ADVERTISEMENT

ಕೇಂದ್ರದ ಕೈಗೆ ಬೆಂಗಳೂರು?

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 18:35 IST
Last Updated 5 ಫೆಬ್ರುವರಿ 2011, 18:35 IST
ಕೇಂದ್ರದ ಕೈಗೆ ಬೆಂಗಳೂರು?
ಕೇಂದ್ರದ ಕೈಗೆ ಬೆಂಗಳೂರು?   

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ (ಬೆಂಗಳೂರು): ‘ರಾಜಧಾನಿಯಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸದೇ ಇದ್ದರೆ, ರಾಜ್ಯದಲ್ಲಿನ ಕೇಂದ್ರ ಸರ್ಕಾರದ ಉದ್ಯಮಗಳು, ಖಾಸಗಿ ಕಾರ್ಖಾನೆಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಸಿಗದೇ ಇದ್ದರೆ ಪರಭಾಷಿಕರ ಸಂಖ್ಯೆ ಹೆಚ್ಚಾಗಿ ಬೆಂಗಳೂರು ಕೇಂದ್ರಾಡಳಿತಕ್ಕೆ ಸೇರಿಬಿಡುವ ಅಪಾಯ ಇದೆ.’

-ಇದು 77ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ನೀಡಿದ ಎಚ್ಚರಿಕೆ.

 ಸಂದರ್ಭ; ಸಮ್ಮೇಳನದ ಎರಡನೇ ದಿನವಾದ ಶನಿವಾರ ನಡೆದ ‘ಸಮ್ಮೇಳನಾಧ್ಯಕ್ಷರೊಡನೆ ಸಂವಾದ’ ಕಾರ್ಯಕ್ರಮ.
ನಾಡು ನುಡಿ ಕುರಿತು ಸಾಹಿತಿಗಳು, ತಜ್ಞರು ಮತ್ತು ಪ್ರಾಧ್ಯಾಪಕರು ಕೇಳಿದ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ ಅವರು, ‘ರಾಜ್ಯದ ಎಲ್ಲ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು. ಜತೆಗೆ ಕೇಂದ್ರೋದ್ಯಮ, ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಕನಿಷ್ಠ ಶೇಕಡಾ 50ರಷ್ಟು ಮೀಸಲು ಕಲ್ಪಿಸುವಂತೆ ಸರ್ಕಾರ ಕಾನೂನು ಮಾಡಬೇಕು. ಹಿಂದೆ ಸರೋಜಿನಿ ಮಹಿಷಿ ಅವರ ವರದಿಯಲ್ಲಿ ಶಿಫಾರಸು ಮಾಡಿದಂತೆ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು’ ಎಂದು ಒತ್ತಾಯಿಸಿದರು.

‘ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಕಾದಾಟ ಮುಂದುವರೆದಿದೆ. ಕೋರ್ಟ್‌ನಲ್ಲಿರುವ ಮಾಧ್ಯಮ ವಿವಾದದ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಲು ಸರ್ಕಾರ ಮುತುವರ್ಜಿ ವಹಿಸಬೇಕು. ಆ ಕೆಲಸ ಆಗದಿದ್ದರೆ ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ನನ್ನ ಸೂಚನೆಯನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ’ ಎಂದರು.

‘ಕನ್ನಡ ಕಲಿತವರಿಗೆ ಕೆಲಸ ಸಿಗಲ್ಲ ಎಂದು ಕೊರಗುವುದು ಸರಿಯಲ್ಲ. ಕನ್ನಡದ ಜತೆ ಬೇರೆ ಬೇರೆ ವಿಷಯಗಳನ್ನು ಕಲಿತರೆ ಉದ್ಯೋಗಾವಕಾಶ ಸಿಕ್ಕೇ ಸಿಗುತ್ತೆ. ಎಲ್ಲರೂ ಕನ್ನಡ ಎಂಎ, ಜಾನಪದ ಎಂ.ಎ ವ್ಯಾಸಂಗ ಮಾಡಿ ಕೆಲಸ ಕೊಡಿ ಕೇಳುವುದು ತರವಲ್ಲ. ಕನ್ನಡದ ಪುಸ್ತಕ ಮತ್ತು ಪತ್ರಿಕೋದ್ಯಮಗಳಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ’ ಎಂದು ಅವರು ನುಡಿದರು.

