ಶಿವಮೊಗ್ಗ: ಗುಟ್ಕಾ ಪ್ಲಾಸ್ಟಿಕ್ ಸ್ಯಾಶೆಗೆ ಕೊನೆಗೂ ಪರ್ಯಾಯವಾಗಿ ಕಾಗದದ ಸ್ಯಾಶೆಗಳು ಮಾರುಕಟ್ಟೆಗೆ ಬಂದಿವೆ. ಗುಟ್ಕಾ ಪ್ಲಾಸ್ಟಿಕ್ ಸ್ಯಾಶೆ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕಾಗದದ ಸ್ಯಾಶೆಯಲ್ಲಿ ‘ಸ್ಟಾರ್ ಗುಟ್ಕಾ’ ಈಗ ಮಾರುಕಟ್ಟೆ ಪ್ರವೇಶಿಸಿದೆ.
ಕಳೆದ ಒಂದು ವಾರದಿಂದಲೇ ಮಾರುಕಟ್ಟೆಗೆ ಬಂದ ಕಾಗದದ ಗುಟ್ಕಾ ಸ್ಯಾಶೆಗಳು, ಥೇಟ್ ಪ್ಲಾಸ್ಟಿಕ್ ಸ್ಯಾಶೆಗಳನ್ನೇ ಹೋಲುತ್ತವೆ. ಬಹುತೇಕ ಎಲ್ಲ ಬೀಡಾ ಅಂಗಡಿಗಳಲ್ಲಿ ಹೊಸ ಕಾಗದದ ಗುಟ್ಕಾ ಸ್ಯಾಶೆಗಳು ಈಗ ರಾರಾಜಿಸುತ್ತಿವೆ.
ನಿಗದಿತ ದರಕ್ಕಿಂತ ಹೆಚ್ಚು.
ಕಾಗದದ ಗುಟ್ಕಾ ಸ್ಯಾಶೆಯ ದರದಲ್ಲಿ ಮಾತ್ರ ವ್ಯತ್ಯಾಸವಿದ್ದು, ಒಂದು ಗುಟ್ಕಾ ಪ್ಯಾಕೆಟ್‌ಗೆ ಎಂಆರ್‌ಪಿ ದರ 1.50ರೂ ಇದೆ. ಆದರೆ, ಅದನ್ನು 3ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಗ್ರಾಹಕರಿಂದಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಬೀಡಾ ಅಂಗಡಿ ವ್ಯಾಪಾರಿಗಳು.
‘ಕಾಗದದ ಸ್ಯಾಶೆಯಲ್ಲಿ ಬರುವ ಗುಟ್ಕಾಕ್ಕೆ ನಮಗೇ 2.50ರೂ. ಹಾಕುತ್ತಾರೆ. ಹೀಗಿರುವಾಗ ಎಂಆರ್‌ಪಿ ದರದಲ್ಲಿ ಹೇಗೆ ಮಾರಾಟ ಮಾಡೋದು? ಸಗಟು ವ್ಯಾಪಾರಿಗಳು ಮಾರುಕಟ್ಟೆಗೆ ಏಕಾಏಕಿ ಬಿಡುವುದಿಲ್ಲ. ಅಲ್ಪ ಪ್ರಮಾಣದಲ್ಲಿ ಬಿಟ್ಟು ಬೇಡಿಕೆಯನ್ನು ಹೆಚ್ಚಿಸುತ್ತಾರೆ. ಪ್ಲಾಸ್ಟಿಕ್ ಸ್ಯಾಶೆ ನಿಷೇಧಿಸಿರುವುದರಿಂದ ದರ ಹೆಚ್ಚಾದರೂ ಅನಿವಾರ್ಯವಾಗಿ ಗುಟ್ಕಾ ಪ್ರಿಯರು ಖರೀದಿಸುತ್ತಾರೆ ಎಂಬುದು ಸಗಟು ವ್ಯಾಪಾರಿಗಳ ಲೆಕ್ಕಾಚಾರ’ ಎನ್ನುತ್ತಾರೆ ಬೀಡಾ ಅಂಗಡಿ ವ್ಯಾಪಾರಿ ಬಸವರಾಜ್.
