ADVERTISEMENT

ಕೃಷ್ಣ, ಧರಂ, ಕುಮಾರ, ದೇವೇಗೌಡ ವಿರುದ್ಧವೂ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 9:05 IST
Last Updated 23 ಜನವರಿ 2011, 9:05 IST

ಬೆಂಗಳೂರು (ಪಿಟಿಐ): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಅನುಮತಿ ನೀಡಿದ್ದಕ್ಕೆ ಪ್ರತಿಯಾಗಿ ವಕೀಲರೊಬ್ಬರು  ಎಸ್.ಎಂ. ಕೃಷ್ಣ ಸೇರಿದಂತೆ ನಾಲ್ವರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ನ್ಯಾಯಮೂರ್ತಿ ಬಿ. ಪದ್ಮರಾಜ್ ಆಯೋಗದ ಮುಂದೆ ದೂರು ದಾಖಲಿಸಿದ್ದಾರೆ.

ವಕೀಲ ವಿನೋದ್ ಅವರು ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಎಸ್.ಎಂ. ಕೃಷ್ಣ, ಎಚ್.ಡಿ ದೇವೇಗೌಡ, ಎಚ್.ಡಿ. ಕುಮಾರ ಸ್ವಾಮಿ ಮತ್ತು ಎನ್. ಧರಮ್ ಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನಡೆದಿರುವ ಭೂ ಮಂಜೂರಾತಿ ಹಾಗೂ ಡಿನೋಟಿಫಿಕೇಷನ್ ಪ್ರಕರಣಗಳ ತನಿಖೆ ನಡೆಸುವಂತೆ ಕೋರಿ ಶನಿವಾರ ದೂರು ದಾಖಲು ಮಾಡಿದ್ದಾರೆ.

ನಾಲ್ಕೂ ಮಂದಿ ಮಾಜಿ ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ಮಾಡಲಾದ ಭೂ ಮಂಜೂರಾತಿ ಮತ್ತು ಡಿನೋಟಿಫಿಕೇಷನ್ ಪಟ್ಟಿ ಮತ್ತಿತರ ದಾಖಲೆಗಳನ್ನು ಒಳಗೊಂಡ  630 ಪುಟಗಳ ದೂರನ್ನು ಬಿಜೆಪಿ ಸರ್ಕಾರವು ರಚಿಸಿರುವ ನ್ಯಾಯಮೂರ್ತಿ ಪದ್ಮರಾಜ್ ತನಿಖಾ ಆಯೋಗದ ಮುಂದೆ ವಿನೋದ್ ಸಲ್ಲಿಸಿದ್ದಾರೆ.

ADVERTISEMENT

1995ರಿಂದ 2010ರವರೆಗಿನ ಅವಧಿಯಲ್ಲಿ ಬಿಡಿಎ ಮತ್ತು ಕೆಐಎಡಿಬಿಯಿಂದ ಮಾಡಲಾಗಿರುವ ಭೂ ಮಂಜೂರಾತಿ ಮತ್ತು ಡಿನೋಟಿಫಿಕೇಷನ್ ಪ್ರಕರಣಗಳ ತನಿಖೆ ನಡೆಸಲು ಕರ್ನಾಟಕ ಸರ್ಕಾರವು ಆದೇಶ ನೀಡಿತ್ತು.

ದೇವೇಗೌಡ ಅವರು 1994-1996ರ ನಡುವಣ ಅವಧಿಯಲ್ಲಿ, ಕೃಷ್ಣ ಅವರು 1999-2004ರ ಅವಧಿಯಲ್ಲಿ, ಧರಮ್ ಸಿಂಗ್ ಅವರು 2004-2006ರ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದರೆ ಕುಮಾರ ಸ್ವಾಮಿ ಅವರು 2006-2007ರ ಅವಧಿಯಲ್ಲಿ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಮುಖ್ಯಮಂತ್ರಿಯಾಗಿ ಮುನ್ನಡೆಸಿದ್ದರು.

ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.