ADVERTISEMENT

ಕೆಜೆಪಿಯಿಂದ ಬಂದವರಿಗೆ ಬಿಜೆಪಿಯಲ್ಲಿ ಮಣೆ

ಸಿದ್ದಯ್ಯ ಹಿರೇಮಠ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಜೆಪಿಯ 82 ಅಭ್ಯರ್ಥಿಗಳ ಎರಡನೇ ಪಟ್ಟಿ ಸೋಮವಾರ ಬಿಡುಗಡೆಯಾಗಿದ್ದು, ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅನೇಕರಿಗೆ ಈ ಪಟ್ಟಿಯಲ್ಲಿ ಮನ್ನಣೆ ದೊರೆತಿದೆ.

ವಾರದ ಹಿಂದೆ 72 ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆ ಮಾಡಿದ್ದ ಪಕ್ಷದ ವರಿಷ್ಠರು, ತೀವ್ರ ಕುತೂಹಲ ಕೆರಳಿಸಿರುವ ಚಾಮುಂಡೇಶ್ವರಿ, ವರುಣಾ ಮತ್ತು ಬಾದಾಮಿ ಕ್ಷೇತ್ರಗಳ ಬಗ್ಗೆ ನಿರ್ಧಾರ ಪ್ರಕಟಿಸದೆ ‘ಕಾದು ನೋಡುವ ತಂತ್ರ’ಕ್ಕೆ ಅಂಟಿಕೊಂಡಿದ್ದಾರೆ.

ನಾಮಪತ್ರ ಸಲ್ಲಿಕೆ ಕೊನೆಯ ದಿನಕ್ಕೆ ಒಂದು ವಾರ ಬಾಕಿ ಉಳಿದಿರುವಂತೆ ಪಕ್ಷವು ರಾಜ್ಯದ ಇನ್ನೂ 70 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸ
ಬೇಕಿದ್ದು, ಮುಂದಿನ ಮೂರು ದಿನಗಳೊಳಗೆ ಕೊನೆಯ ಪಟ್ಟಿ ಹೊರ ಬೀಳುವ ಸಾಧ್ಯತೆ ಇದೆ.

ADVERTISEMENT

ಮಾಲೂರಿನಿಂದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಬಳ್ಳಾರಿ ನಗರ ಕ್ಷೇತ್ರದಿಂದ ಜಿ.ಸೋಮಶೇಖರ ರೆಡ್ಡಿ, ಸಾಗರದಿಂದ ಹರತಾಳು ಹಾಲಪ್ಪ, ಶಿವಾಜಿ ನಗರದಿಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹೊನ್ನಾಳಿಯಿಂದ ಎಂ.ಪಿ. ರೇಣುಕಾಚಾರ್ಯ ಅವರಿಗೆ ಟಿಕೆಟ್‌ ಘೋಷಿಸಲಾಗಿದ್ದು, ‘ಕಳಂಕಿತ’ ಆರೋಪ ಹೊತ್ತವರಿಗೆ ಮಣೆ ಹಾಕಿರುವುದು ಸ್ಪಷ್ಟವಾಗಿದೆ.

ಕೆಜೆಪಿಯಿಂದ ಸ್ಪರ್ಧಿಸಿ ಸೋತ ಬಳಿಕ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ಸೇರಿರುವ 16 ಜನರಿಗೆ ಟಿಕೆಟ್‌ ದೊರೆತಿದೆ. ಜೆಡಿಎಸ್‌, ಕಾಂಗ್ರೆಸ್‌, ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಬಂದವರಿಗೂ ‘ಕಮಲ’ ಚಿಹ್ನೆಯಡಿ ಸ್ಪರ್ಧಿಸಲು ಹಸಿರು ನಿಶಾನೆ ದೊರೆತಂತಾಗಿದೆ.

