ADVERTISEMENT

ಕಿಚ್ಚು ಹಬ್ಬಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST
ಕಿಚ್ಚು ಹಬ್ಬಿಸಲು ನಿರ್ಧಾರ
ಕಿಚ್ಚು ಹಬ್ಬಿಸಲು ನಿರ್ಧಾರ   

ಬೆಂಗಳೂರು: ಕಾವೇರಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಅ.3 ರಂದು ಕೃಷ್ಣರಾಜಸಾಗರ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸಿದೆ. ನಗರದಲ್ಲಿ ನಡೆದ ಮಠಾಧೀಶ್ವರ ನೇತೃತ್ವದಲ್ಲಿನ ಸಭೆಯು, ಕಾವೇರಿ ಕೊಳ್ಳದ ಜನತೆಯಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಲು, ಹೋರಾಟದ ಕಾವನ್ನು ರಾಜ್ಯದ ಎಲ್ಲೆಡೆ ಹಬ್ಬಿಸುವ ನಿರ್ಣಯ ಕೈಗೊಂಡಿದೆ.

ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕಬಿನಿ ಕಾವಲು ಪಡೆಯ ಸದಸ್ಯರು ಕಬಿನಿ ಜಲಾಶಯಕ್ಕೆ ಮಂಗಳವಾರ ಹರಿಗೋಲು ಮೂಲಕ ಮುತ್ತಿಗೆ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ರೈತರು ಕರ ನಿರಾಕರಣೆ ಚಳವಳಿಗೂ ಕರೆ ನೀಡಿದ್ದಾರೆ.

ಒತ್ತಡಕ್ಕೆ ತಿಲುಕಿರುವ ರಾಜ್ಯ ಸರ್ಕಾರ, ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ನೀಡಿರುವ ಆದೇಶ ಪ್ರಶ್ನಿಸಿ, ಪುನರ್ ಪರಿಶೀಲನಾ ಅರ್ಜಿಯನ್ನು ಒಂದೆರಡು ದಿನದಲ್ಲಿ ಸಲ್ಲಿಸುವುದಾಗಿ ಹೇಳಿದೆ.

`ತಮಿಳುನಾಡಿಗೆ ರಾಜ್ಯದಿಂದ ಇದೇ 15ರವರೆಗೆ ಪ್ರತಿ ದಿನ ಒಂಬತ್ತು ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂಬ ಆದೇಶವನ್ನು ಪ್ರಶ್ನಿಸಿ ಬುಧವಾರ ಅಥವಾ ಗುರುವಾರ ಸುಪ್ರೀಂ      ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.


ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತಮಿಳುನಾಡಿಗೆ ನೀರು ಬಿಡಲಾಗಿದೆ. ಇದು ರಾಜ್ಯದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ತೆಗೆದುಕೊಂಡ ನಿರ್ಧಾರವಲ್ಲ. ರಾಜ್ಯದ ಹಿತಾಸಕ್ತಿಯನ್ನು ಯಾವ ಕಾರಣಕ್ಕೂ ಬಲಿ ಕೊಡುವುದಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಹಾಗೂ ರೈತರು ಸಂಕಷ್ಟದಲ್ಲಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಗುವುದು. ಸಿಆರ್‌ಎ ಆದೇಶ ಮರು ಪರಿಶೀಲನೆ ಮಾಡುವಂತೆ ಕೋರಲಾಗುವುದು ಎಂದು ಶೆಟ್ಟರ್ ಹೇಳಿದರು.

ದೆಹಲಿಗೆ ಬೊಮ್ಮಾಯಿ: ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಪ್ರಧಾನ ಕಾರ್ಯದರ್ಶಿ ಡಿ. ಸತ್ಯಮೂರ್ತಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಬುಧವಾರ ದೆಹಲಿಗೆ ತೆರಳಲಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅವರನ್ನು ಭೇಟಿ ಮಾಡಿ, ಬುಧವಾರ ಅಥವಾ ಗುರುವಾರ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಮಠಾಧೀಶರಿಂದ ಸಭೆ: ವಿವಾದ ಕುರಿತು ಚರ್ಚಿಸಲು ಆದಿಚುಂಚನಗಿರಿ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಭೆ, ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುವುದನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು ಎಂಬ ನಿರ್ಣಯ ಕೈಗೊಂಡಿದೆ.

ಪ್ರತಿನಿತ್ಯ ಒಂಬತ್ತು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸಿಆರ್‌ಎ ನೀಡಿರುವ ಆದೇಶ ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿಯನ್ನು ಬುಧವಾರವೇ ಸಲ್ಲಿಸಬೇಕು. ರಾಜ್ಯದ ಜನಪ್ರತಿನಿಧಿಗಳು, ಕಾನೂನು ತಜ್ಞರು, ನೀರಾವರಿ ತಜ್ಞರು, ರೈತ ಮುಖಂಡರು, ಮಠಾಧೀಶರು, ಬುದ್ಧಿಜೀವಿಗಳು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ, ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದೂ ಸಭೆ ನಿರ್ಣಯಿಸಿದೆ.

ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರತಿನಿಧಿಗಳ ಸಭೆ, `ರಾಜ್ಯದ ಎಲ್ಲ ಕಾನೂನು ತಜ್ಞರು ಒಗ್ಗಟ್ಟಾಗಿ ಸಮಿತಿ ರಚಿಸಬೇಕು. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ, ಸೂಚನೆ ನೀಡಬೇಕು. ಕಾವೇರಿ ಕೊಳ್ಳದ ಜನತೆಯಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಬೇಕು. ಹೋರಾಟದ ಕಾವನ್ನು ರಾಜ್ಯದ ಎಲ್ಲೆಡೆ ಹಬ್ಬಿಸಬೇಕು~ ಎಂದು ನಿರ್ಣಯದ ಮೂಲಕ ಕರೆ ನೀಡಿದೆ.

ಸಭೆಯಲ್ಲಿ ಮಾತನಾಡಿದ ಬಾಲಗಂಗಾಧರನಾಥ ಸ್ವಾಮೀಜಿ, `ಕಾವೇರಿ ನದಿ ನೀರಿಗಾಗಿ ಕೈಗೊಂಡಿರುವ ಹೋರಾಟದಲ್ಲಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ. ಪ್ರಧಾನ ಮಂತ್ರಿಗಳು ಏಕಮುಖ ನಿರ್ಧಾರ ಕೈಗೊಂಡಿರುವುದು ಅತ್ಯಂತ ನೋವಿನ ಸಂಗತಿ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು~ ಎಂದು ಕರೆ ನೀಡಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, `ಸಿಆರ್‌ಎ ನೀಡಿರುವ ಆದೇಶ ಅವೈಜ್ಞಾನಿಕ. ಪ್ರಾಧಿಕಾರದ ಎದುರು ಸಮರ್ಥ ವಾದ ಮಂಡಿಸುವುದರಲ್ಲಿ ನಾವು ಸೋತಿರುವ ಕಾರಣ ಹೀಗಾಗಿದೆ. ರಾಜ್ಯದ ಸಂಕಷ್ಟವನ್ನು ಪ್ರಧಾನ ಮಂತ್ರಿಯವರಿಗೆ ಮನದಟ್ಟು ಮಾಡಿಸಬೇಕು. ಕೇವಲ ಹೇಳಿಕೆ ನೀಡುವುದನ್ನು ನಿಲ್ಲಿಸಿ, ತಮಿಳುನಾಡಿನವರಂತೆ ಅನುಷ್ಠಾನದಲ್ಲೂ ನಾವು ಮುಂದಿರಬೇಕು~ ಎಂದರು.

ಒಕ್ಕೂಟ ವ್ಯವಸ್ಥೆ ವಿರುದ್ಧ ಕಿಡಿ: ಸಭೆಯಲ್ಲಿ ಪಾಲ್ಗೊಂಡಿದ್ದ ಮಂಡ್ಯ ಸಂಸದ ಚೆಲುವರಾಯಸ್ವಾಮಿ ಮತ್ತು ಮಾಜಿ ಸಂಸದ, ಚಿತ್ರನಟ ಅಂಬರೀಷ್ ಅವರು ಒಕ್ಕೂಟ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. `ದೆಹಲಿಯ ಪ್ರಭುಗಳು ಉತ್ತರ ಪ್ರದೇಶ, ಮಧ್ಯಪ್ರದೇಶ ಅಥವಾ ಉತ್ತರ ಭಾರತದ ಯಾವುದೇ ರಾಜ್ಯದಲ್ಲಿ ಕೋಳಿ ಕೂಗಿದರೂ ಅದಕ್ಕೆ ಸ್ಪಂದಿಸುತ್ತಾರೆ. ಆದರೆ ಕರ್ನಾಟಕದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದರೂ ಇತ್ತ ತಿರುಗಿ ನೋಡುವುದಿಲ್ಲ. ನಮ್ಮನ್ನು ಕಂಡರೆ ಅವರಿಗೆ ತಾತ್ಸಾರ~ ಎಂದರು.  

