ADVERTISEMENT

‘ಕೆಪಿಎಸ್‌ಸಿ ಹುದ್ದೆ ನೇಮಕಾತಿಯಲ್ಲಿ ಅಕ್ರಮ’

​ಪ್ರಜಾವಾಣಿ ವಾರ್ತೆ
Published 10 ಮೇ 2018, 20:35 IST
Last Updated 10 ಮೇ 2018, 20:35 IST

ಹಾಸನ: ‘ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಯಲ್ಲಿ ಅಧ್ಯಕ್ಷ ಶ್ಯಾಮ್ ಭಟ್ ಅಕ್ರಮ ನಡೆಸಿದ್ದಾರೆ’ ಎಂದು ಶಾಸಕ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

‘460 ಹುದ್ದೆಗಳಿಗೆ ಸುಮಾರು ₹ 400ರಿಂದ 600 ಕೋಟಿ ವಸೂಲಿ ಮಾಡಿದ್ದಾರೆ. ನಿವೃತ್ತ ಪೊಲೀಸ್‌ ಅಧಿಕಾರಿ ಕೆಂಪಯ್ಯ ಜತೆ ಸೇರಿ ಶ್ಯಾಮ್‌ ಭಟ್‌ ಚುನಾವಣೆಗೆ ಹಣ ಹಂಚುತ್ತಿದ್ದಾರೆ. ಉಪವಿಭಾಗಾಧಿಕಾರಿ ಹುದ್ದೆಗೆ ₹ 1.50 ಕೋಟಿ, ತಹಶೀಲ್ದಾರ್ ಹುದ್ದೆಗೆ ₹ 1 ಕೋಟಿ ಪಡೆದಿದ್ದಾರೆ ಎಂಬ ಮಾಹಿತಿ ಬಂದಿದೆ. ಸೀಟು ಹಂಚಿಕೆಯಲ್ಲಿ ಜಾತಿವಾರು ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಕಾರಣ 460 ಹುದ್ದೆಗಳ ನೇಮಕಾತಿ ರದ್ದುಗೊಳಿಸಬೇಕು. ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ಆಯೋಗ ಶ್ಯಾಮ್‌ ಭಟ್‌ ಮೇಲೆ ನಿಗಾ ಇಡಬೇಕು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ADVERTISEMENT

‘ಈ ಬಗ್ಗೆ ಚುನಾವಣಾ ಆಯೋಗಕ್ಕೂ ಪತ್ರ ಬರೆಯಲಾಗುವುದು. ಶ್ಯಾಮ್ ಭಟ್ ಬಿಡಿಎ ಹಾಳು ಮಾಡಿ, ಈಗ ಕೆಪಿಎಸ್‌ಸಿ ನಿರ್ನಾಮ
ಮಾಡಲು ಮುಂದಾಗಿದ್ದಾರೆ. ರಾಜ್ಯಪಾಲರು ಮೂರು ಬಾರಿ ಭಟ್‌ ನೇಮಕದ ಕಡತ ತಿರಸ್ಕರಿಸಿದರೂ ಸರ್ಕಾರ ಅವರನ್ನೇ ನೇಮಿಸಿದೆ. ಹಣ ನೀಡಿರುವ ಅಭ್ಯರ್ಥಿಗಳು ಮಾಹಿತಿ ನೀಡಿದ್ದು, ತನಿಖೆ ವೇಳೆ ನನ್ನ ಬಳಿ ಇರುವ ದಾಖಲೆ ಹಾಜರುಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.