ADVERTISEMENT

ಕೆ-ಕಿಸಾನ್ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 17:00 IST
Last Updated 17 ಫೆಬ್ರುವರಿ 2011, 17:00 IST

ಬೆಂಗಳೂರು:ಗ್ರಾಮೀಣ ಪ್ರದೇಶದಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಂದ ರಾಜಧಾನಿಯಲ್ಲಿರುವ ಕೃಷಿ ಸಚಿವಾಲಯದವರೆಗೆ ಕೃಷಿ ಇಲಾಖೆಯ ಎಲ್ಲ ಕಚೇರಿಗಳನ್ನೂ ಕಂಪ್ಯೂಟರೀಕರಣಗೊಳಿಸುವ ಮಹತ್ವದ ‘ಕೆ-ಕಿಸಾನ್’ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಯೋಜನೆಯನ್ನು ಉದ್ಘಾಟಿಸಿದರು. ಕೃಷಿ ಉತ್ಪಾದನೆ ಮತ್ತು ರೈತರ ಆದಾಯದ ಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. 747 ರೈತ ಸಂಪರ್ಕ ಕೇಂದ್ರಗಳು, 176 ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, 23 ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು, 48 ಪ್ರಯೋಗಾಲಯಗಳು, 30 ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಗಳು, ಕೃಷಿ ಇಲಾಖೆಯ ಕೇಂದ್ರ ಕಚೇರಿ ಮತ್ತು ಕೃಷಿ ಸಚಿವಾಲಯವನ್ನು ಈ ಯೋಜನೆಯಡಿ ಕಂಪ್ಯೂಟರೀಕರಣ ಮಾಡಲಾಗುತ್ತಿದೆ.

ಈ ಯೋಜನೆಯನ್ನು ಬಳಸಿಕೊಂಡು ರೈತರಿಗೆ 24 ಗಂಟೆಗಳ ಕಾಲ ನಿರಂತರವಾಗಿ ಮಾಹಿತಿ ಮತ್ತು ಸೇವೆ ಒದಗಿಸುವ ಗುರಿ ಇದೆ. ಅರ್ಜಿಗಳ ವಸ್ತು ಸ್ಥಿತಿ, ಪರಿಕರಗಳ ಲಭ್ಯತೆ, ಮಾರುಕಟ್ಟೆ ಮಾಹಿತಿ, ತಂತ್ರಜ್ಞಾನ, ಹವಾಮಾನ ಮುನ್ಸೂಚನೆ ಮತ್ತಿತರ ಮಾಹಿತಿಯನ್ನು ರೈತರಿಗೆ ಒದಗಿಸಲು ಇಲಾಖೆ ಮುಂದಾಗಿದೆ. ‘ಕೆ-ಕಿಸಾನ್’ ಯೋಜನೆಯಲ್ಲಿ ರಾಜ್ಯದ ಎಲ್ಲ ರೈತ ಕುಟುಂಬಗಳ ಮಾಹಿತಿ ಸಂಗ್ರಹಿಸಿ, ಅದನ್ನು ಆನ್‌ಲೈನ್‌ನಲ್ಲಿ ದಾಖಲಿಸಲಾಗುತ್ತದೆ.

ಕೃಷಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ, ಅವುಗಳ ವಸ್ತು ಸ್ಥಿತಿ, ಕುಂದುಕೊರತೆಗಳಿಗೆ ಸ್ಪಂದನೆ, ಶುಲ್ಕ ಪಾವತಿ, ದಾಖಲಾತಿಗಳ ವಿನಿಮಯದಂತಹ ಕೆಲಸಗಳಿಗೂ ಈ ಯೋಜನೆಯನ್ನು ಬಳಸಿಕೊಳ್ಳಬಹುದು.

ಕೃಷಿ ಇಲಾಖೆಯ ಆಸ್ತಿ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಗೂ ‘ಕೆ-ಕಿಸಾನ್’ ಪೂರಕವಾಗಲಿದೆ. ಈಗಾಗಲೇ ಅನುಷ್ಠಾಗೊಂಡಿರುವ ‘ಕೆ-ಸ್ವಾನ್’ ಜಾಲವನ್ನು ಬಳಸಿಕೊಂಡು ‘ಕೆ-ಕಿಸಾನ್’ ಯೋಜನೆಯನ್ನು ಜಾರಿಗೆ ತರಲು ಕೃಷಿ ಇಲಾಖೆ ಸಿದ್ಧತೆ ನಡೆಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.