ADVERTISEMENT

ಕುಡಿಯೋಕೆ ಕೊಡ್ತಾರಂತ ಧರ್ಮಾಂತರವಾಗುತ್ತಿರುವ ಯುವಜನರು!

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 7:05 IST
Last Updated 25 ಫೆಬ್ರುವರಿ 2018, 7:05 IST
ಕಾರ್ಯಕ್ರಮದಲ್ಲಿ ರಘುನಂದನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಘುನಂದನ್ ಮಾತನಾಡಿದರು.   

ಬೆಳಗಾವಿ: ನಮ್ಮ ಹಿಂದೂ ಯುವಕರು ಪ್ರತಿ ಭಾನುವಾರ ಚರ್ಚುಗಳಿಗೆ ಹೋಗುತ್ತಿರುವುದು ಕಂಡುಬರುತ್ತಿದೆ. ಕುಡಿಯೋಕೆ ಕೊಟ್ಟು, ಕುಣಿಯುವುದಕ್ಕೆ ಹುಡುಗಿಯರನ್ನೂ ಕೊಡುತ್ತಾರೆಂದು ಹೋಗುತ್ತಿದ್ದಾರೆ. ಧರ್ಮಾಂತರ ಮಾಡಲು ಇಂಥದೊಂದು ಹುನ್ನಾರ ನಡೆಯುತ್ತಿದೆ ಎಂದು ಕೊಲ್ಲಾಪುರ ಕನೇರಿಯಲ್ಲಿರುವ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆರೋಪಿಸಿದರು.

ವಿಶ್ವ ಹಿಂದೂ ಪರಿಷತ್- ಧರ್ಮ ಜಾಗರಣ ವತಿಯಿಂದ ಇಲ್ಲಿನ ಜೆಎನ್ಎಂಸಿ ಆವರಣದ ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಸಂತ ಸಮಾವೇಶ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆ ಹುಡುಗಿಯನ್ನು ಮದುವೆ ಆಗಬೇಕೆಂದರೆ ನಮ್ಮ ಧರ್ಮಕ್ಕೆ ಮತಾಂತರ ಆಗಬೇಕು ಎಂಬ ಷರತ್ತುಗಳನ್ನು ವಿಧಿಸಲಾಗುತ್ತಿದೆ. ಚರ್ಚುಗಳಲ್ಲಿ ಇಂತಹ ಕಾರ್ಯಕ್ರಮಗಳ ನಡೆಯುತ್ತಿವೆ ಎಂದು ದೂರಿದರು.

ADVERTISEMENT

ನಮ್ಮ ದೇವರುಗಳನ್ನು ಅವಮಾನಿಸುವ ಪ್ರಕ್ರಿಯೆ, ಕೆಟ್ಟದಾಗಿ ಮೂಲಕ ತೋರಿಸುವುದು ಸಾಮಾನ್ಯವಾಗಿದೆ. ಫಾದರ್ ಗಳು ಕೂಡ ಖಾವಿ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಚರ್ಚುಗಳನ್ನು ದೇವಾಲಯ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ಮಾರಿಯಮ್ಮ ದೇವಾಲಯ ಎಂದು ಕರೆದು, ಅರೆ ನಮ್ಮದಾ ಎಂಬ ಭಾವನೆ ಮೂಡುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.

ಹಿಂದೂ ಧರ್ಮದಲ್ಲಿಯೇ ಹುಟ್ಟಿ ಆ ಧರ್ಮವನ್ನು ನಿಂದಿಸುವವರು ಧರ್ಮದ್ರೋಹಿಗಳು. ಅಂಥವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ತಿಳಿಸಿದರು.
ಧರ್ಮಾಂತರ ಹೆಚ್ಚಾಗಿದೆ. ಬ್ರಾಹ್ಮಣರಲ್ಲಿ ಶೇಕಡಾ 6 ಹಾಗೂ ಲಿಂಗಾಯತರಲ್ಲಿ ಈ ಪ್ರಮಾಣ ಶೇಕಡಾ 8ರಷ್ಟು ಮಂದಿ ಧರ್ಮಾಂತರ ಆಗುತ್ತಿದ್ದಾರೆ ಎಂದು ಹೇಳಿದರು.

