ADVERTISEMENT

ಕಾವೇರಿ ನೀರು ವಿಷಯದಲ್ಲಿ ಕೇಂದ್ರ ಸರ್ಕಾರ ಕೈಕಟ್ಟಿ ಹಾಕಿದೆ : ಎಂ.ಬಿ.ಪಾಟೀಲ

‘ಕೇಂದ್ರದ ಮೋಸದ ವಿರುದ್ಧ ಹೋರಾಟ’

​ಪ್ರಜಾವಾಣಿ ವಾರ್ತೆ
Published 14 ಮೇ 2018, 15:44 IST
Last Updated 14 ಮೇ 2018, 15:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   


ವಿಜಯಪುರ: ‘ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಸೋಮವಾರ ತನ್ನ ವಿವೇಚನಾಧಿಕಾರ ಬಳಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವಿವರಣೆಯಲ್ಲಿ, ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾನೂನು ಹೋರಾಟ ನಡೆಸದಂತೆ ಕೈ ಕಟ್ಟಿ ಹಾಕಿದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಆತಂಕ ವ್ಯಕ್ತಪಡಿಸಿದರು.

‘ಕೇಂದ್ರದ ಈ ನಿಲುವನ್ನು ಖಂಡಿಸಿ, ರಾಜ್ಯದಿಂದ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ನಾಲ್ವರು ಕೇಂದ್ರ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ನೈತಿಕ ಹೊಣೆ ಹೊತ್ತು ರಾಜ್ಯದಲ್ಲಿನ ಬಿಜೆಪಿ ಸಂಸದರು ಸಹ ರಾಜೀನಾಮೆ ನೀಡಬೇಕು’ ಎಂದು ಸೋಮವಾರ ರಾತ್ರಿ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಯಾರ ಒತ್ತಡಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ. ಒಂದೂವರೆ ತಿಂಗಳಿಗೂ ಹೆಚ್ಚಿನ ಅವಧಿ ಸುಪ್ರೀಂಕೋರ್ಟ್‌ಗೆ ರಜೆಯಿರಲಿದೆ. ಏನು ಮಾಡದಂತಹ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ಬುಧವಾರ (ಮೇ 16) ಪ್ರಕರಣ ಮತ್ತೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ರಾಜ್ಯದ ನಿಲುವನ್ನು ದಿಟ್ಟವಾಗಿ ವ್ಯಕ್ತಪಡಿಸುವಂತೆ ವಕೀಲ ಫಾಲಿ ನಾರಿಮನ್ ಜತೆ ಚರ್ಚಿಸಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಲುವು ಕಾವೇರಿ ಕಣಿವೆಯ ರೈತರ ಪಾಲಿಗೆ ಕರಾಳವಾಗಿದೆ. ಬಿಜೆಪಿ ಮಾಡಿದ ಮಹಾ ಮೋಸವಾಗಿದೆ’ ಎಂದು ಪಾಟೀಲ ದೂರಿದರು.

‘ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ರಾಜ್ಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಿಗೆ ಕೇಂದ್ರ ಸರ್ಕಾರ ‘ಕಾವೇರಿ ನೀರು ನಿರ್ವಹಣೆ ಯೋಜನೆ’ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಜ್ಯದ ಜನರು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಕಿಡಿಕಾರಿದರು.

‘ಕೇಂದ್ರ ಇದೀಗ ಸುಪ್ರೀಂಗೆ ಸಲ್ಲಿಸಿರುವ ಯೋಜನೆಗೂ ಈ ಹಿಂದಿನ ನೀರು ನಿರ್ವಹಣಾ ಮಂಡಳಿಗೂ ಯಾವುದೇ ವ್ಯತ್ಯಾಸವಿಲ್ಲ. ತಲೆ ಬರಹವಷ್ಟೇ ಬದಲಾಗಿದೆ. ಸಂಕಷ್ಟದ ವರ್ಷದಲ್ಲಿ ರಾಜ್ಯದ ಎಲ್ಲ ಜಲಾಶಯಗಳು ಯೋಜನೆ ವ್ಯಾಪ್ತಿಗೆ ಒಳಪಡಲಿದ್ದು, ರಾಜ್ಯ ತನ್ನ ಹಕ್ಕನ್ನೇ ಕಳೆದುಕೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.