ಎಚ್‌ಡಿ ಕೋಟೆ: ತಾಲ್ಲೂಕಿನ ದಾಸನಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮೂರು ದಿನಗಳಿಂದ ಠಿಕಾಣಿ ಹೂಡಿದ್ದ ಹುಲಿ ಸೋಮವಾರ ನಸುಕಿನಲ್ಲಿ ಕಾಡಿಗೆ ಮರಳಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಮ್ಮಯ್ಯ ತಿಳಿಸಿದ್ದಾರೆ.
ಶುಕ್ರವಾರವೇ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡ ಹುಲಿ ಒಂದು ಹೋರಿ ಹಾಗೂ ಎರಡು ಹಂದಿಗಳನ್ನು ಬೇಟೆಯಾಡಿತ್ತು. ಶನಿವಾರ ಸ್ಥಳಕ್ಕೆ ಬಂದು ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಹೆಜ್ಜೆ ಗುರುತು ಆಧರಿಸಿ ಹುಲಿ ಕಾಡಿಗೆ ಮರಳಿದೆ ಎಂದು ಅಂದಾಜಿಸಿದ್ದರು. ಆದರೆ, ಭಾನುವಾರ ಬೆಳಿಗ್ಗೆ ಮತ್ತೆ ಕಾಣಿಸಿಕೊಂಡು ಭಯ ಮೂಡಿಸಿತ್ತು.
ಹುಲಿಯನ್ನು ಸೆರೆಹಿಡಿಯಲು ಕಬ್ಬಿನ ಗದ್ದೆ ಬಳಿ ಬೋನು ಇಡಲಾಗಿತ್ತು. ಆದರೆ, ಬೋನಿಗೆ ಬೀಳದ ಹುಲಿ ಗದ್ದೆಯಿಂದ ತೆರಳಿದೆ ಎಂದು ತಿಳಿಸಲಾಗಿದೆ.ಭಾನುವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಇನ್ನಿಲ್ಲದ ಪ್ರಯತ್ನ ಮಾಡಿದರೂ ಹುಲಿ ಪೊದೆಯಿಂದ ಹೊರ ಬಂದಿರಲಿಲ್ಲ. ಆದರೆ, ಸೋಮವಾರ ನಸುಕಿನ 3ರ ಸುಮಾರಿಗೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಅದರ ಹೆಜ್ಜೆ ಗುರುತುಗಳನ್ನು ಆಧರಿಸಿ ಹುಲಿ ಕಾಡು ಸೇರಿದೆ ಎಂದು ಖಚಿತಪಡಿಸಿದ್ದಾರೆ. ಇದರೊಂದಿಗೆ ಗ್ರಾಮಸ್ಥರ ಆತಂಕ ತುಸು ಕಡಿಮೆಯಾಗಿದೆ.
ಎರಡು ತಿಂಗಳಿಂದ ಈಚೆಗೆ ಹುಲಿ ದಾಸನಪುರ ಗ್ರಾಮದ ಹೊರವಲಯದಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಿದೆ. ಕಾಡಂಚಿಗೆ ಮೇಯಲು ಹೋದ ಜಾನುವಾರುಗಳು ಹುಲಿ ಬಾಯಿಗೆ ತುತ್ತಾಗಿವೆ. ಇದರಿಂದಾಗಿ ಹುಲಿ ಮತ್ತೆ ಬರುವ ಸಾಧ್ಯತೆ ಇದೆ. ಆದ್ದರಿಂದ ಹುಲಿ ಅವಿತುಕೊಂಡಿದ್ದ ನಿಂಗೇಗೌಡರ ಕಬ್ಬಿನ ಗದ್ದೆಯಲ್ಲೇ ಬೋನು ಇಡಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.