ADVERTISEMENT

ಕಾಲೇಜು ವಿದ್ಯಾರ್ಥಿನಿಯರ ಪಕ್ಷಿ ಪ್ರೀತಿ

ಮರಗಳಿಗೆ ನೇತು ಹಾಕಿರುವ ಮಣ್ಣಿನ ಮಡಕೆಗಳಿಗೆ ಕಾಳು, ನೀರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 10 ಏಪ್ರಿಲ್ 2016, 19:30 IST
Last Updated 10 ಏಪ್ರಿಲ್ 2016, 19:30 IST
ಕಾಲೇಜು ಆವರಣದಲ್ಲಿರುವ ಮರದ ಟೊಂಗೆಗಳಿಗೆ ನೇತು ಹಾಕಿರುವ ಮಣ್ಣಿನ ಮಡಕೆಗಳಿಗೆ ಕಾಳು, ನೀರು ಹಾಕುತ್ತಿರುವ ವಿದ್ಯಾರ್ಥಿನಿಯರು
ಕಾಲೇಜು ಆವರಣದಲ್ಲಿರುವ ಮರದ ಟೊಂಗೆಗಳಿಗೆ ನೇತು ಹಾಕಿರುವ ಮಣ್ಣಿನ ಮಡಕೆಗಳಿಗೆ ಕಾಳು, ನೀರು ಹಾಕುತ್ತಿರುವ ವಿದ್ಯಾರ್ಥಿನಿಯರು   

ಹೊಸಪೇಟೆ: ಹಕ್ಕಿಗಳ ಹಸಿವು ಮತ್ತು ನೀರಿನ ದಾಹ ತಣಿಸುವ ಮೂಲಕ ಇಲ್ಲಿನ ಥಿಯೋಸಾಫಿಕಲ್‌ ಕಾಲೇಜಿನ ವಿದ್ಯಾರ್ಥಿನಿಯರು ಪಕ್ಷಿಗಳ ಬಗ್ಗೆ ವಿಶೇಷ ಕಾಳಜಿ, ಪ್ರೀತಿ ತೋರಿಸುತ್ತಿದ್ದಾರೆ.

ಕಾಲೇಜಿನ ಆವರಣದಲ್ಲಿರುವ ಸುಮಾರು 25 ಮರಗಳಿಗೆ ಲೋಹದ ತಂತಿ ಮೂಲಕ ಮಣ್ಣಿನ ಸಣ್ಣ ಮಡಕೆಗಳನ್ನು ಅಳವಡಿಸಿದ್ದಾರೆ. ಅವುಗಳಲ್ಲಿ ನಿತ್ಯ ನೀರು ಮತ್ತು ಧಾನ್ಯಗಳನ್ನು ಹಾಕುತ್ತಾರೆ. ಇದರಿಂದ ನಿತ್ಯ ಗೊರವಂಕ, ಗುಬ್ಬಚ್ಚಿ ಸೇರಿದಂತೆ ಇತರ ಜಾತಿಯ ಪಕ್ಷಿಗಳು ಆಹಾರ, ನೀರಿಗಾಗಿ ಇಲ್ಲಿಗೆ ಲಗ್ಗೆ ಇಡುತ್ತಿವೆ.

ಹಸಿರಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಎಲ್ಲ ಮಡಕೆಗಳಿಗೂ ಹಸಿರು ಬಣ್ಣ ಬಳಿಯಲಾಗಿದೆ.  ಅಂದ ಹಾಗೆ ಈ ಎಲ್ಲ ಮಡಕೆಗಳಿಗೆ ಬಣ್ಣ ಬಳಿದದ್ದು ಕೂಡ ವಿದ್ಯಾರ್ಥಿನಿಯರೇ ಎನ್ನುವುದು ವಿಶೇಷ.

ನಿತ್ಯ ಬೆಳಿಗ್ಗೆ ಕಾಲೇಜಿಗೆ ಬಂದ ಕೂಡಲೇ ಅವರು ಮೊದಲು ಮಾಡುವ ಕೆಲಸವೆಂದರೆ, ಮಡಕೆಗಳಲ್ಲಿ ನೀರು ಮತ್ತು ಧಾನ್ಯ ಹಾಕುವುದು. ಮತ್ತೆ ಮಧ್ಯಾಹ್ನ ಮನೆಗೆ ಹೊರಡುವ ಮುನ್ನ ತಪ್ಪದೇ ಈ ಕಾಯಕ ಮಾಡುತ್ತಾರೆ. ಭಾನುವಾರ ಮತ್ತು ಇತರ ರಜಾ ದಿನಗಳಲ್ಲಿ ಈ ಕೆಲಸವನ್ನು ಕಾಲೇಜಿನ ಸಿಬ್ಬಂದಿ ಚಾಚೂ ತಪ್ಪದೇ ಮಾಡುತ್ತಾರೆ. ಈ ಕೆಲಸ ಮಾಡುವಂತೆ ಕಾಲೇಜು ಆಡಳಿತ ಮಂಡಳಿ ಸಿಬ್ಬಂದಿಗೆ ಸೂಚಿಸಿಲ್ಲ. ಆದರೆ ವಿದ್ಯಾರ್ಥಿನಿಯರು ನಿತ್ಯ ಮಾಡುವ ಕೆಲಸದಿಂದ ಪ್ರೇರಣೆ ಪಡೆದು, ಸ್ವತಃ ಅವರೇ ಈ ಕೆಲಸ ನಿರ್ವಹಿಸುತ್ತಾರೆ.

ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಎಚ್‌.ಕೆ. ನೇತ್ರಾ ನೇತೃತ್ವದ 11 ಜನ ವಿದ್ಯಾರ್ಥಿನಿಯರ ತಂಡ ಬೇವು, ಹುಣಸೆಮರ, ರಾಯಲ್‌ ಪಾಮ್‌ ಟ್ರೀ ಸೇರಿದಂತೆ ಇತರ ಜಾತಿಯ 25 ಮರಗಳಿಗೆ ಮಡಕೆ ಅಳವಡಿಸುವ ಕೆಲಸ ಮಾಡಿದೆ. ಇದಕ್ಕೆ ಯು. ಶೋಭಾ, ಎಂ. ಮಾನಸ, ಎ. ಚೈತ್ರಾ, ಸುಮಲತಾ, ಸಂಬ್ರಿನ್‌, ನಸ್ರೀನ್‌, ಸ್ವಾತಿ ಯಾದವ್‌ ಹಾಗೂ ವಿ. ವೀಣಾ ಸಾಥ್‌ ನೀಡಿದ್ದಾರೆ.

ಈ ಕಾರ್ಯಕ್ಕೆ ಕಾಲೇಜಿನ ವಿದ್ಯಾರ್ಥಿಗಳು ತಲಾ ₹5 ನೆರವು ನೀಡಿದ್ದಾರೆ. ಕಾಲೇಜಿನ ‘ಥಿಯೋಸಾಫಿಕಲ್‌ ಆರ್ಡರ್‌ ಆಫ್‌ ಸರ್ವಿಸೆಸ್‌’ ಕೂಡ ವಿದ್ಯಾರ್ಥಿಗಳ ಕೆಲಸಕ್ಕೆ ಕೈ ಜೋಡಿಸಿದೆ. ನಿತ್ಯ ಮಡಕೆಗಳಲ್ಲಿ ಗೋಧಿ, ಶೇಂಗಾ, ಕಡಲೆ ಮತ್ತು ಹೆಸರು ಹಾಕಿಡಲಾಗುತ್ತದೆ. ಇದಕ್ಕಾಗಿ ತಿಂಗಳಿಗೆ ₹750 ಖರ್ಚು ಬರುತ್ತಿದೆ.

‘ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಆದರೂ ಮನುಷ್ಯ ಹೇಗಾದರೂ ಮಾಡಿ, ಕೇಳಿ ತನ್ನ ದಾಹ ತಣಿಸಿಕೊಳ್ಳುತ್ತಾನೆ. ಆದರೆ ಮಾತು ಬರದ ಪಕ್ಷಿಗಳು ಏನು ಮಾಡಬೇಕು. ಎಲ್ಲಿಗೆ ಹೋಗಬೇಕು.ನಮ್ಮ ಮನೆಯಲ್ಲಿ ನನ್ನ ಅಮ್ಮ ಪಕ್ಷಿಗಳಿಗಾಗಿ ಇದೇ ರೀತಿ ಮಾಡಿದ್ದಾರೆ. ನಾವೂ ಯಾಕೆ ಮಾಡಬಾರದು ಎಂದು ಯೋಚಿಸಿ, ಇದಕ್ಕೆ ಕೈ ಹಾಕಿದ್ದೇವೆ’ ಎನ್ನುತ್ತಾರೆ ನೇತ್ರಾ.

‘ಮಾರ್ಚ್‌ನಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದ ಸಂದರ್ಭದಲ್ಲಿ ಈ ಕಾರ್ಯಕ್ಕೆ ಉಪ ವಿಭಾಗಾಧಿಕಾರಿ ಅವಿನಾಶ್‌ ಮೆನನ್‌ ಅವರು ಚಾಲನೆ ನೀಡಿದ್ದರು. ನಮ್ಮ ಕಾರ್ಯವನ್ನು ಅವರು ಮುಕ್ತಕಂಠದಿಂದ ಹೊಗಳಿದ್ದರು’ ಎಂದು ನೆನಪಿಸಿಕೊಂಡರು.

*****
ವಿದ್ಯಾರ್ಥಿಗಳ ಈ ಕೆಲಸ ನೋಡಿದರೆ ಖುಷಿಯಾಗುತ್ತದೆ. ಇದನ್ನು ನಾವು ಕೂಡ ಪ್ರೋತ್ಸಾಹಿಸುತ್ತಿದ್ದೇವೆ
-ಬಿ. ಮಂಜುಳಾ,ಪ್ರಾಚಾರ್ಯೆ

ಎಲ್ಲರೂ ತಮ್ಮ ಮನೆಯಲ್ಲಿ ಒಂದಾದರೂ ಮಣ್ಣಿನ ಮಡಕೆ ಇಟ್ಟು, ಪಕ್ಷಿಗಳಿಗೆ ನೀರು, ಧಾನ್ಯ ಪೂರೈಸಿ ಮಾನವೀಯತೆ ಮೆರೆಯಬೇಕು
-
ಎಚ್.ಕೆ. ನೇತ್ರಾ, ಬಿ.ಕಾಂ ಅಂತಿಮ ವಿದ್ಯಾರ್ಥಿನಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.