ADVERTISEMENT

ಕಾನ್‌ಸ್ಟೆಬಲ್‌ ಆದ ಸ್ನಾತಕೋತ್ತರ ಪದವೀಧರರು

ಕರ್ತವ್ಯಕ್ಕೆ ಸಜ್ಜಾದ ರಾಜ್ಯದ 8 ಜಿಲ್ಲೆಯ 342 ಸಿಬ್ಬಂದಿ

ಕೆ.ಎಸ್.ಪ್ರಣವಕುಮಾರ್
Published 17 ಜೂನ್ 2018, 17:59 IST
Last Updated 17 ಜೂನ್ 2018, 17:59 IST
ಚಿತ್ರದುರ್ಗ ಜಿಲ್ಲೆಯ ಐಮಂಗಲದ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಕಾನ್‌ಸ್ಟೆಬಲ್‌ಗಳು. ಪ್ರಾಂಶುಪಾಲ ಪಾಪಣ್ಣ ಇದ್ದಾರೆ.
ಚಿತ್ರದುರ್ಗ ಜಿಲ್ಲೆಯ ಐಮಂಗಲದ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಕಾನ್‌ಸ್ಟೆಬಲ್‌ಗಳು. ಪ್ರಾಂಶುಪಾಲ ಪಾಪಣ್ಣ ಇದ್ದಾರೆ.   

ಚಿತ್ರದುರ್ಗ: ಎಂ.ಎಸ್ಸಿ, ಎಂ.ಎಸ್‌.ಡಬ್ಲ್ಯು, ಎಂ.ಬಿ.ಎ ಹೀಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕಾದ ಅನೇಕರು ಆರ್ಥಿಕ ಸಮಸ್ಯೆ, ಕುಟುಂಬ ನಿರ್ವಹಣೆ, ಜೀವನೋಪಾಯದ ಹುಡುಕಾಟದಲ್ಲಿದ್ದಾಗ ಅವರಿಗೆ ಒದಗಿಬಂದಿದ್ದು ಕಾನ್‌ಸ್ಟೆಬಲ್ ಹುದ್ದೆ.

ಜಿಲ್ಲೆಯ ಐಮಂಗಲದ ಪೊಲೀಸ್ ತರಬೇತಿ ಶಾಲೆಯಲ್ಲಿ 2017ರ ಸೆಪ್ಟೆಂಬರ್ 25ರಿಂದ ಎಂಟು ತಿಂಗಳ ಕಾಲ ರಾಜ್ಯದ ಎಂಟು ಜಿಲ್ಲೆಗಳ 342 ಸಿಪಿಸಿ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಪದವಿ ಹಾಗೂ ಸ್ನಾತಕೋತ್ತರ ಪದವೀಧರರೇ ಆಗಿದ್ದಾರೆ. ಮೂರನೇ ತಂಡದಲ್ಲಿದ್ದ ಇವರು ತರಬೇತಿ ಪೂರ್ಣಗೊಳಿಸಿ ಕಾನ್‌ಸ್ಟೆಬಲ್‌ಗಳಾಗಿ ನಿರ್ಗಮಿಸುತ್ತಿದ್ದಾರೆ.

ಹುದ್ದೆ ಯಾವುದಾದರೇನು, ಸಾಮಾಜಿಕ ಸೇವೆ ಮಾಡಬೇಕು ಎಂಬ ಕನಸು ಹೊತ್ತು ಬಂದ ಅನೇಕರು ಅದನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ‘ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಂಥ ಮಹತ್ತರ ಜವಾಬ್ದಾರಿ ಪೊಲೀಸರದ್ದು. ಅದಕ್ಕೆ ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತೇವೆ’ ಎಂಬುದು ಪ್ರಶಿಕ್ಷಣಾರ್ಥಿಗಳ ವಿಶ್ವಾಸದ ನುಡಿ.

ADVERTISEMENT

‘ಬೆಂಗಳೂರಿನ 137, ಬೆಳಗಾವಿಯ 32, ಮಂಗಳೂರಿನ 2, ರಾಮನಗರದ 102, ಧಾರವಾಡದ 53, ಚಿಕ್ಕಮಗಳೂರಿನ 3, ಉಡುಪಿ ಹಾಗೂ ಶಿವಮೊಗ್ಗದ ತಲಾ 7 ಸೇರಿ ಒಟ್ಟು 342 ಮಂದಿ ತರಬೇತಿ ಪಡೆದಿದ್ದಾರೆ. ಇವರಲ್ಲಿ ಗ್ರಾಮೀಣ ಭಾಗದವರೂ ಇದ್ದಾರೆ’ ಎನ್ನುತ್ತಾರೆ ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಎಸ್‌.ಪಿ. ಪಾಪಣ್ಣ.