`ದೇಶದ ಬೆಳವಣಿಗೆಯಲ್ಲಿ ರಾಜ್ಯದ ಪಾಲೂ ಸಾಕಷ್ಟಿದೆ. ನಮಗೆ ದೆಹಲಿಯ ನೆರವಿನ ಅಗತ್ಯವೇ ಇಲ್ಲ. ನಮಗೆ ಬೇಕಿರುವ ಎಲ್ಲ ಸೌಲಭ್ಯಗಳು ನಮ್ಮ ನೆಲದಲ್ಲೇ ಇವೆ~ ಎಂದು ಅಂಬರೀಷ್ ಹೇಳಿದರು. `ಕಾವೇರಿ ವಿಷಯದಲ್ಲಿ ಪ್ರಧಾನಿ ನೀಡಿದ ಆದೇಶ ಸರಿ ಇಲ್ಲ. ಅವರಿಗೆ ರಾಜ್ಯದ ವಾಸ್ತವ ಸ್ಥಿತಿಯ ಅರಿವಿಲ್ಲ~ ಎಂದು ತಮ್ಮದೇ ಪಕ್ಷದ ಪ್ರಧಾನಿ ವಿರುದ್ಧ ಗುಡುಗಿದರು.

ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿ ಸುರಿದರೆ, ಕಡಿಮೆ ಸುರಿದರೆ ಅಥವಾ ಮಳೆಯೇ ಆಗದಿದ್ದರೆ ಪ್ರತ್ಯೇಕ ನೀರು ಹಂಚಿಕೆ ಸೂತ್ರ ರೂಪಿಸಬೇಕು ಎಂದು ಅವರು ಹೇಳಿದರು.

`ಅಧಿಕಾರ ಹೋದರೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದ ಹೇಳಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಇಂಥ ಜನಪ್ರತಿನಿಧಿಗಳು ರಾಜೀನಾಮೆ ನೀಡಲಿ~ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಜಿ. ಮಾದೇಗೌಡ ಆಗ್ರಹಿಸಿದರು.

`ಕಾವೇರಿ ಜಲಾನಯನ ಪ್ರದೇಶದ 4.5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಉಳಿಸಿಕೊಳ್ಳಬೇಕಾಗಿದೆ. ಆದರೆ ತಮಿಳುನಾಡಿನ 2.5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಈಗಾಗಲೇ ಮುಕ್ಕಾಲು ಭಾಗ ಬೆಳೆದಿದೆ. ಅಲ್ಲಿ ಇನ್ನು ಕೆಲವು ದಿನಗಳಲ್ಲಿ ಮಳೆಯಾಗಲಿದೆ. ಕರ್ನಾಟಕದ ರೈತರ ಬೆಳೆ ನಷ್ಟವಾದರೆ ಕೇಂದ್ರ ಪರಿಹಾರ ನೀಡುತ್ತದೆಯಾ?~ ಎಂದು ರೈತ ಮುಖಂಡ ಪುಟ್ಟಣ್ಣಯ್ಯ ಪ್ರಶ್ನಿಸಿದರು.

ಈ ಬಾರಿಯ ಹೋರಾಟದಲ್ಲಿ ಬೆಂಗಳೂರಿನ ಜನತೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಮಂಡ್ಯ, ಮೈಸೂರು ಭಾಗದ ಜನ ಮಾತ್ರ ಹೋರಾಟ ನಡೆಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಸರಬರಾಜು ಆಗುವ ಪೈಪ್‌ಗಳನ್ನು ಕತ್ತರಿಸಬೇಕಾಗುತ್ತದೆ. ಆಗ ಹೋರಾಟದ ಕಾವು ಬೆಂಗಳೂರಿಗರಿಗೂ ಅರ್ಥವಾಗುತ್ತದೆ ಎಂದು ಸಭೆಯಲ್ಲಿ ಮಾತನಾಡಿದ ಅನೇಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಡಿ.ಬಿ. ಚಂದ್ರೇಗೌಡ, ಶಾಸಕರಾದ ಎಂ. ಕೃಷ್ಣಪ್ಪ, ಡಾ.ಸಿ.ಎಸ್. ಅಶ್ವತ್ಥ ನಾರಾಯಣ, ನೆ.ಲ. ನರೇಂದ್ರಬಾಬು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

`ಹಿಂಸಾಚಾರ ಪರಿಹಾರವಲ್ಲ~
`ಕಾವೇರಿ ನದಿ ನೀರಿನ ಹಂಚಿಕೆ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಹಿಂಸಾಚಾರ ಹಾಗೂ ಕಾನೂನು ಉಲ್ಲಂಘನೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬುದನ್ನು ಪ್ರತಿಭಟನೆ ನಡೆಸುತ್ತಿರುವವರು ಕೂಡ ಅರಿತುಕೊಳ್ಳಬೇಕು~ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮನವಿ ಮಾಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಸಪ್ತರ್ಷಿ ಪ್ರತಿಷ್ಠಾನವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಸಮಸ್ಯೆ ಪರಿಹಾರಕ್ಕೆ ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT