ADVERTISEMENT

ಕೆ.ಎಲ್. ಗೋಪಾಲಕೃಷ್ಣ ರಾವ್ ನಿಧನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST

ಬೆಂಗಳೂರು: ಹಿರಿಯ ಲೇಖಕ, ಅನುವಾದಕ ಕೆ.ಎಲ್. ಗೋಪಾಲಕೃಷ್ಣ ರಾವ್ ಅವರು ಅಮೆರಿಕದಲ್ಲಿ ಶನಿವಾರ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

ಮೂಲತಃ ಬೆಂಗಳೂರಿನವರಾದ ರಾವ್ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ವ್ಯಾಸಂಗ ಮಾಡಿದ್ದರು. ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ, `ನೀನಾಸಂ~ನ ಸಂಸ್ಥಾಪಕರಾದ ದಿವಂಗತ ಕೆ.ವಿ. ಸುಬ್ಬಣ್ಣ ಅವರ ಸಹಪಾಠಿಯೂ ಆಗಿದ್ದರು. ಕಲಾವಿದ ಆರ್.ಎಸ್. ನಾಯ್ಡು ಹಾಗೂ ಲೇಖಕ ನಿರಂಜನ ಅವರ ನಿಕಟ ಸಂಪರ್ಕವೂ ಇವರಿಗಿತ್ತು.

ರಷ್ಯದ ರಾಜಧಾನಿ ಮಾಸ್ಕೊದ ರಾದುಗ ಪ್ರಕಾಶನ ಸಂಸ್ಥೆಯಲ್ಲಿ ಕನ್ನಡ ಅನುವಾದಕರಾಗಿ 17 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಪ್ರಪಂಚದ ಪ್ರಮುಖ ವಿದ್ಯಮಾನಗಳ ಕುರಿತು `ವಿಶ್ವದರ್ಶನ~ ಶೀರ್ಷಿಕೆಯಡಿ, `ಪ್ರಜಾವಾಣಿ~ಗೆ ಅಂಕಣ ಬರೆಯುತ್ತಿದ್ದರು. 1950ರ ದಶಕದಲ್ಲಿ `ಸೋವಿಯತ್ ದೇಶ~ ಪತ್ರಿಕೆಯಲ್ಲೂ ಕೆಲವು ಕಾಲ ಕರ್ತವ್ಯ ನಿರ್ವಹಿಸಿದ್ದರು.

ನವಕರ್ನಾಟಕ ಪ್ರಕಾಶನ ಸಂಸ್ಥೆ ಹೊರತಂದ `ಜ್ಞಾನ ವಿಜ್ಞಾನ ಕೋಶ~, `ವಿಜ್ಞಾನ ಪದವಿವರಣ ಕೋಶ~, `ವಿಜ್ಞಾನ ತಂತ್ರಜ್ಞಾನ ಪದಸಂಪದ~ ಕೃತಿಗಳ ಸಂಪಾದಕರಲ್ಲಿ ಒಬ್ಬರಾಗಿದ್ದರು. ರಷ್ಯನ್ ಭಾಷೆಯ ಕೃತಿಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ ರಾವ್ ಅವರಿಗೆ 2011ನೇ ಸಾಲಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಲಭಿಸಿತ್ತು. ಭಾರತೀಯ ಪ್ರಕಾಶಕರ ಸಂಘ ನೀಡುವ `ಅತ್ಯುತ್ತಮ ಸಂಪಾದಕ~ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.