ನವದೆಹಲಿ: ರಾಜ್ಯದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ನೀಡಿರುವ ಅನುಮತಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಹಸಿರು ನ್ಯಾಯಮಂಡಳಿ ಬುಧವಾರ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಕೇಳಿದೆ.
ವಿಜಾಪುರ ಜಿಲ್ಲೆಯಲ್ಲಿ ಎನ್‌ಟಿಪಿಸಿ ಮೊದಲ ಹಂತದಲ್ಲಿ ಸ್ಥಾಪಿಸುತ್ತಿರುವ 2400 ಮೆ.ವಾ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರಕ್ಕೆ ಜನವರಿ 25ರಂದು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಖ್ಯಾತ ಅಣುವಿಜ್ಞಾನಿಯೊಬ್ಬರು ಸಲ್ಲಿಸಿರುವ ಅರ್ಜಿ ಸಂಬಂಧದಲ್ಲಿ ವಿವರಣೆ ನೀಡುವಂತೆ ಎ.ಎಸ್.ನಾಯ್ಡು ನೇತೃತ್ವದ ಹಸಿರು ನ್ಯಾಯಮಂಡಳಿ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚಿಸಿದೆ.
ಯೋಜನೆಗೆ ಸಂಬಂಧಿಸಿದಂತೆ ಪರಿಸರ ಸಚಿವಾಲಯ ನೀಡಿರುವ ಅನುಮತಿ ತಪ್ಪು ಮಾಹಿತಿ ಹಾಗೂ ವಿಶ್ಲೇಷಣೆಗಳನ್ನು ಆಧರಿಸಿದೆ ಎಂದು ಅಣುಶಕ್ತಿ ಇಲಾಖೆ ನಿವೃತ್ತ ವಿಜ್ಞಾನಿ ಎಂ.ಪಿ. ಪಾಟೀಲ್ ಅರ್ಜಿಯಲ್ಲಿ ದೂರಿದ್ದಾರೆ.
ಹಸಿರು ನ್ಯಾಯಮಂಡಳಿ ಮುಂದೆ ಖುದ್ದಾಗಿ ಹಾಜರಾದ ಪಾಟೀಲ್, ವಿದ್ಯುತ್ ಯೋಜನೆಗೆ ಸ್ವಾಧೀನಪಡಿಸಿಕೊಂಡ ಭೂಮಿ ಬರಡು-ಕಲ್ಲು ಬಂಡೆಗಳಿಂದ ಕೂಡಿದೆ ಎಂದು ಹೇಳಲಾಗಿದೆ ಆದರೆ, ಈ ಭೂಮಿಯಲ್ಲಿ ಎರಡು ಬೆಳೆ ಬೆಳೆಯಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ತಮ್ಮ ವಾದ ಸಮರ್ಥನೆಗೆ ಅಗತ್ಯವಾದ ಫೋಟೋಗಳನ್ನು ಒದಗಿಸಿದ್ದಾರೆ.
ಎನ್‌ಟಿಪಿಸಿ ಯೋಜನೆಗೆ ಅಗತ್ಯವಿರುವ ಭೂಮಿ ಕುರಿತು ತಪ್ಪು ಅಂದಾಜು ನೀಡಿದೆ. ಪರಿಸರ ಇಲಾಖೆ ಲೋಪಗಳನ್ನು ಸರಿಪಡಿಸುವ ಸಂಬಂಧ ಎನ್‌ಟಿಪಿಸಿಗೆ ನಿರ್ದಿಷ್ಟ ಸೂಚನೆ ನೀಡದೆ ಕಲ್ಲಿದ್ದಲು ಪ್ರಮಾಣ ಹಾಗೂ ಸಾಮರ್ಥ್ಯಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಸಾಮಾನ್ಯ ನಿರ್ದೇಶನ ನೀಡಿ ಕೈತೊಳೆದುಕೊಂಡಿದೆ ಎಂದು ಅರ್ಜಿದಾರರು ದೂರಿದ್ದಾರೆ.
ವಿದ್ಯುತ್ ಉತ್ಪಾದನಾ ಘಟಕ ಹೊರಸೂಸುವ ಭಾರಿ ಪ್ರಮಾಣದ ವಿಷಪೂರಿತ ಬೂದಿ ಬಳಕೆ ಕುರಿತಂತೆ ಯಾವುದೇ ನಿರ್ದಿಷ್ಟ ಯೋಜನೆಯನ್ನು ಎನ್‌ಟಿಪಿಸಿ ನೀಡಿಲ್ಲ. ಈ ಬೂದಿಯನ್ನು ಜನವಸತಿ ಪ್ರದೇಶದಲ್ಲಿ ಸಂಗ್ರಹಿಸುವುದರಿಂದ ಜನ, ಜಾನುವಾರು, ನೀರು ಮತ್ತು ಬೆಳೆಗಳ ಮೇಲೆ ದುಷ್ಪರಿಣಾಮ ಆಗಲಿದೆ. ಹತ್ತಿರದಲ್ಲಿ ಆಲಮಟ್ಟಿ ಅಣೆಕಟ್ಟೆ ಇರುವುದರಿಂದ ಅಪಾಯವೂ ಇದೆ. ಈ ಕಾರಣಕ್ಕೆ ಒಂದನೇ ಹಂತದ ವಿದ್ಯುತ್ ಘಟಕಕ್ಕೆ ನೀಡಿರುವ ಅನುಮತಿ ರದ್ದುಮಾಡಬೇಕು ಎಂದು ಪಾಟೀಲ್ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಎನ್‌ಟಿಪಿಸಿ ಸ್ಥಾಪಿಸುತ್ತಿರುವ ಮೊದಲ ವಿದ್ಯುತ್ ಯೋಜನೆ ಇದಾಗಿದೆ. ನಾಲ್ಕು ಸಾವಿರ ಮೆ.ವಾ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಮೊದಲ ಹಂತದಲ್ಲಿ 2400 ಮೆ.ವಾ ಸಾಮರ್ಥ್ಯದ ಮೊದಲ ಘಟಕ ಆರಂಭಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.