ಈ ಮೊದಲು 5ರೂ.ಗೆ 3ಸ್ಟಾರ್ ಗುಟ್ಕಾ ಪ್ಯಾಕೆಟ್ ನೀಡಲಾಗುತ್ತಿತ್ತು. ಆದರೆ, ಈಗ 9ರೂ.ಗೆ 3 ಪ್ಯಾಕೆಟ್ ನೀಡಲಾಗುತ್ತಿದೆ. ‘ಸ್ಟಾರ್ ಗುಟ್ಕಾ’ ಮಾತ್ರ ಕಾಗದದ ಸ್ಯಾಶೆಗಳಲ್ಲಿ ಬರುತ್ತಿದೆ. ಉಳಿದ ಗುಟ್ಕಾ ಪ್ಯಾಕೆಟ್‌ಗಳು ಪ್ಲಾಸ್ಟಿಕ್‌ನಲ್ಲಿಯೇ ಬರುತ್ತಿವೆ. ಈ ಮಧ್ಯೆ ಅತಿ ಹೆಚ್ಚು ಬೇಡಿಕೆ ಇರುವ ಆರ್‌ಎಂಡಿ (ಮಾಣಿಕ್‌ಚಂದ್ ಗುಟ್ಕಾ) ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂದು ಮತ್ತೊಬ್ಬ ಬೀಡಾ ಅಂಗಡಿ ವ್ಯಾಪಾರಿ ಮಂಜುನಾಥ್ ತಿಳಿಸುತ್ತಾರೆ.
ಗ್ರಾಹಕರಿಗೆ ಕಿರಿಕಿರಿ
ಕಾಗದದ ಸ್ಯಾಶೆಯಿಂದ ಗುಟ್ಕಾ ಪ್ರಿಯರಿಗೆ ಅಲ್ಪಮಟ್ಟಿಗೆ ಸಮಸ್ಯೆ ಆಗಿದೆ. ಕಾಗದದ ಗುಟ್ಕಾ ಸ್ಯಾಶೆಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಹರಿದು ಚೆಲ್ಲಾಪಿಲ್ಲಿಯಾಗುವ ಸಾಧ್ಯತೆಯೇ ಹೆಚ್ಚು. ಮಳೆಗಾಲದಲ್ಲಂತೂ ನೆನೆದು ಮತ್ತಷ್ಟು ಕಿರಿಕಿರಿಯಾಗುತ್ತದೆ. ಅಲ್ಲದೇ, ದರ ಕೂಡ ಹೆಚ್ಚು ಎಂದು ಗ್ರಾಹಕ ವಿರೂಪಾಕ್ಷಗೌಡ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗುಟ್ಕಾ ಪ್ಲಾಸ್ಟಿಕ್ ಸ್ಯಾಶೆಗೆ ಪರ್ಯಾಯವಾಗಿ ಕಾಗದದ ಸ್ಯಾಶೆ ಮಾರುಕಟ್ಟೆಗೆ ಆಗಮಿಸಿದ ಬೆನ್ನಲ್ಲೇ ಒಂದು ವಾರದಿಂದ ಎಪಿಎಂಸಿಯಲ್ಲಿ ಅಡಿಕೆ ವಹಿವಾಟು ಕೂಡ ಆರಂಭವಾಗಿರುವುದು ವಿಶೇಷ.
ಕಾಗದದ ಸ್ಯಾಶೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಮರುದಿನವೇ ಇಲ್ಲಿ ವಹಿವಾಟು ಪ್ರಾರಂಭವಾಗಿದ್ದು, ಅಡಿಕೆಗೂ ಉತ್ತಮ ಧಾರಣೆ ಬಂದಿದೆ. ಮಂಗಳವಾರ ಸರಕಿನ ಬೆಲೆ ಕ್ವಿಂಟಲ್‌ಗೆ 17009- 26409 ಇದೆ ಎಂದು ಮಾರುಕಟ್ಟೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.