ಹುಬ್ಬಳ್ಳಿ: ಮಾಟ, ಮಂತ್ರ ಹಾಗೂ ಕಂದಾಚಾರಗಳಿಂದ ರಾಜ್ಯವನ್ನು ಮುಕ್ತಗೊಳಿಸಬಲ್ಲ ಪ್ರಬಲ ಕಾನೂನನ್ನು ಜಾರಿಗೆ ತರಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಸರ್ಕಾರಕ್ಕೆ ಸಲಹೆ ರೂಪದ ಕರಡು ಮಸೂದೆಯೊಂದನ್ನು ಸಿದ್ಧಪಡಿಸಿದೆ.
‘ಕರ್ನಾಟಕ ನರಬಲಿ ಮತ್ತು ಇತರ ಅಮಾನವೀಯ, ದುಷ್ಟ, ಅಘೋರಿ ಪದ್ಧತಿಗಳು ಹಾಗೂ ಮಾಟ–ಮಂತ್ರ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ–2013’ ಶೀರ್ಷಿಕೆಯ ಕರಡು ಮಸೂದೆ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ನಂತರ ಮಹಾರಾಷ್ಟ್ರ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾನೂನಿನ ಅಂಶಗಳನ್ನು ಪರಿಶೀಲಿಸಿರುವ ವಿಶ್ವವಿದ್ಯಾಲಯದ ಕಾನೂನು ತಜ್ಞರು, ರಾಜ್ಯಕ್ಕೂ ಅನ್ವಯವಾಗುವಂತಹ ಉತ್ತಮ ಅಂಶಗಳನ್ನು ಸೇರಿಸಿ ಈ ಕರಡು ಮಸೂದೆಗೆ ಅಂತಿಮ ರೂಪ ನೀಡಿದ್ದಾರೆ.
ಯಾವ ಕೃತ್ಯಗಳನ್ನು ಸದರಿ ಕಾನೂನಿನಡಿ ಶಿಕ್ಷಾರ್ಹ ಎಂಬುದಾಗಿ ಪರಿಗಣಿಸಬೇಕು, ಇಂತಹ ನಿಷೇಧಿತ ಕೃತ್ಯಗಳನ್ನು ನಡೆಸುವ ಅಥವಾ ನಡೆಸಲು ಪ್ರೇರೇಪಿಸುವ ವ್ಯಕ್ತಿ ಅಥವಾ ಸಂಸ್ಥೆಗೆ ಎಂತಹ ಶಿಕ್ಷೆ ನೀಡಬೇಕು ಎಂಬುದನ್ನು ಕರಡು ಮಸೂದೆಯಲ್ಲಿ ವಿವರಿಸಲಾಗಿದೆ. ಅಲ್ಲದೇ, ಸದರಿ ಮಸೂದೆಗೆ ಕಾನೂನು ರೂಪ ನೀಡಿದ ನಂತರ ಅದರ ಅನುಷ್ಠಾನದ ಮೇಲೆ ನಿಗಾ ಇಡಲು ಆಯೋಗವೊಂದನ್ನು ರಚಿಸಬೇಕು ಎಂಬ ಸಲಹೆಯೂ ಇದರಲ್ಲಿದೆ.
ಆಯೋಗ: ಇನ್ನು, ಕಾನೂನು ರೂಪ ಪಡೆಯುವ ಈ ಮಸೂದೆಯನ್ನು ಜಾರಿಗೊಳಿಸಲು ‘ಅನಿಷ್ಟ ಮತ್ತು ಅಮಾನವೀಯ ಪದ್ಧತಿಗಳ ಪ್ರತಿಬಂಧ ಹಾಗೂ ನಿರ್ಮೂಲನಾ ಆಯೋಗ’ ರಚಿಸಬೇಕು ಎಂದೂ ಮಸೂದೆಯಲ್ಲಿ ಸಲಹೆ ಮಾಡಲಾಗಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರು ಆಯೋಗದ ಅಧ್ಯಕ್ಷರಾಗಿರಬೇಕು. ಮೂರು ಜನ ಸದಸ್ಯರನ್ನು ನೇಮಕ ಮಾಡಬೇಕು. ಈ ಪೈಕಿ ಒಬ್ಬ ಮಹಿಳಾ ಇರಬೇಕು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷರು ಈ ಆಯೋಗದ ಪದನಿಮಿತ್ತ ಸದಸ್ಯರಾಗಿರಬೇಕು ಎಂದೂ ಕರಡು ಮಸೂದೆಯಲ್ಲಿ ವಿವರಿಸಲಾಗಿದೆ.
