ADVERTISEMENT

ಕಾವೇರಿ: ಕಾನೂನು ತಜ್ಞರ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ರೈತ ಸಮುದಾಯಕ್ಕೆ ಸಲಹೆ ನೀಡಲು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ. ಮಾದೇಗೌಡ ನೇತೃತ್ವದಲ್ಲಿ ಕಾನೂನು ತಜ್ಞರ ಸಮಿತಿ ರಚನೆಯಾಗಿದೆ.ಬೆಂಗಳೂರಿನ ವಕೀಲರ ಸಂಘ ಹೈಕೋರ್ಟ್‌ನಲ್ಲಿ ಮಂಗಳವಾರ ಆಯೋಜಿಸಿದ್ದ `ಕಾವೇರಿ ನದಿ ನೀರಿನ ಹಂಚಿಕೆ - ಒಂದು ಅವಲೋಕನ~ ಕಾರ್ಯಕ್ರಮದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್‌ಗಳಾದ ಉದಯ್ ಹೊಳ್ಳ, ಅಶೋಕ ಹಾರನಹಳ್ಳಿ ಮತ್ತು ಬಿ.ವಿ. ಆಚಾರ್ಯ, ವಕೀಲರಾದ ಪ್ರೊ. ರವಿವರ್ಮಕುಮಾರ್, ಎ.ಕೆ. ಸುಬ್ಬಯ್ಯ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ್, ಖಜಾಂಚಿ ಬಿ.ಎಸ್. ರಾಜಶೇಖರ್ ಮತ್ತಿತರರು ಸಮಿತಿಯ ಸದಸ್ಯರು. ಸಮಿತಿ ವಾರಕ್ಕೊಮ್ಮೆ ಸಭೆ ಸೇರಿ, ಕಾನೂನು ಹೋರಾಟ ಕುರಿತು ಸರ್ಕಾರಕ್ಕೆ ಸಲಹೆ ನೀಡಲಿದೆ.

ಕಾರ್ಯಕ್ರಮದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾದೇಗೌಡ ಅವರು, `ಇಷ್ಟು ದಿನ ನಾವು ಬೀದಿ ಹೋರಾಟ ನಡೆಸುತ್ತಿದ್ದೆವು. ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಕೀಲರ ಸಹಾಯದಿಂದ ಇನ್ನು ಕಾನೂನು ಹೋರಾಟ ಆರಂಭಿಸುತ್ತೇವೆ~ ಎಂದು ಹೇಳಿದರು.

ಕಾವೇರಿ ನೀರಿನ ಹಂಚಿಕೆ ಸಂಬಂಧ ನ್ಯಾಯಮಂಡಳಿ ನೀಡಿರುವ ಆದೇಶದ ರದ್ದತಿಗೆ ಕಾನೂನು ಹೋರಾಟ ಆರಂಭಿಸಬೇಕಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಹೋರಾಟ ಆರಂಭಿಸುವ ಸಾಧ್ಯತೆಗಳನ್ನು ಸಮಿತಿ ಪರಿಶೀಲಿಸಲಿದೆ. ನದಿ ನೀರು ಬಿಡುವ ಸಂಬಂಧ ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಇದೇ 12ರಂದು ಆದೇಶ ಹೊರಡಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಹಿತರಕ್ಷಣಾ ಸಮಿತಿ ಶಾಂತಿಯುತ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಉದಯ್ ಹೊಳ್ಳ, `ಕಾವೇರಿ ನದಿಯಿಂದ ತಮಿಳುನಾಡಿಗೆ ಹನಿ ನೀರನ್ನೂ ಬಿಡುವುದಿಲ್ಲ ಎಂಬ ನಿಲುವು ತಳೆಯುವುದು ಸರಿಯಲ್ಲ.ಕರ್ನಾಟಕಕ್ಕೆ ನೀರು ಬಿಡುವುದೇ ಇಲ್ಲ ಎಂದು ಮಹಾರಾಷ್ಟ್ರದವರು ಹಟ ಸಾಧಿಸಿದರೆ ಉತ್ತರ ಕರ್ನಾಟಕ ಭಾಗದ ಜನತೆಯ ಸ್ಥಿತಿ ಹೇಗಾಗಬಹುದು? ನಮಗೆ ಬೇಕಿರುವಷ್ಟು ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಉಳಿದ ನೀರನ್ನು ತಮಿಳುನಾಡಿಗೆ ಬಿಡಬಹುದು~ ಎಂದು ಸಲಹೆ ನೀಡಿದರು.

ರಾಜ್ಯದಿಂದ ತಮಿಳುನಾಡಿಗೆ ಈಗಾಗಲೇ 13 ಸಾವಿರ ಕ್ಯೂಸೆಕ್ ನೀರನ್ನು ಹೆಚ್ಚುವರಿಯಾಗಿ ಬಿಡಲಾಗಿದೆ. ಹೀಗಾಗಿ ಇನ್ನು ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಹೊಳ್ಳ ಅಭಿಪ್ರಾಯ ವ್ಯಕ್ತಪಡಿಸಿದರು.

`ಅಬ್ಬರದ ಹೋರಾಟದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ತಮಿಳುನಾಡಿಗೆ ಇದೇ 15ರ ವರೆಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಯಾವ ಆಧಾರದಲ್ಲಿ ಹೇಳಿತು? ಹಾಗೆ ಹೇಳಿದ್ದರಿಂದ ನಮಗೆ ಅಷ್ಟು ನೀರು ಬಿಡುವ ಸಾಮರ್ಥ್ಯ ಇದೆ ಎಂದು ನ್ಯಾಯಾಲಯದಲ್ಲಿ ಪರೋಕ್ಷವಾಗಿ ಒಪ್ಪಿಕೊಂಡಂತೆ ಆಯಿತು~ ಎಂದು ಎ.ಕೆ. ಸುಬ್ಬಯ್ಯ ವಿಶ್ಲೇಷಿಸಿದರು.

ನ್ಯಾಯಮಂಡಳಿ ನೀಡಿರುವ ಅಂತಿಮ ಆದೇಶವನ್ನು ಪ್ರಶ್ನಿಸುವ ಅಧಿಕಾರ ರೈತರಿಗೆ ಇಲ್ಲ. ಆದರೆ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಸರ್ಕಾರ ಪ್ರಶ್ನಿಸಿದೆ. ಈ ಪ್ರಕ್ರಿಯೆಯಲ್ಲಿ ರೈತರನ್ನೂ ಸೇರಿಸಿಕೊಳ್ಳುವ ಕುರಿತು ಆಲೋಚಿಸಬಹುದು ಎಂದು ಅಶೋಕ ಹಾರನಹಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.