ADVERTISEMENT

ಕೃಷಿಕರ ಬದುಕು ಹಸನು ಮಾಡಿದ ಗುಂಡಪ್ಪ

​ಪ್ರಜಾವಾಣಿ ವಾರ್ತೆ
Published 16 ಮೇ 2012, 19:30 IST
Last Updated 16 ಮೇ 2012, 19:30 IST
ಕೃಷಿಕರ ಬದುಕು ಹಸನು ಮಾಡಿದ ಗುಂಡಪ್ಪ
ಕೃಷಿಕರ ಬದುಕು ಹಸನು ಮಾಡಿದ ಗುಂಡಪ್ಪ   

ಬೆಂಗಳೂರು: ಆಕಾಶವಾಣಿ, ದೂರದರ್ಶನ, ಪತ್ರಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಮೂಲಕ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ಶ್ರಮಿಸಿದ ಜಿ.ಆರ್. ಗುಂಡಪ್ಪ (69) ಅವರು ನಗರದಲ್ಲಿ ಬುಧವಾರ ನಿಧನರಾದರು.

ಕೆಲವು ದಿನಗಳಿಂದ  ಕಾಮಾಲೆ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಮಧ್ಯಾಹ್ನ ಕೊನೆಯುಸಿರೆಳೆದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸುಮನಹಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು.

ಗ್ರಾಮೀಣ ಪ್ರದೇಶದ ಅಪಾರ ಅನುಭವ ಹೊಂದಿದ್ದ ಅವರು, ಆಕಾಶವಾಣಿ ಮೂಲಕ ರೈತರಿಗೆ ಕೃಷಿ ಸಂಬಂಧಿ ಸಲಹೆ ನೀಡಿದರು. ಕೃಷಿಲೋಕ, ಕೃಷಿರಂಗ, ಅರಳಿಕಟ್ಟೆ, ಗ್ರಾಮಲಕ್ಷ್ಮೀ ಕಾರ್ಯಕ್ರಮಗಳ ಮೂಲಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ರೈತರ ಜ್ಞಾನಾರ್ಜನೆಗೆ ಕಾರಣರಾಗಿದ್ದರು.

ADVERTISEMENT

ಮೂರೂವರೆ ದಶಕಗಳ ಕಾಲ ಆಕಾಶವಾಣಿಯಲ್ಲಿ ವರದಿಗಾರರಾಗಿ, ಕೃಷಿರಂಗದ ಮುಖ್ಯಸ್ಥರಾಗಿದ್ದರು. ನಂತರ ಬೆಂಗಳೂರು ದೂರದರ್ಶನ ಕೇಂದ್ರದಲ್ಲೂ ಸೇವೆ ಸಲ್ಲಿಸಿದ ಅವರು ಕೃಷಿ ಸಂಪದ, ಕೃಷಿ ದರ್ಶನ ಕಾರ್ಯಕ್ರಮ ನಿರ್ಮಾಣ ಮಾಡಿದ್ದರು.

1970 ರ ದಶಕದಲ್ಲಿ ಗ್ರಾಮಾಂತರ ರೇಡಿಯೊ ಗೋಷ್ಠಿಗಳನ್ನು ಸ್ಥಾಪಿಸಿದ ಅವರು ವಯಸ್ಕರ ಶಿಕ್ಷಣ, ಗ್ರಾಮ ನೈರ್ಮಲ್ಯ, ಆಧುನಿಕ ಬೇಸಾಯ, ಯುವಕ ಸಂಘಗಳ ಪಾತ್ರ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರು. ಈ ಮೂಲಕ ಗ್ರಾಮೀಣ ಯುವಕರಲ್ಲಿ ದುಡಿಮೆಯ ಒಲವನ್ನು ಬೆಳೆಸಿದರು.

ಜಿ.ಆರ್. ಗುಂಡಪ್ಪ ಅವರು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾತ್ರವಲ್ಲದೇ, ಪತ್ರಿಕೆಗಳಲ್ಲೂ ಗ್ರಾಮದ ಅಭ್ಯುದಯಕ್ಕೆ ಇಂಬುಕೊಡುವ ಲೇಖನಗಳನ್ನು ಬರೆದಿದ್ದಾರೆ. `ಪ್ರಜಾವಾಣಿ~ ಪತ್ರಿಕೆಯಲ್ಲಿ `ಕೃಷಿ ಮಂಥನ~ ಅಂಕಣ ಬರೆಯುತ್ತಿದ್ದ ಅವರು, ರೈತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಪ್ರಕಟಿಸುವ ಯೋಜನಾ ಪತ್ರಿಕೆಯಲ್ಲಿ ಅಭಿವೃದ್ಧಿ ಕುರಿತು, ಜಾಗತೀಕರಣದ ಕುರಿತು, ಕೃಷಿ ಉತ್ಪನ್ನ ಮಾರಾಟದ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ರಾಜ್ಯ ಸರ್ಕಾರದಿಂದ ಪ್ರಕಟವಾಗುವ `ಕರ್ನಾಟಕ ವಿಕಾಸ~ ಪತ್ರಿಕೆಗೂ ಅಭಿವೃದ್ಧಿ ಲೇಖನಗಳನ್ನು ಬರೆದಿದ್ದಾರೆ.

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಅವರು ಸಲ್ಲಿಸಿರುವ ಸೇವೆಗಾಗಿ 1996 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಣ್ಣ ಉಳಿತಾಯ ಕ್ಷೇತ್ರದಲ್ಲಿನ ಅವರ ಸಾಧನೆಗೆ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಪ್ರಶಸ್ತಿ ನೀಡಿ ಗೌರವಿಸ್ದ್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.