ADVERTISEMENT

ಕಾರಾಗೃಹದಲ್ಲೇ ಆರೋಪಿ ಆತ್ಮಹತ್ಯೆ

ಕಿಮ್ಸ್‌ ಆಸ್ಪತ್ರೆಯಿಂದ ಮಗು ಕಳವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2016, 19:41 IST
Last Updated 28 ಜನವರಿ 2016, 19:41 IST
ಮಗು ಕದ್ದ ಆರೋಪದ ಮೇಲೆ ಸುರೇಖಾ ಅವರನ್ನು ಬಂಧಿಸಿದ ಸಂದರ್ಭ
ಮಗು ಕದ್ದ ಆರೋಪದ ಮೇಲೆ ಸುರೇಖಾ ಅವರನ್ನು ಬಂಧಿಸಿದ ಸಂದರ್ಭ   

ಧಾರವಾಡ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಮಗು ಕದ್ದೊಯ್ದ ಆರೋಪಿ ಮಹಿಳೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಗುರುವಾರ  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೂಲತಃ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಪಾವನಪುರ ಗ್ರಾಮದ ಹಾಗೂ ಇಲ್ಲಿನ ಲಕ್ಷ್ಮಿಸಿಂಗನಕೇರಿ ನಿವಾಸಿ ಸುರೇಖಾ ಕಾಲಾಡಿ (24) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹಾವೇರಿ ಜಿಲ್ಲೆ ಮೋಟೆಬೆನ್ನೂರು ಮೂಲದ ಶ್ರೀನಿವಾಸ ಮತ್ತು ಅನಿತಾ ಎಂಬ ದಂಪತಿಯ ನವಜಾತ ಹೆಣ್ಣುಮಗುವನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಿಂದ ಕದ್ದ ಆರೋಪ ಈಕೆಯ ಮೇಲಿತ್ತು. ಈ ದೃಶ್ಯ ಆಸ್ಪತ್ರೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ಮಂಗಳವಾರ ಬಂಧಿಸಿದ್ದರು. ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಕಾರಾಗೃಹದಲ್ಲಿ ಆಕೆ ಬುಧವಾರ ರಾತ್ರಿಯೇ ತನ್ನ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾಳೆ. ಶವಾಗಾರಕ್ಕೆ ಬಂದಿದ್ದ ಸುರೇಖಾ ಅವರ ಪತಿ ಪ್ರತಾಪ ಕಾಲಾಡಿ ಹಾಗೂ ಇತರ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.

ಪತಿ ಹೇಳಿದ್ದಿಷ್ಟು: ‘ನಾವು ಮೂಲತಃ ಪಾವನಪುರದವರು. ನನಗೂ ಸುರೇಖಾಳಿಗೂ ಒಂದ ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಸುರೇಖಾಳಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಕಿಮ್ಸ್‌ನಲ್ಲಿ ಎರಡು ಬಾರಿ ಗರ್ಭಪಾತವಾಗಿತ್ತು’ ಎಂದು ಪ್ರತಾಪ ಕಾಲಾಡಿ ಹೇಳಿದರು.

‘ಅನಿತಾ ಅವರಿಗೆ ಮೂರು ಹೆಣ್ಣುಮಕ್ಕಳು ಇದ್ದುದ್ದರಿಂದ ಅನಿತಾ ಅವರ ತಾಯಿಯೇ ಒಂದು ಹೆಣ್ಣುಮಗುವನ್ನು ನನ್ನ ಹೆಂಡತಿ ಕೈಗೆ ಕೊಟ್ಟು ₹ 500 ತೆಗೆದುಕೊಂಡಿದ್ದಾರೆ. ಗರ್ಭಪಾತಕ್ಕೆ ಒಳಗಾಗಿದ್ದ ಸುರೇಖಾ ಖುಷಿಯಲ್ಲಿ ಮಗುವನ್ನು ಮನೆಗೆ ಕರೆತಂದಳು. ಆದರೆ ನಂತರ ಮಗು ಕೊಟ್ಟ ಅನಿತಾ ಅವರ ತಾಯಿಯೇ ಸುರೇಖಾ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಆ ಮಗುವನ್ನು ಮನೆಯಲ್ಲಿ ಇಟ್ಟುಕೊಳ್ಳದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಲು ನಾವು ಹೊರಟಿದ್ದೆವು.

ಈ ವೇಳೆ ಬಂದ ಪೊಲೀಸರು ನನ್ನ ಪತ್ನಿಯನ್ನು ಬಂಧಿಸಿ ಕರೆದೊಯ್ದರು. ಗರ್ಭಪಾತದಿಂದ ತೀವ್ರವಾಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ನನ್ನ ಪತ್ನಿ ಮೇಲೆ ಇಂಥದ್ದೊಂದು ಆರೋಪ ಹೊರಿಸಿದ್ದು ಆಕೆಯ ಮನಸ್ಸನ್ನು ತೀವ್ರವಾಗಿ ಗಾಸಿಗೊಳಿಸಿತ್ತು. ಇದರಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮನ್ನು ವಿಚಾರಣೆಗೆ ಒಳಪಡಿಸಿದಂತೆ ಅನಿತಾ ಅವರ ತಾಯಿಯನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಬೇಕು’ ಎಂದು ಪ್ರತಾಪ ಆಗ್ರಹಿಸಿದರು.

ಪ್ರಕರಣದ ತನಿಖೆ: ‘ಸುರೇಖಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇನೂ ಕಂಡು ಬಂದಿಲ್ಲ. ಈ ಪ್ರಕರಣದ ತನಿಖೆಯನ್ನು ನ್ಯಾಯಾಧೀಶರು ನಡೆಸುವರು’ ಎಂದು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿದ ಕಾರಾಗೃಹ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌. ಸತ್ಯನಾರಾಯಣರಾವ್ ನಂತರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.