ಶಿಕ್ಷೆ ಪ್ರಮಾಣ
ಇಂತಹ ನಿಷೇಧಿತ ಕೃತ್ಯಗಳನ್ನು ನಡೆಸುವ ಅಥವಾ ನಡೆಸುವಂತೆ ಪ್ರಚೋದಿಸುವ ವ್ಯಕ್ತಿಗೆ ಕನಿಷ್ಠ 6 ತಿಂಗಳು ಹಾಗೂ ಗರಿಷ್ಠ 7 ವರ್ಷಗಳ ಕಾರಾಗೃಹ ಶಿಕ್ಷೆ, ₨ 5 ಸಾವಿರದಿಂದ ₨ 50 ಸಾವಿರ ವರೆಗೆ ದಂಡ ವಿಧಿಸಲು ಸಹ ಈ ಕರಡು ಮಸೂದೆ ಅವಕಾಶ ಕಲ್ಪಿಸುತ್ತದೆ.
ಯಾವುದು ನಿಷೇಧ?
* ದೆವ್ವ/ ಭೂತ ಹಿಡಿದಿದೆ ಎಂದು ಹೇಳಿ, ಅದನ್ನು ಓಡಿಸುವ ನೆಪದಲ್ಲಿ ವ್ಯಕ್ತಿಯನ್ನು ಥಳಿಸುವುದು, ಹಗ್ಗ, ಸರಪಳಿಯಿಂದ ಬಂಧಿಸುವುದು, ಬಡಿಯುವುದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಪದಾರ್ಥಗಳನ್ನು ತಿನ್ನಿಸುವುದು ಇಲ್ಲವೇ ಕುಡಿಸುವುದು, ವ್ಯಕ್ತಿಯ ಗೌರವಕ್ಕೆ ಧಕ್ಕೆ ಬರುವಂತಹ ರೀತಿಯಲ್ಲಿ ನಡೆಸಿಕೊಳ್ಳುವುದು.
*ಚಮತ್ಕಾರ ಇಲ್ಲವೇ ‘ದೈವಶಕ್ತಿಯ ಅಸಮಾಧಾನಕ್ಕೆ ಗುರಿಯಾಗುತ್ತೀರಿ’ ಎಂಬುದಾಗಿ ಹೇಳಿ ಜನರಲ್ಲಿ ಭಯ ಹುಟ್ಟಿಸುವುದು, ಶೋಷಣೆ, ಮೋಸ ಮಾಡುವುದು, ಹಾದಿ ತಪ್ಪಿಸುವುದು.
*ಬಾನಾಮತಿ, ಮಾಯ, ಮಾಟ, ತಂತ್ರ ಸೇರಿದಂತೆ ಇತರ ಪದ್ಧತಿಗಳ ಮೂಲಕ ಅಗೋಚರ ಶಕ್ತಿ ಅಥವಾ ದುಷ್ಟ ಶಕ್ತಿಗಳು ಒಲಿಯುವಂತೆ ಮಾಡುತ್ತೇವೆ ಎಂಬುದಾಗಿ ಹೇಳುವುದು ಇಲ್ಲವೇ ಇಂತಹ ಮಾತುಗಳನ್ನು ನಂಬುವಂತೆ ಜನರನ್ನು ಒತ್ತಾಯಿಸುವುದು, ಪುಸಲಾಯಿಸುವುದು.
*ಐಶ್ವರ್ಯ, ನಿಧಿ ಇಲ್ಲವೇ ಅಮೂಲ್ಯ ವಸ್ತುಗಳ ಶೋಧದ ನೆಪವೊಡ್ಡಿ ಮನುಷ್ಯರನ್ನು ಇಲ್ಲವೇ ಪ್ರಾಣಿಗಳನ್ನು ಬಲಿ ಕೊಡುವುದು.
