ADVERTISEMENT

ಕಿತ್ತಾಟಗಾರರಿಗೆ ಆರ್‌ಎಸ್‌ಎಸ್ ತರಾಟೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST
ಕಿತ್ತಾಟಗಾರರಿಗೆ ಆರ್‌ಎಸ್‌ಎಸ್ ತರಾಟೆ
ಕಿತ್ತಾಟಗಾರರಿಗೆ ಆರ್‌ಎಸ್‌ಎಸ್ ತರಾಟೆ   

ಬೆಂಗಳೂರು: `ನಿಮ್ಮಿಂದ ಪಕ್ಷ ಅಲ್ಲ. ಪಕ್ಷದಿಂದ ನೀವು~- ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಎಸ್‌ಎಸ್ ಮುಖಂಡರು, ಬಿಜೆಪಿ ನಾಯಕರಿಗೆ ಬುದ್ಧಿ ಮಾತು ಹೇಳಿದ್ದು ಹೀಗೆ.

`ಪಕ್ಷ ಮತ್ತು ಸಂಘಟನೆ ನಿಮಗೆ ಅವಕಾಶ ನೀಡದಿದ್ದರೆ ನೀವು ಎಲ್ಲಿ ಇರುತ್ತಿದ್ದಿರಿ. ಇದನ್ನು ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರೂ ಅರ್ಥ ಮಾಡಿಕೊಳ್ಳಬೇಕು. ನಿಮ್ಮನ್ನು ಗುರುತಿಸಿ ಅವಕಾಶ ನೀಡಿದ್ದಕ್ಕೆ ಇವತ್ತು ನೀವು ನಾಯಕರು. ಅದರ ಹಿಂದೆ ಎಷ್ಟು ಜನರ ಶ್ರಮ ಇದೆ ಎನ್ನುವುದು ನಿಮಗೆ ಗೊತ್ತಿದೆಯೇ~ ಎಂದು ಖಾರವಾಗಿ ಪ್ರಶ್ನಿಸಿದರು ಎನ್ನಲಾಗಿದೆ.

`ಶಿಸ್ತಿನಿಂದ ಪಕ್ಷದಲ್ಲಿ ಇದ್ದರೆ ಎಲ್ಲವೂ ಸಿಗುತ್ತದೆ. ಇಲ್ಲದಿದ್ದರೆ ಯಾವುದೂ ಸಿಗುವುದಿಲ್ಲ. ಮನಸ್ಸಿಗೆ ತೋಚಿದಂತೆ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಪ್ರತಿನಿತ್ಯ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿರುವುದು ನೋಡಿದರೆ ಬೇಸರವಾಗುತ್ತದೆ. ಇದೇ ಸ್ಥಿತಿ ಮುಂದುವರಿದರೆ ಪರಿಣಾಮ ಸರಿ ಇರುವುದಿಲ್ಲ.

ಪಕ್ಷದ ಘನತೆ ಕುಂದಿಸುವ ನಾಯಕರ ಅಗತ್ಯ ಪಕ್ಷಕ್ಕೆ ಇಲ್ಲ~ ಎಂದೂ ಆರ್‌ಎಸ್‌ಎಸ್ ನಾಯಕರು ಗುಡುಗಿದ್ದಾರೆ. `ನಮ್ಮದು ವ್ಯಕ್ತಿ ಆಧಾರಿತ ಪಕ್ಷ ಅಲ್ಲ. ಸಂಘಟನೆ ಆಧಾರಿತ ಪಕ್ಷ. ಏಕವ್ಯಕ್ತಿ ನಾಯಕತ್ವ ಪ್ರದರ್ಶನಕ್ಕೆ ಅವಕಾಶ ಇಲ್ಲ. ಹೊಂದಾಣಿಕೆಯಿಂದ ಎಲ್ಲರೂ ಒಟ್ಟಾಗಿ ದುಡಿದರೆ ಅದಕ್ಕೆ ಅವಕಾಶ. ಯಡಿಯೂರಪ್ಪ ಪ್ರವಾಸ ಹಮ್ಮಿಕೊಳ್ಳುವುದಾದರೆ ಪಕ್ಷದ ನೇತೃತ್ವದಲ್ಲಿ ನಡೆಯಲಿ~ ಎಂದು ತಾಕೀತು ಮಾಡಿದ್ದಾರೆ.

`ಪ್ರತಿ 15 ದಿನಕ್ಕೊಮ್ಮೆ ಪಕ್ಷದ ಪ್ರಮುಖರ ಸಭೆ ನಡೆಯಲಿ. ಪ್ರತಿ ಮೂರು ತಿಂಗಳಿಗೊಮ್ಮೆ ಆ ಬಗ್ಗೆ ವಿವರ ನೀಡಿ. ಎಲ್ಲರೂ ಕುಳಿತು ಪಕ್ಷದ ಭವಿಷ್ಯದ ಬಗ್ಗೆ ಚಿಂತನೆ ನಡೆಸಲಿ. ಪಕ್ಷದ ಸಂಘಟನೆ ಕಡೆಗೆ ಗಮನ ಕೊಡಿ~ ಎಂದು ಸೂಚಿಸಿದ್ದಾರೆ.

`ಪಕ್ಷದಲ್ಲಿ ಇತ್ತೀಚೆಗೆ ಜಾತಿ ರಾಜಕಾರಣ ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ. ಇದರಿಂದ ನಾಯಕರ ವರ್ಚಸ್ಸೇ ಹಾಳಾಗುತ್ತದೆ~ ಎಂದು ಎಚ್ಚರಿಸಿದ್ದಾರೆ.

ಸಿಎಂ ಮೌನ: ಆರ್‌ಎಸ್‌ಎಸ್ ಪ್ರಮುಖರು ನಡೆಸಿದ ಸಂಧಾನ ಸಭೆಯಲ್ಲಿ ಮುಖ್ಯಮಂತ್ರಿ ಸದಾನಂದ ಗೌಡರು ಮೌನಕ್ಕೆ ಶರಣಾಗಿದ್ದರು. ಸಭೆಯಲ್ಲಿದ್ದ ಇತರ ಎಲ್ಲರಿಗೂ ಅಭಿಪ್ರಾಯ ಮಂಡಿಸಲು ಅವಕಾಶವ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.