ADVERTISEMENT

ಕೃಷ್ಣಾ: ಸರ್ಕಾರದ ಕಣ್ಣೊರೆಸುವ ತಂತ್ರಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 19:30 IST
Last Updated 6 ಆಗಸ್ಟ್ 2012, 19:30 IST

ವಿಜಾಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಕಾಮಗಾರಿಗಳಿಗೆ ಈ ವರ್ಷ ಕೇವಲ ರೂ 1205 ಕೋಟಿ ಮೀಸಲಿಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ರೈತರಿಗೆ ಮೋಸ ಮಾಡಿದೆ~ ಎಂದು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಆರೋಪಿಸಿದ್ದಾರೆ.

ಮುಳವಾಡ, ಚಿಮ್ಮಲಗಿ, ಕೊಪ್ಪಳ, ಹೆರಕಲ್, ರಾಮಪುರ, ಮಲ್ಲಾಬಾದ ಏತ ನೀರಾವರಿ ಯೋಜನೆಗಳು, ನಾರಾಯಣಪುರ ಬಲದಂಡೆ ಹಾಗೂ ಗುತ್ತಿ ಬಸವಣ್ಣ ಕಾಲುವೆ ವಿಸ್ತರಣೆ ಸೇರಿದಂತೆ ಒಂಬತ್ತು ಯೋಜನೆಗಳನ್ನು ಕೃಷ್ಣಾ 3ನೇ ಹಂತ ಒಳಗೊಂಡಿದೆ. `ಈ ಕಾಮಗಾರಿಗಳಿಗೆ ವಾಸ್ತವವಾಗಿ ರೂ 25ರಿಂದ 30 ಸಾವಿರ ಕೋಟಿ ಬೇಕು. ಆದರೆ, ಸರ್ಕಾರಿ ದರದಂತೆ ಜಮೀನಿನ ಮೌಲ್ಯಮಾಪನ ಮಾಡಿ ನೀರಾವರಿ ಇಲಾಖೆ ರೂ 17,205 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ ತಯಾರಿಸಿದೆ. ಈ ವರ್ಷ ಕನಿಷ್ಠ ರೂ 5000 ಕೋಟಿ ಕೊಡಿ ಎಂಬ ಈ ಭಾಗದ ಜನತೆ-ಜನಪ್ರತಿನಿಧಿಗಳ ಕೋರಿಕೆಗೆ ಯಾವುದೇ ಸ್ಪಂದನೆ ದೊರೆತಿಲ್ಲ~ ಎಂದು ಸೋಮವಾರ ಇಲ್ಲಿ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.

ಮುಳವಾಡ ಏತ ನೀರಾವರಿ ಯೋಜನೆಯ ಕಾಮಗಾರಿಗೆ 1986ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಚುನಾವಣಾ ರಾಜಕೀಯಕ್ಕಾಗಿ ಬಿಜೆಪಿ ಸರ್ಕಾರ ಇದೇ 11ರಂದು ಮತ್ತೊಮ್ಮೆ ಭೂಮಿ ಪೂಜೆ ನೆರವೇರಿಸಲು ಹೊರಟಿದೆ. ತಪ್ಪು ಮಾಹಿತಿ ನೀಡಿ ಮುಗ್ಧ ರೈತರನ್ನು ವಂಚಿಸುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದರು.


`ಕೃಷ್ಣಾ ಎರಡನೆಯ ನ್ಯಾಯಮಂಡಳಿ ತೀರ್ಪಿನ ನಂತರ ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಬೇಕಿರುವ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕಾಗಿ ವಿಜಾಪುರ-ಬಾಗಲಕೋಟೆ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು, ಮಠಾಧೀಶರು, ಹೋರಾಟಗಾರರು ಒಟ್ಟಾಗಿ ಸೇರಿ ಸಭೆ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದಿದ್ದೆವು. ಈ ವರ್ಷ ರೂ 5000 ಕೋಟಿ ಕೊಡಬೇಕು ಎಂಬ ಬೇಡಿಕೆ ನಮ್ಮದಾಗಿತ್ತು.

ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸಾಕಷ್ಟು ಭರವಸೆ ಹುಟ್ಟಿಸಿದ್ದರು. ಕನಿಷ್ಠ ರೂ 3500ರಿಂದ 4000 ಕೋಟಿ, ಈ ಕಾಮಗಾರಿಗೆ ದೊರೆಯಬಹುದು ಎಂಬ ನಿರೀಕ್ಷೆ ನಮ್ಮೆಲ್ಲರದ್ದಾಗಿತ್ತು~ ಎಂದು ಹೇಳಿದರು.

`ರಾಜ್ಯ ಸರ್ಕಾರ ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯಿಸುತ್ತಿರುವುದರ ಜೊತೆಗೆ ವಿಜಾಪುರ ಜಿಲ್ಲೆಗೆ ಅನ್ಯಾಯ ಮಾಡುತ್ತಿರುವುದು ಖಚಿತವಾಗಿದೆ. ಜಿಲ್ಲೆಗೆ ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಜನಪ್ರತಿನಿಧಿಗಳು ಸರ್ಕಾರ ನೀಡಿದ ಅತ್ಯಲ್ಪ ಅನುದಾನಕ್ಕಷ್ಟೇ ಸಮಾಧಾನಗೊಂಡಿದ್ದಾರೆಯೇ. ಅಗತ್ಯದಷ್ಟು ಹಣ ನೀಡದೆ ಭೂಮಿ ಪೂಜೆ ನೆರವೇರಿಸಿ ಸರ್ಕಾರದ ಕಣ್ಣೊರೆಸುವ ತಂತ್ರಕ್ಕಷ್ಟೇ ಜಿಲ್ಲೆ ಜನತೆ ಸಂತೃಪ್ತಗೊಳ್ಳುತ್ತಾರೆಯೇ ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು~ ಎಂದರು.

`ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸಮರ್ಥರು. ಹೊಸ ವಿಚಾರಗಳನ್ನು ಹೊಂದಿದವರು. ಆದರೂ, ಈ ಯೋಜನೆಗಳಿಗೆ ಹಣ ನೀಡದಿರುವುದು ನಮಗೆಲ್ಲ ಆಘಾತವನ್ನುಂಟು ಮಾಡಿದೆ. ಸರ್ಕಾರ ಇಲ್ಲಿವರೆಗೆ ಭೂ-ಸ್ವಾಧೀನ, ಪುನರ್ ನಿರ್ಮಾಣ, ಪರಿಹಾರ ಕೆಲಸಗಳಿಗಾಗಿ ಪ್ರತ್ಯೇಕ ಉನ್ನತಾಧಿಕಾರ ಸಮಿತಿ ರಚನೆ, ಎಂಜನಿಯರರು, ಸಿಬ್ಬಂದಿಯ ನಿಯೋಜನೆ, ಬಾಹ್ಯ ಮೂಲದಿಂದ ಹಣದ ಕ್ರೋಡೀಕರಣ ಮತ್ತಿತರ ಕೆಲಸಗಳನ್ನು ಪರಿಣಾಮಕಾರಿಯಾಗಿ ಕೈಗೊಂಡಿಲ್ಲ~ ಎಂದೂ ಪಾಟೀಲ ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.