಪತ್ರ ಸಲ್ಲಿಸುವ ಅವಧಿ ಮುಗಿದಿತ್ತು. ಹೀಗಾಗಿ, ನಕಲಿ ಪ್ರಮಾಣಪತ್ರ ಸಲ್ಲಿಸಿರುವ ಸಾಧ್ಯತೆಯೂ ಇದೆ’ ಎಂದು ಸಚಿವ ಪೀಯೂಷ್‌ ಗೋಯಲ್‌ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ರಥ್ವಾ ಅವರಿಗೆ ದಾಖಲೆಗಳನ್ನು ನೀಡಿರುವ ಬಗ್ಗೆ ತನಿಖೆ ನಡೆಸುವಂತೆ ಲೋಕಸಭೆ ಮಹಾಪ್ರಧಾನ ಕಾರ್ಯದರ್ಶಿ ಅವರಿಗೆ ಸ್ಪೀಕರ್‌ ಸುಮಿತ್ರಾ ಮಹಾಜನ್‌  ಆದೇಶ ನೀಡಿದ್ದಾರೆ’ ಎಂದು ತಿಳಿಸಿದರು. ಬಿಜೆಪಿ ಆರೋಪಗಳನ್ನು ರಥ್ವಾ ತಳ್ಳಿ ಹಾಕಿದ್ದಾರೆ.

‘ನನ್ನ ಲೋಕಸಭೆಯ ಸದಸ್ಯತ್ವದ ಅವಧಿ 2009ರಲ್ಲೇ ಮುಗಿದಿತ್ತು. ಆ ಸಂದರ್ಭದಲ್ಲಿ ಲೋಕಸಭೆ ಸಚಿವಾಲಯದಿಂದ ಪಡೆದಿದ್ದ ಬಾಕಿ ಇಲ್ಲದ ಪ್ರಮಾಣಪತ್ರವನ್ನು ಈಗ ಸಲ್ಲಿಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.