ADVERTISEMENT

ಕೆಜೆಪಿ, ಬಿಜೆಪಿ ವಿಲೀನ: ಸ್ಪೀಕರ್‌ಗೆ ಬಿಎಸ್‌ವೈ ಪತ್ರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ಬೆಂಗಳೂರು: ಬಿಜೆಪಿಯೊಂದಿಗೆ ತಮ್ಮ ಪಕ್ಷದ ವಿಲೀನಕ್ಕೆ ಮಾನ್ಯತೆ ನೀಡುವಂತೆ  ಕೆಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ವಿಧಾನಸಭೆಯ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕೆಜೆಪಿಯ ನಾಲ್ಕು ಮಂದಿ ಶಾಸಕರು ಹಾಗೂ ಬೆಂಬಲಿ­ಗರೊಂದಿಗೆ ಸ್ಪೀಕರ್‌ ಅವರನ್ನು ಭೇಟಿಯಾಗಿ ವಿಲೀನ ಸಂಬಂಧ ಪಕ್ಷ ಕೈಗೊಂಡಿರುವ ನಿರ್ಣಯದ ಪ್ರತಿಯನ್ನು ನೀಡಿದರು.

ಈ ಪತ್ರಕ್ಕೆ ಯಡಿಯೂರಪ್ಪ, ಯು.ಬಿ.ಬಣಕಾರ್‌, ವಿಶ್ವನಾಥ ಪಾಟೀಲ,  ಗುರುಪಾದಪ್ಪ ನಾಗಮಾರಪಲ್ಲಿ    ಅವರು ಸಹಿ ಹಾಕಿದ್ದಾರೆ.  ಕೆಜೆಪಿಯ ಇನ್ನಿಬ್ಬರು ಶಾಸಕರಾದ ಬಿ.ಆರ್.ಪಾಟೀಲ, ಗುರು ಪಾಟೀಲ ಅವರು ಪತ್ರಕ್ಕೆ ಸಹಿ ಹಾಕಿಲ್ಲ.

ಕೆಜೆಪಿ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಬಿಜೆಪಿಯಿಂದ ತಮಗೆ ಪತ್ರ ಬಂದಿಲ್ಲ. ಅಧಿಕೃತವಾಗಿ ಪತ್ರ ಬಂದರೆ ಈ ಬಗ್ಗೆ ಮುಂದಿನ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಸ್ಪೀಕರ್‌ ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿಯಿಂದ ಪ್ರಸ್ತಾಪ ಬಂದ ನಂತರ ಎರಡೂ ಪಕ್ಷಗಳು ನೀಡಿರುವ ಪತ್ರವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡ­ಲಾ­ಗುವುದು. ಆಯೋಗದ ಸೂಚನೆಯಂತೆ ಕ್ರಮಕೈಗೊಳ್ಳ­ಲಾಗುತ್ತದೆ ಎಂದರು.

ಪ್ಪು ಮಾಡಲ್ಲ: ಹಿಂದೆ ತಪ್ಪುಗಳನ್ನು ಮಾಡಿರುವುದು ನಿಜ. ಆದರೆ, ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು. 

ಹಿಂದೆ ಮಾಡಿರುವ ತಪ್ಪುಗಳನ್ನು ಜನ ಕ್ಷಮಿಸುವ ವಿಶ್ವಾಸವಿದೆ. ನನಗೆ ಆಗಿರುವ ಅನ್ಯಾಯ, ನೋವುಗಳನ್ನು ಮರೆತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇನೆ. ವಿಲೀನ ಸಂಬಂಧ ಚುನಾವಣಾ ಆಯೋಗಕ್ಕೂ ಪತ್ರ ಬರೆಯಲಾಗುವುದು ಎಂದರು.

ಆರ್ಎಸ್‌ಎಸ್‌ ಮುಖಂಡ ಮೈ.ಚ.ಜಯದೇವ ಅವರನ್ನು ಭೇಟಿಯಾಗಿದ್ದ ಯಡಿಯೂರಪ್ಪ ಸುಮಾರು ಅರ್ಧಗಂಟೆ ಕಾಲ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.