ಅಸ್ಪೃಶ್ಯತೆ ಪಿಡುಗು ದೇಶದಲ್ಲಿ ಹಿಂದಿನಷ್ಟು ಪ್ರಮಾಣದಲ್ಲಿ ಇಲ್ಲ. ನಮ್ಮ ನಡುವೆ ಇಂದಿಗೂ ಇರುವ ಬ್ರಿಟಿಷರು ಹಾಗೂ ಮೊಘಲರ ಪ್ರತಿನಿಧಿಗಳು ಹಿಂದೆ ಆಗಿಹೋಗಿರುವ ಘಟನೆಗಳನ್ನು ವೈಭವೀಕರಿಸಿ,‌ ಇಲ್ಲದ ಭೂತಗಳನ್ನು ಮನಸ್ಸಿನಲ್ಲಿ ಹಾಕುತ್ತಿದ್ದಾರೆ. ಸೇಡು ತೀರಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿ ಬೆಂಕಿ ಹಚ್ಚುತ್ತಿದ್ದಾರೆ. ಸಮಾಜವನ್ನು ಹಾಳು ಮಾಡಲು ಹಾತೊರೆಯುತ್ತಿದ್ದಾರೆ. ಬಹಳಷ್ಟು ಭಾಷಣಕಾರರು ಮಾತ್ರವಲ್ಲದೆ ಪ್ರವಚನಕಾರರೂ ಈ ಕೆಲಸವನ್ನು ಮಾಡುತ್ತಿದ್ದಾರೆ. ವಿದ್ರೋಹಿಗಳಾಗುವಂತೆ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

ಅಂಧಶ್ರದ್ಧೆ ತೊಲಗಿಸುತ್ತೇವೆ ಎನ್ನುವ ಹೆಸರಿನಲ್ಲೂ ಈ ಕೆಲಸ ನಡೆಯುತ್ತಿದೆ. ಅಂಥವರ ಭಾಷಣಗಳಿಗೆ ನಮ್ಮಲ್ಲಿಯೇ ಕೆಲವರು ಚಪ್ಪಾಳೆ ಹಾಕುತ್ತಾರೆ. ವಿದ್ರೋಹದ ಮಾತುಗಳನ್ನು ಆಡುವವರಿಗೆ ಚಪ್ಪಾಳೆ ಹಾಕಬಾರದು. ಕಪಾಳಕ್ಕೆ ಹೊಡೆಯಬೇಕು ಎಂದು ಕರೆ ನೀಡಿದರು.

ಧರ್ಮನಿಂದನೆ ಮಾಡುವವರ ವಿಚಾರದಲ್ಲಿ ಹೇಡಿಗಳಾಗಬಾರದು. ಯಾವ ಧರ್ಮದಲ್ಲಿ ಲೋಪದೋಷಗಳು ಇಲ್ಲ? ನಮ್ಮಲ್ಲಿ ಅಸ್ಪೃಶ್ಯತೆ ಆಚರಣೆ ಯೇ ದೊಡ್ಡ ದೋಷ. ಅದನ್ನು ಹೋಗಲಾಡಿಸಲು ಮಠಾಧೀಶರು ಮುಂದಾಗಬೇಕು. ದಲಿತರ ಕೇರಿಗಳಿಗೆ ಹೋಗಬೇಕು. ಅವರ ಮನೆಗಳಲ್ಲಿ ಪ್ರಸಾದ ಸ್ವೀಕರಿಸಬೇಕು. ಭಜನೆ ಕಾರ್ಯಕ್ರಮ ನಡೆಸಬೇಕು. ಅವರನ್ನು ಅಪ್ಪಿಕೊಳ್ಳಬೇಕು. ನಾಯಿ, ಚೆಕ್ಕುಗಳನ್ನು ಮನೆಯೊಳಗೆ ಸೇರಿಸುತ್ತೇವೆ. ಹೀಗಿರುವಾಗ ಮನುಷ್ಯರ ವಿಚಾರದಲ್ಲಿ ತಾರತಮ್ಯ ಸಲ್ಲದು. ಎಲ್ಲರನ್ನೂ ಮನುಷ್ಯರಂತೆ ಕಾಣಬೇಕು. ವಿಶ್ವವೇ ನಮ್ಮ ಮನೆ ಎಂದುಕೊಂಡು ಬಂದವರು ನಾವು ಎನ್ನುವುದನ್ನು ಮರೆಯಬಾರದು ಎಂದು ತಿಳಿಸಿದರು.

ವಿಎಚ್‌ಪಿ ಮುಖಂಡರಾದ ಪ್ರಮೋದ್ ಹೆಗಡೆ, ರಘುನಂದನ್, ಶಾಂತಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.