ADVERTISEMENT

ಕೆಎಟಿ ಆದೇಶಕ್ಕೆ ತಡೆ: 617 ಅಧಿಕಾರಿಗಳಿಗೆ ಮತ್ತೆ ಸಂಕಷ್ಟ?

ಅಕ್ರಮ ಗಣಿಗಾರಿಕೆ ಶಾಮೀಲಾದ ಆರೋಪ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪ ಸಂಬಂಧ ಸರ್ಕಾರದ ವಿವಿಧ ಶ್ರೇಣಿಯ ಒಟ್ಟು 617 ಅಧಿಕಾರಿಗಳ ವಿರುದ್ಧದ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದ ಸರ್ಕಾರದ ಆದೇಶವನ್ನು ರದ್ದುಪಡಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕೆಎಟಿ ತೀರ್ಪು ರದ್ದುಪಡಿಸುವಂತೆ ಕೋರಿ ಕರ್ನಾಟಕ ಲೋಕಾಯುಕ್ತ ಮತ್ತು ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು  ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಬಿ.ಶ್ರೀನಿವಾಸ್‌ ಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ತಡೆ ನೀಡಿತು.

ಕೆಎಟಿ ಆದೇಶದಿಂದ ನಿರಾಳರಾಗಿದ್ದ ಆರೋಪಿ ಅಧಿಕಾರಿಗಳಿಗೆ ವಿಭಾಗೀಯ ನ್ಯಾಯಪೀಠದ ಆದೇಶದಿಂದಾಗಿ ಈಗ ಮತ್ತೆ ಸಂಕಷ್ಟ ಎದುರಾದಂತಾಗಿದೆ.

ADVERTISEMENT

ಪ್ರಕರಣವೇನು?: ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಖಾರದಪುಡಿ ಮಹೇಶ್‌ ಪ್ರಮುಖ ಆರೋಪಿಯಾಗಿದ್ದರು. ಮಹೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಒಂದು ಪೆನ್‌ಡ್ರೈವ್ ದೊರೆತ್ತಿತ್ತು. ಅದರಲ್ಲಿ ‘ಇಲಾಖಾ ವೆಚ್ಚ’ ಎಂಬ ಹೆಸರಿನ ಫೋಲ್ಡ್‌ರ್‌ನಲ್ಲಿ ಸರ್ಕಾರದ ವಿವಿಧ ಶ್ರೇಣಿಗಳ 617 ಅಧಿಕಾರಿಗಳಿಗೆ ನೀಡಲಾಗಿದೆ ಎನ್ನಲಾದ ಒಟ್ಟು ₹2.46 ಕೋಟಿ ಲಂಚದ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ತನಿಖೆ ಪೂರ್ಣಗೊಳಿಸಿದ ನಂತರ ಈ ಕುರಿತಂತೆ ಸರ್ಕಾರಕ್ಕೆ  ವರದಿ ಸಲ್ಲಿಸಲಾಗಿತ್ತು. ಈ ವರದಿ ಪರಿಶೀಲಿಸಿದ್ದ ರಾಜ್ಯ ಸರ್ಕಾರ, ಪ್ರೆನ್‌ಡ್ರೈವ್‌ನಲ್ಲಿ ಹೆಸರಿಸಲಾಗಿದ್ದ ಎಲ್ಲ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಸೂಚಿಸಿ 2013ರ ಸೆಪ್ಟೆಂಬರ್ 6ರಂದು ಆದೇಶಿಸಿತ್ತು. ಇದರ ಅನುಸಾರ ತನಿಖೆ ನಡೆಸಿದ್ದ ಲೋಕಾಯುಕ್ತ ತನಿಖಾಧಿಕಾರಿಗಳು, ಹಲವು ಅಧಿಕಾರಿಗಳ ಮೇಲೆ ಆರೋಪಗಳನ್ನು ಹೊರಿಸಿದ್ದರು.

ಇದನ್ನು ಪ್ರಶ್ನಿಸಿ ಅಂದಿನ ಯಲ್ಲಾಪುರ ತಾಲ್ಲೂಕಿನ ತಹಶೀಲ್ದಾರ್ ಮಂಜುನಾಥ್ ಆರ್. ಬಳ್ಳಾರಿ ಮತ್ತಿತರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಗಳ ವಿಚಾರಣೆ ನಡೆಸಿದ್ದ ಕೆಎಟಿ, ‘ರಾಜ್ಯ ಸರ್ಕಾರವು ಪ್ರಕರಣದ ಕುರಿತು ಪ್ರಾಥಮಿಕ ದಾಖಲೆಗಳ ಸಂಗ್ರಹ ಮಾಡಲು ಮೊದಲು ಇಲಾಖಾ ತನಿಖೆ ನಡೆಸಬೇಕಿತ್ತು. ಆರೋಪಿತ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ಅವರ ಹೇಳಿಕೆಗಳನ್ನು ಪಡೆಯಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಏಕಾಏಕಿ ಲೋಕಾಯುಕ್ತರ ತನಿಖೆಗೆ ಆದೇಶಿಸಲಾಗಿದೆ. ಇದು ಸಹಜ ನ್ಯಾಯದ ಉಲ್ಲಂಘನೆ’ ಎಂಬ ಅಭಿಪ್ರಾಯದೊಂದಿಗೆ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು.

ಈ ಆದೇಶ ಪ್ರಶ್ನಿಸಿ ಇದೀಗ ಕರ್ನಾಟಕ ಲೋಕಾಯುಕ್ತರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.