ADVERTISEMENT

ಕೆಎಸ್‌ಒಯು ಮುಚ್ಚುವುದಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು (ಕೆಎಸ್ಒಯು) ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸೋಮವಾರ ಸ್ಪಷ್ಟಪಡಿಸಿದರು.

‘ಮಾನ್ಯತೆ ರದ್ದುಪಡಿಸಿರುವುದು ಯುಜಿಸಿ. ಅದು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌ ಅವರಿಗೆ ಮಾನ್ಯತೆ ದೊರಕಿಸಿಕೊಡುವಂತೆ ಪತ್ರ ಬರೆದಿದ್ದೇನೆ. ಕೆಎಸ್‌ಒಯುವಿನಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ. ಅವರಿಗೆ ತೊಂದರೆ ಆಗಬಾರದು, ವಿದ್ಯಾರ್ಥಿಗಳ ಹಿತ ಕಾಯಬೇಕು ಎಂದು ಕೋರಿದ್ದೇನೆ. ಯಾರು ತಪ್ಪು ಮಾಡಿದ್ದಾರೊ ಅವರ ಮೇಲೆ ಕ್ರಮ ತೆಗೆದುಕೊಳ್ಳೋಣ ಎಂದೂ ಹೇಳಿದ್ದೇನೆ’ ಎಂದು ಅವರು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.

ಅನುದಾನ ಬಳಸಿಕೊಳ್ಳೋಣ: ‘ಕೆಎಸ್‌ಒಯುವಿನಲ್ಲಿರುವ ಅನುದಾನವನ್ನು ಬೇರೆಡೆ ಏಕೆ ಬಳಸಿಕೊಳ್ಳಬಾರದು? ವಿಟಿಯುವಿನಲ್ಲಿ ಇದೇ ರೀತಿ ಇದ್ದ ₹ 450 ಕೋಟಿ ಅನುದಾನವನ್ನು ಬಳಸಿಕೊಳ್ಳಲಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆಯು ವಾಪಸು ತೆಗೆದುಕೊಂಡಿತು. ಇಲ್ಲೂ ಹಾಗೆಯೇ ಆಗಬೇಕೇನು? ಬೇರೆ ವಿ.ವಿಗಳ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡರೆ ತಪ್ಪೇನು?‘ ಎಂದು ಪ್ರಶ್ನಿಸಿದರು.

ADVERTISEMENT

ಕೆಎಸ್‌ಒಯು ಸಿಬ್ಬಂದಿಯನ್ನು ವರ್ಗಾವಣೆ ಮಾಡುವುದಿಲ್ಲ. ಅವರು ಅಲ್ಲಿಯೇ ಇರುತ್ತಾರೆ ಎಂದರು. ಮೈಸೂರು ವಿ.ವಿ ಕುಲಪತಿ ನೇಮಕವೂ ಶೀಘ್ರವೇ ಆಗಲಿದೆ ಎಂದರು.

ಪುಟ್ಟಸ್ವಾಮಿ ಆರೋಪ ನಿರಾಧಾರ: ‘ತಮ್ಮ ಪುತ್ರನ ವಿರುದ್ಧ ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಮಾಡಿರುವ ಆರೋಪ ನಿರಾಧಾರ. ಆರೋಪ ಮಾಡಿದವರು ಸಾಕ್ಷ್ಯ ನೀಡಬೇಕು. ಆರೋಪ ಸುಳ್ಳಾದರೆ ವಿಧಾನಸೌಧದ ಎದುರು ಆತ್ಯಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಸಾಕ್ಷ್ಯ ನೀಡದೇ ಇದ್ದರೆ, ಆರೋಪ ಸುಳ್ಳು ಎಂದಾಗುತ್ತದೆ. ಆಗ ಅವರು ಏನು ಮಾಡಬೇಕು ಹೇಳಿ?’ ಎಂದು ಕೇಳಿದರು. ಅವರು, ‘ವಿಧಾನಸೌಧದ ಎದುರು ನೇತುಹಾಕಿಕೊಳ್ಳಲಿ ಬಿಡಿ’ ಎಂದು ಹೇಳಿದ ಸಿದ್ದರಾಮಯ್ಯ, ನಂತರ ಮಾತು ಬದಲಿಸಿ, ‘ಹಾಗೆಂದು ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಹೇಳಬಾರದು’ ಎಂದರು.

ಗೋಹತ್ಯೆ ಕುರಿತು ಪೊಲೀಸರಿಗೆ ದೂರು ನೀಡಿರುವ ಟೆಕ್ಕಿ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.