ADVERTISEMENT

‘ಕಾಯ್ದೆ ಪ್ರಕಾರವೇ ಶಿಫಾರಸು’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:33 IST
Last Updated 22 ಮಾರ್ಚ್ 2018, 19:33 IST

ಮೈಸೂರು: ‘ಲಿಂಗಾಯತ ಮತ್ತು ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕೆಂದು ಅಲ್ಪಸಂಖ್ಯಾತರ ಆಯೋಗದ ಕಾಯ್ದೆಯ ಅನುಸಾರವೇ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಗುರುವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೂ ಅಧಿಕಾರವಿದೆ. ಅಲ್ಲದೆ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌, ಕಾನೂನು ಇಲಾಖೆ ಕಾರ್ಯದರ್ಶಿ, ಸರ್ಕಾರದ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಪಡೆದು ತೀರ್ಮಾನಕ್ಕೆ ಬರಲಾಗಿದೆ’ ಎಂದರು.

ಸೋಲಿಸಿ ಎಂದಿದ್ದು ಸತ್ಯ: ‘ಜೆಡಿಎಸ್‌ ವರಿಷ್ಠ ದೇವೇಗೌಡರ ಮಕ್ಕಳನ್ನು ಸೋಲಿಸುವಂತೆ ಕರೆ ನೀಡಿರುವ ವಿಚಾರ ಸತ್ಯ. ಕುಮಾರಸ್ವಾಮಿ ಮೈಸೂರಿಗೆ ಬಂದಾಗ ನನಗೇನು ಮುತ್ತು ನೀಡಿ ಹೋಗಿದ್ದಾರೆಯೇ? ಸಿದ್ದರಾಮಯ್ಯನನ್ನು ಗೆಲ್ಲಿಸಿ ಎಂದು ದೇವೇಗೌಡರು ಹೇಳಿದ್ದಾರೆಯೇ? ಜೆಡಿಎಸ್ ಸೋಲಿಸು
ವಂತೆ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಬಹಿರಂಗವಾಗಿಯೇ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ADVERTISEMENT

‘ಮನೆಯಿಂದ ಹೊರಬಂದು ಕಾರು ಹತ್ತುವಾಗ ಫೋನ್‌ ನೀಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡರ ಜೊತೆ ಈ ವಿಚಾರವನ್ನು ಮಾತನಾಡಿದೆ. ಆಗ ಸುತ್ತಮುತ್ತ ಜನರಿದ್ದರು. ಇದರಲ್ಲಿ ಕದ್ದುಮುಚ್ಚಿ ಮಾತನಾಡುವ ವಿಚಾರವೇನಿದೆ? ರೆಕಾರ್ಡ್‌ ಮಾಡಿಕೊಂಡರೆ ನಾನೇನು ಮಾಡಬೇಕು? ಅಷ್ಟಕ್ಕೂ ನಾನು ಇದನ್ನು ಅಲ್ಲಗಳೆಯುತ್ತಿಲ್ಲ. ನಮ್ಮದು ತೆರೆದ ಪುಸ್ತಕ’ ಎಂದು ಹೇಳಿದರು.

ವಿ.ಶ್ರೀನಿವಾಸಪ್ರಸಾದ್‌ ಬರೆದಿರುವ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿ, ‘ನಂಜನಗೂಡು ಉಪಚುನಾವಣೆ ವೇಳೆ ಅಕ್ರಮ ನಡೆದಿದ್ದರೆ ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡಲಿ. ಪುಸ್ತಕದಲ್ಲಿ ಬರೆದುಕೊಂಡರೆ ಏನು ಪ್ರಯೋಜನ? ಸೋತ ಮೇಲೆ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಕಿಮ್ಮತ್ತು ಇಲ್ಲ. ಇದು ಜನರನ್ನು ದಿಕ್ಕು ತಪ್ಪಿಸುವ ಕೆಲಸ’ ಎಂದರು.

ಚಾಮುಂಡಿಬೆಟ್ಟಕ್ಕೆ ರಾಹುಲ್‌

ಜನಾಶೀರ್ವಾದ ಯಾತ್ರೆ ಅಂಗವಾಗಿ ಮಾರ್ಚ್‌ 24ರಂದು ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

‘ಸುತ್ತೂರು ಮಠಕ್ಕೆ ಭೇಟಿ ನೀಡುವ ವಿಚಾರ ಗೊತ್ತಿಲ್ಲ. ಉಡುಪಿಗೆ ಭೇಟಿ ನೀಡಿಲ್ಲ. ಹೀಗಾಗಿ, ಕೃಷ್ಣ ಮಠಕ್ಕೆ ಹೋಗಿಲ್ಲ. ರಾಹುಲ್‌ ಪ್ರವಾಸದ ಮಾಹಿತಿ ನನಗೆ ಮೊದಲೇ ತಿಳಿದಿರುವುದಿಲ್ಲ. ಎಲ್ಲಿಗೆ ಭೇಟಿ ನೀಡಬೇಕು ಎನ್ನುವುದನ್ನು ಅವರ ಕಚೇರಿ ತೀರ್ಮಾನ ಮಾಡುತ್ತದೆ. ಅದಕ್ಕೂ ನಮಗೂ ಸಂಬಂಧ ಇಲ್ಲ’ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರವಾಸದ ವೇಳೆ ಮಂಡ್ಯ, ಚಾಮರಾಜನಗರ, ಮೈಸೂರಿನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ. ಅಲ್ಲದೆ, ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.