‘ಕೆಜೆಪಿ ಸೇರಿದ್ದ ಯಡಿಯೂರಪ್ಪ ಅವರನ್ನು ಕಡೆಗಣಿಸಿ ಬಿಜೆಪಿಯಲ್ಲೇ ಉಳಿದ ಕಾರಣದಿಂದ ಟಿಕೆಟ್‌ನಿಂದ ವಂಚಿತರಾಗಬಹುದು’ ಎಂಬ ಆತಂಕ ಎದುರಿಸುತ್ತಿದ್ದ ಕೆಲವರಿಗೆ ಟಿಕೆಟ್‌ ದೊರೆತಿದೆ. ಅವರಲ್ಲಿ ಪ್ರಮುಖರಾಗಿರುವ ಮುರುಗೇಶ ನಿರಾಣಿ ಈ ಬಾರಿ ಜಮಖಂಡಿಯಿಂದ ಸ್ಪರ್ಧೆ ಬಯಸಿದ್ದರೂ, ಮತ್ತೆ ಬೀಳಗಿ ಕ್ಷೇತ್ರದಿಂದಲೇ ಸ್ಪರ್ಧಿಸುವ ಅನಿವಾರ್ಯತೆ ಎದುರಾಗಿದೆ.

ದಂಪತಿ ಸ್ಪರ್ಧೆ: ಚಿಕ್ಕೋಡಿ– ಸದಲಗಾ ಕ್ಷೇತ್ರದಿಂದ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್‌ ದೊರೆತಿದೆ. ಇವರು ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ. ಸಂಸದ ಪ್ರಕಾಶ ಹುಕ್ಕೇರಿ ಅವರ ಪುತ್ರ, ಶಾಸಕ ಗಣೇಶ ಹುಕ್ಕೇರಿ ಅವರಿಗೆ ತೀವ್ರ ಸ್ಪರ್ಧೆ ಒಡ್ಡಬೇಕೆಂಬ ಉದ್ದೇಶದಿಂದ ಇವರನ್ನು ಪಕ್ಷ ಕಣಕ್ಕಿಳಿಸಿದೆ.

ಬಿಜೆಪಿಯಿಂದ ಹೊರನಡೆದು ಬಿಎಸ್‌ಆರ್‌ ಕಾಂಗ್ರೆಸ್‌ ಸ್ಥಾಪಿಸಿದ್ದ ಬಳ್ಳಾರಿಯ ಬಿ.ಶ್ರೀರಾಮುಲು ಬೆಂಬಲಿಗ, ರಾಯಚೂರಿನ ಮಾಜಿ ಸಂಸದ ಸಣ್ಣ ಫಕೀರಪ್ಪ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಎಸ್ಆರ್‌ ಕಾಂಗ್ರೆಸ್‌ ಪರ ಗದಗ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಅನಿಲ್‌ ಮೆಣಸಿನಕಾಯಿ ಈ ಬಾರಿ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಕೆಲವು ಮುಖಂಡರಿಗೆ ಟಕೆಟ್ ದೊರೆತಿದ್ದು, ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಮಹಾಲಕ್ಷ್ಮೀ ಲೇಔಟ್‌ನಿಂದ, ಜನತಾ ಪರಿವಾರದ ಹಿರಿಯ ಮುಖಂಡ, ಮಾಜಿ ಸಚಿವ ಬಿ.ಸೋಮಶೇಖರ್‌ ಮಳವಳ್ಳಿಯಿಂದ, ಜೆಡಿಎಸ್‌ನಿಂದ ಬಂದಿರುವ ಅಶೋಕ್‌ ಪೂಜಾರಿ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್‌ನಿಂದ ಬಂದಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಅವರ ಬದಲಿಗೆ, ಅವರ ಅಳಿಯ ಹರ್ಷವರ್ಧನ ಅವರಿಗೆ ನಂಜನಗೂಡು ಮೀಸಲು ಕ್ಷೇತ್ರದಿಂದ ಟಿಕೆಟ್‌ ದೊರೆತಿದೆ.

ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಲಿರುವ ಇವರು ಬೂಸಾ ವಿವಾದಕ್ಕೆ ಕಾರಣವಾಗಿದ್ದ ಕಾಂಗ್ರೆಸ್‌ನ ಮಾಜಿ ಸಚಿವ ದಿವಂಗತ ಬಿ.ಬಸವಲಿಂಗಪ್ಪ ಅವರ ಮೊಮ್ಮಗ.

ಪುತ್ರರಿಗೆ ಮಣೆ: ಹಿರಿಯ ರಾಜಕೀಯ ಮುಖಂಡರ ಪುತ್ರರಿಗೂ, ಸೋದರರಿಗೂ ಪಕ್ಷ ಟಿಕೆಟ್‌ ನೀಡುವ ಮೂಲಕ ಗೆಲ್ಲಲು ಸರ್ವಪ್ರಯತ್ನ ನಡೆಸಿದೆ.
ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ಪುತ್ರ ಡಾ.ಪ್ರೀತಮ್‌ ಹನೂರಿನಿಂದ, ಕಳೆದ ಬಾರಿಯ ಚುನಾವಣೆಯಲ್ಲಿ ಕೆಜೆಪಿಯಿಂದ ಗೆದ್ದದ್ದ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ಬೀದರ್‌ನಿಂದ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಅವರ ಪುತ್ರ ಚಂದ್ರಕಾಂತ ಪಾಟೀಲ ಕಲಬುರ್ಗಿ (ಉತ್ತರ)ಯಿಂದ, ಮಾಜಿ ಸಂಸದ ಜಿ.ಎಸ್‌. ಬಸವರಾಜ್‌ ಪುತ್ರ ಜಿ.ಬಿ. ಜ್ಯೋತಿ ಗಣೇಶ್‌ ತುಮಕೂರು (ನಗರ) ಕ್ಷೇತ್ರದಿಂದ,
ಹಿರಿಯ ರಾಜಕಾರಣಿ ವಿಶ್ವನಾಥ ರೆಡ್ಡಿ ಮುದ್ನಾಳ ಅವರ ಪುತ್ರ ವೆಂಕಟರೆಡ್ಡಿ ಮುದ್ನಾಳ ಯಾದಗಿರಿಯಿಂದ ಸ್ಪರ್ಧಿಸಲಿದ್ದಾರೆ.

ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಜೆಡಿಎಸ್‌ ಮುಖಂಡ, ಚಿತ್ರ ನಿರ್ಮಾಪಕ ಸಂದೇಶ ನಾಗರಾಜ್‌ ಅವರ ಸೋದರ ಸತೀಶ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ಮುಸ್ಲಿಂ, ಮಹಿಳೆ ಕಡೆಗಣನೆ

ನವದೆಹಲಿ: ಎರಡು ಪಟ್ಟಿಗಳ ಮೂಲಕ 154 ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್‌ ಘೋಷಿಸಿರುವ ಬಿಜೆಪಿ, ಕೇವಲ ಒಬ್ಬ ಮಹಿಳೆಗೆ ಆದ್ಯತೆ ನೀಡಿದೆ.

72 ಅಭ್ಯರ್ಥಿಗಳನ್ನು ಒಳಗೊಂಡಿದ್ದ ಮೊದಲ ಪಟ್ಟಿಯಲ್ಲಿ ನಿಪ್ಪಾಣಿ ಶಾಸಕಿ ಶಶಕಿಲಾ ಜೊಲ್ಲೆ ಮಾತ್ರ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

82 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಮಹಿಳೆಯರ ಹೆಸರೇ ಇಲ್ಲ. ಅಲ್ಪಸಂಖ್ಯಾತ ಬಣದ ಮುಸ್ಲಿಂ ಸಮುದಾಯದವರಿಗೆ ಬಿಜೆಪಿಯ ಎರಡೂ ಪಟ್ಟಿಗಳಲ್ಲಿ ಸ್ಥಾನ ಲಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.