ಉದ್ಯೋಗ ಅನಿವಾರ್ಯ
‘ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ಅದಕ್ಕಾಗಿ ಸಮಾಜಕಾರ್ಯ ಅಧ್ಯಯನ (ಎಂ.ಎಸ್‌.ಡಬ್ಲ್ಯು) ಆಯ್ಕೆ ಮಾಡಿಕೊಂಡೆ. ಮುಂದೆ ಓದಿ ಉನ್ನತ ಹುದ್ದೆ ಪಡೆಯುವ ಕನಸು ಇದೆ. ಆದರೆ, ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ನೌಕರಿಗೆ ಸೇರುವುದು ಅನಿವಾರ್ಯವಾಯಿತು. ಹೀಗಾಗಿ ಕಾನ್‌ಸ್ಟೆಬಲ್ ಹುದ್ದೆ ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ತುಮಕೂರು ಜಿಲ್ಲೆ ಚಿಕ್ಕತುರುವೇಕೆಯ ಸಿ.ರಘು.

‘ಸಾಮಾಜಿಕ ಕಳಕಳಿಯ ಜತೆಗೆ ಸಮಾಜದಲ್ಲಿ ಹೆಸರೂ ಗಳಿಸಬೇಕು ಎಂಬ ಉದ್ದೇಶಕ್ಕಾಗಿ ಎಂ.ಎಸ್‌.ಡಬ್ಲ್ಯು ಆಯ್ಕೆ ಮಾಡಿಕೊಂಡೆ. ಪದವಿ ಪೂರ್ಣಗೊಂಡ ನಂತರ ಮೂರು ತಿಂಗಳು ಬೇರೆ ಕಡೆ ಕೆಲಸ ಮಾಡಿದಾಗ ನನ್ನ ಕನಸು ಈಡೇರಲಿಲ್ಲ. ಅಲ್ಲಿ ನಿರಾಸೆಯಾಗಿದ್ದರಿಂದ ಇತ್ತ ಮುಖ ಮಾಡಿದೆ’ ಎಂದು
ಕನಕಪುರ ತಾಲ್ಲೂಕಿನ ನೇರಲಹಟ್ಟಿಯ ಜಿ.ಎನ್. ಸುನೀಲ್‌ಕುಮಾರ್ ತಿಳಿಸಿದರು.

ಚಿಕ್ಕಂದಿನಿಂದಲೂ ಪೊಲೀಸ್ ಆಗುವ ಆಸೆ

‘ನಮ್ಮ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹೀಗೆ ಹತ್ತಿರದವರೆಲ್ಲ ಪೊಲೀಸ್ ಮತ್ತು ಸೇನೆಗೆ ಸೇರಿದವರೇ ಇದ್ದರು. ಬಾಲ್ಯದಿಂದಲೇ ನಾನೂ ಸೇನೆಗೆ ಸೇರುವ ಕನಸು ಕಾಣುತ್ತಿದ್ದೆ. ಮನೆಯಲ್ಲಿನ ಕೆಲ ಸಮಸ್ಯೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಕೊನೆಗೆ ಪೊಲೀಸನಾದರೂ ಆಗಬೇಕು ಅಂದುಕೊಂಡು ಇದನ್ನು ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕಲ್ಲುಬಾಣೆಯ ಆರ್.ಎಂ. ಜಗದೀಶ್.

* ಪೊಲೀಸ್ ತರಬೇತಿ ಶಾಲೆಗೆ ಡಿಸಿಎಂ ಜಿ.ಪರಮೇಶ್ವರ ಬರುತ್ತಿದ್ದಾರೆ. ಅಂದು ಕಾನ್‌ಸ್ಟೆಬಲ್‌ಗಳ ನಿರ್ಗಮನ ಹಾಗೂ ಪಥಸಂಚಲನ ನಡೆಯಲಿದೆ.

–ಪಾಪಣ್ಣ, ತರಬೇತಿ ಶಾಲೆ ಪ್ರಾಂಶುಪಾಲ 

ಮುಖ್ಯಾಂಶಗಳು

* ಆಕಾಂಕ್ಷಿಗಳಲ್ಲಿದೆ ಸಮಾಜಸೇವೆಯ ಕನಸು

* ಗ್ರಾಮೀಣ ಭಾಗದವರೇ ಹೆಚ್ಚು

* ಪದವಿ ಪಡೆದವರಿಗೆ ಸಿಂಹಪಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.