ADVERTISEMENT

ಕಾಂಗ್ರೆಸ್‌ ಮುಖಂಡ ಅಹ್ಮದ್‌ನಿಂದ ವೈದ್ಯರ ಮೇಲೆ ಹಲ್ಲೆ: ದೂರು ದಾಖಲು

ಇಲಾಖಾ ತನಿಖೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 9:55 IST
Last Updated 2 ಮಾರ್ಚ್ 2018, 9:55 IST
ಹಲ್ಲೆ ಮಾಡಿದ ಫರ್ಹಾನ್ ಅಹ್ಮದ್
ಹಲ್ಲೆ ಮಾಡಿದ ಫರ್ಹಾನ್ ಅಹ್ಮದ್   

ಬಳ್ಳಾರಿ: ಇಲ್ಲಿನ ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ ಗಾಯತ್ರಿ ಅವರ ಪತಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫರ್ಹಾನ್‌ ಅಹ್ಮದ್‌ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೇಡಿಯಾಲಜಿ ವಿಭಾಗದ ವೈದ್ಯ ವಿನೋದ್‌ ಅವರು ಗಾಂಧಿನಗರ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

ವೈದ್ಯರನ್ನು ಬೆಂಬಲಿಸಿ ಭಾರತೀಯ ವೈದ್ಯಕೀಯ ಸಂಘ, ರೇಡಿಯಾಲಜಿಸ್ಟರ ಸಂಘ ಮತ್ತು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಪ್ರಮುಖರು ಠಾಣೆಯಲ್ಲಿ ಹಾಜರಿದ್ದರು.


ಹಲ್ಲೆಗೊಳಗಾದ ಜಿಲ್ಲಾಸ್ಪತ್ರೆ ವೈದ್ಯ ಡಿ.ವಿನೋದ್

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಈ ಕುರಿತು ಪ್ರತಿಕ್ರಿಯಿಸಿ,‘ಮಹಿಳಾ ಅಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ’‌ ಎಂದರು. ‘ಹಲ್ಲೆ ಘಟನೆಗೆ ಸಂಬಂಧಿಸಿ ಸಮಗ್ರ ವರದಿ ನೀಡಲು ನಗರ ಉಪವಿಭಾಗದ ಡಿವೈಎಸ್ಪಿಗೆ ಸೂಚಿಸಿರುವೆ’ ಎಂದು  ಅವರು ತಿಳಿಸಿದರು. 

ಪ್ರಕರಣ ವಿವರ : ಗರ್ಭಿಣಿಯಾಗಿರುವ ಗಾಯತ್ರಿ ಅವರು ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಬುಧವಾರ ತೆರಳಿದ್ದರು. ‘ಆ ಸಮಯದಲ್ಲಿ ಬೇರೆ ರೋಗಿಗಳನ್ನು ಉಪಚರಿಸುತ್ತಿದ್ದ ವೈದ್ಯರು ಇವರನ್ನು ಸ್ವಲ್ಪ ಹೊತ್ತು ಕಾಯುವಂತೆ ಕೋರಿದರು. ತಮಗೆ ಬೇರೆ ಕೆಲಸಗಳ ನಿಮಿತ್ತ ಹೊರಡಬೇಕಿದೆ, ಮೊದಲು ತಮ್ಮ ಆರೋಗ್ಯ ತಪಾಸಣೆ ಮಾಡುವಂತೆ ಗಾಯತ್ರಿ ಒತ್ತಾಯಿಸಿದರು. ಇದರಿಂದ ವೈದ್ಯರು ಮತ್ತು ಗಾಯತ್ರಿ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಗಾಯತ್ರಿ ಅವರು ತಮ್ಮ ಪತಿ ಫರ್ಹಾನ್‌ ಅಹ್ಮದ್‌ ಅವರನ್ನು ಫೋನಾಯಿಸಿ ಕರೆಸಿಕೊಂಡರು. ಫರ್ಹಾನ್‌ ಸಿಟ್ಟಿನಿಂದ ವೈದ್ಯರ ಮೇಲೆ ಹಲ್ಲೆ ನಡೆಸಿದರು’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 

ಬಳ್ಳಾರಿ ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ ಗಾಯತ್ರಿ
***
‘ತೀವ್ರ ಆಘಾತ’:  ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ, ವೈದ್ಯ ವಿನೋದ್‌ ಅವರ ಅಕ್ಕ, ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ವೈದ್ಯೆ ಭಾವನಾ, ‘ಹಲ್ಲೆ ಘಟನೆಯ ಆಘಾತದಿಂದ ನಾವು ಹೊರಬರಲು ಇನ್ನೂ ಆಗಿಲ್ಲ. ಮುಂದಿನ ತಿಂಗಳು ತಮ್ಮನ ಮದುವೆ ಇದೆ. ಇಂಥ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ದೂರು ನೀಡಲು ಆರಂಭದಲ್ಲಿ ಹಿಂಜರಿದೆವು’ ಎಂದರು.
***
ಪೊಲೀಸರು–ವೈದ್ಯರ ವಾಟ್ಸ್‌ ಆ್ಯಪ್‌ ಗ್ರೂಪ್‌!:  ‘ವೈದ್ಯರ ಮೇಲೆ ಹಲ್ಲೆ ಘಟನೆಗಳನ್ನು ತಡೆಯಲು, ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ಎಸ್ಪಿ ಆರ್‌.ಚೇತನ್‌ ಒಂದು ವರ್ಷದ ಹಿಂದೆಯೇ ಪೊಲೀಸರ ಮತ್ತು ವೈದ್ಯರ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿದ್ದಾರೆ. ಆ ಗುಂಪಿನಲ್ಲಿ ಇದ್ದಾಗ್ಯೂ ಮಹಿಳಾ ಅಧಿಕಾರಿ ಪತಿಯನ್ನು ಕರೆಸಿ ವೈದ್ಯರ ಮೇಲೆ ಹಲ್ಲೆ ಮಾಡಿರುವುದು ವಿಪರ್ಯಾಸ’ ಎಂದು ಡಾ.ಅರುಣಾ ಕಾಮಿನೇನಿ ಅಭಿಪ್ರಾಯಪಟ್ಟರು.

‘ಆ ಗ್ರೂಪ್‌ನಿಂದ ನಮ್ಮ ಹಲವು ಸಮಸ್ಯೆಗಳು ಪರಿಹಾರವಾಗಿವೆ. ಕೆಲವು ತುರ್ತು ಸಂದರ್ಭಗಳಲ್ಲಿ ಸಂದೇಶ ಕಳಿಸಿದ ಕೂಡಲೇ ಪೊಲೀಸರು ಬಂದು ಸನ್ನಿವೇಶವನ್ನು ನಿಯಂತ್ರಿಸಿದ್ದರು. ಇಂಥ ಅನುಕೂಲದ ನಡುವೆ ಮಹಿಳಾ ಅಧಿಕಾರಿ ಮತ್ತು ಅವರ ಪತಿ ದುರ್ವರ್ತನೆ ತೋರಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.