*ಇಂದ್ರಿಯಾತೀತ ಶಕ್ತಿಯ ಪ್ರಭಾವ ಹೊಂದಿದ್ದು, ತನ್ನ ಮಾತನ್ನು ಕೇಳದಿದ್ದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಮಾತುಗಳ ಮೂಲಕ ಜನರಲ್ಲಿ ಭಯ ಹುಟ್ಟಿಸುವುದು, ವಂಚಿಸುವುದು.
*ಮಾಟ– ಮಂತ್ರ ಶಕ್ತಿ ಮೂಲಕ ಆಕಳು ಅಥವಾ ಎಮ್ಮೆಯ ಹಾಲು ಕರೆಯುವ ಸಾಮರ್ಥ್ಯವನ್ನು ಕುಂಠಿತಗೊಳಿಸುವುದಾಗಿ ಬೆದರಿಸುವುದು, ಇಂತಹ ಮಾತುಗಳ ಮೂಲಕ ದಾರಿದ್ರ್ಯ ಬರುವಂತೆ ಮಾಡುವೆ, ರೋಗ ಬರುವಂತೆ ಮಾಡುವೆ ಎನ್ನುವುದು.
*ವ್ಯಕ್ತಿಯೊಬ್ಬನನ್ನು ಸೈತಾನ ಎಂಬುದಾಗಿ ಘೋಷಿಸುವುದು.
*ಅಗೋಚರ ಶಕ್ತಿಗಳನ್ನು ಒಲಿಸಿಕೊಳ್ಳುವ ನೆಪವೊಡ್ಡಿ ವ್ಯಕ್ತಿ ಮೇಲೆ ಹಲ್ಲೆ ನಡೆಸುವುದು, ವ್ಯಕ್ತಿಯನ್ನು ಬೆತ್ತಲೆ ಓಡಾಡಿಸುವುದು ಇಲ್ಲವೇ ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳದಂತೆ ನಿರ್ಬಂಧಿಸುವುದು.
*ಹಾವು, ಚೇಳು ಅಥವಾ ನಾಯಿ ಕಚ್ಚಿದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯದಂತೆ ವ್ಯಕ್ತಿಯನ್ನು ತಡೆದು, ಆತನಿಗೆ ಮಾಟ–ಮಂತ್ರ ಮಾಡುವುದು, ಇಲ್ಲವೇ ತಾಯತ, ತಾಲಿಸ್ಮಾನ್, ದಾರ ಕಟ್ಟಿ ಕಟ್ಟುವ ಮೂಲಕ ಬಾಧೆ ನಿವಾರಿಸುವುದಾಗಿ ನಂಬಿಸುವುದು, ಕೈಬೆರಳುಗಳಿಂದ ಶಸ್ತ್ರಚಿಕಿತ್ಸೆ ನೆರವೇರಿಸುವುದಾಗಿ ಜನರನ್ನು ನಂಬಿಸುವುದು.
*ಗರ್ಭದಲ್ಲಿರುವ ಭ್ರೂಣದ ಲಿಂಗವನ್ನು ಬದಲಾಯಿಸುವುದಾಗಿ ಹೇಳುವುದು.
*ತನ್ನ ಬಳಿ ಬರುವ ಭಕ್ತ ಅಥವಾ ಭಕ್ತೆ ಹಿಂದಿನ ಜನ್ಮದಲ್ಲಿ ತನ್ನ ಪತಿ ಅಥವಾ ಪತ್ನಿಯಾಗಿದ್ದರು ಎಂಬುದಾಗಿ ಹೇಳಿ ಆ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು.
*ಬುದ್ಧಿಮಾಂದ್ಯ ವ್ಯಕ್ತಿಗೆ ಅತಿಂದ್ರೀಯ ಶಕ್ತಿ ಇದೆ ಎಂಬುದಾಗಿ ಜನರನ್ನು ನಂಬಿಸಿ, ಆತನನ್ನು ವ್ಯಾಪಾರ ಅಭಿವೃದ್ಧಿಗೆ ಬಳಸಿಕೊಳ್ಳುವುದು ಹಾಗೂ ತಮ್ಮ ಆಯ್ಕೆಯ ಮಗುವನ್ನು ಪಡೆಯಲು ದಂಪತಿಗೆ ಆಶೀರ್ವಾದ ಮಾಡುವುದಾಗಿ ಹೇಳಿಕೊಳ್ಳುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.