‘ಶುಕ್ರವಾರದ ಭಾಷಣದಲ್ಲಿ ಕರ್ನಾಟಕವು ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯ ಎಂದು ನಾನು ಹೇಳಿದೆ. ನನ್ನ ಪಕ್ಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಳಿತಿದ್ದರು. ಅವರು ತಪ್ಪಾಗಿ ತಿಳಿದುಕೊಳ್ಳಲಿಲ್ಲ. ನನ್ನ ಟೀಕೆಯು  ಯಡಿಯೂರಪ್ಪ ಅವರೊಬ್ಬರನ್ನು ಕುರಿತದ್ದಾಗಿರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಇಷ್ಟೊಂದು ಭ್ರಷ್ಟಾಚಾರ ಕಳೆದ ಎರಡು ವರ್ಷಗಳಲ್ಲೇ ಬೆಳೆದದ್ದಲ್ಲ; ಇಪ್ಪತ್ತು ವರ್ಷಗಳಿಂದ ಬೆಳೆದದ್ದು. ಈ ಪರಿಸ್ಥಿತಿಗೆ ಎಲ್ಲ ಪಕ್ಷಗಳ ಕೊಡುಗೆಯೂ ಇದೆ’ ಎಂದು ಅವರು ಹೇಳಿದರು.

‘ಸಮ್ಮೇಳನಗಳಿಗೆ ರಾಜಕಾರಣಿಗಳನ್ನು ಸೇರಿಸಬೇಡಿ ಎಂಬ ಮಾತಿಗೆ ಯಾವ ಅರ್ಥವೂ ಇಲ್ಲ. ಯಾವ ರಾಜಕಾರಣಿಯೂ ಸಮ್ಮೇಳನಕ್ಕೆ ಬರುವುದಾಗಿ ಕೇಳಿಕೊಳ್ಳುವುದಿಲ್ಲ. ನಾವೇ ಅವರನ್ನು ಆಹ್ವಾನಿಸಿ ಧನ ಸಹಾಯ ಪಡೆಯುತ್ತೇವೆ. ಸಹಾಯ ಮಾಡಿದ ನಂತರ ಇಲ್ಲಿ ಬಂದು ಅವರ ಅನಿಸಿಕೆಗಳನ್ನು ಹೇಳಿಕೊಂಡರೆ ತಪ್ಪೇನು?’ ಎಂದು ಅವರು ಪ್ರಶ್ನಿಸಿದರು.

‘ನೀತಿ ನಿರ್ಧಾರಗಳನ್ನು ರೂಪಿಸಿ, ಜಾರಿಗೊಳಿಸಬೇಕಾದ ಅಧಿಕಾರಸ್ಥ ರಾಜಕಾರಣಿಗಳನ್ನು ಎದುರಿಗೆ ಕೂರಿಸಿಕೊಂಡು ನಾಡು ನುಡಿಗೆ ಆಗಬೇಕಾದ ಕೆಲಸ ಕಾರ್ಯಗಳನ್ನು ತಿಳಿಸಲು ಸಮ್ಮೇಳನ ಒಳ್ಳೆಯ ಅವಕಾಶ. ಅಷ್ಟಕ್ಕೂ ರಾಜಕಾರಣಿಗಳಲ್ಲೂ ಸಾಹಿತಿಗಳಿದ್ದಾರೆ. ಕೇಂದ್ರ ಸಚಿವ ವೀರಪ್ಪ ಮೊಯಿಲಿ ಮಹಾಕಾವ್ಯವನ್ನೇ ಬರೆದಿದ್ದಾರೆ. ಮಾಜಿ ಸಚಿವ ಎಂ.ಪಿ.ಪ್ರಕಾಶ್ ಗ್ರಂಥಗಳನ್ನು ರಚಿಸಿದ್ದಾರೆ. ಅಚ್ಚುಕಟ್ಟಾಗಿ ಮಾತನಾಡುವವರು ಸಹ ಸಾಹಿತಿಗಳೇ’ ಎಂದು ಅವರು ವ್ಯಾಖ್ಯಾನಿಸಿದರು.

‘ಅಡುಗೆ ಮನೇಲಿ ಕನ್ನಡದ ತರಕಾರಿಗಳು ಬರುವುದೇ ಇಲ್ಲ. ಬರೇ ಇಂಗ್ಲಿಷ್ ತರಕಾರಿಗಳೇ. ಬೆಳ್ಳುಳ್ಳಿ ಹಾಕಿದರೆ ಎಷ್ಟು ರುಚಿ ಬರುತ್ತೋ ಗಾರ್ಲಿಕ್ ಹಾಕಿದರೂ ಅಷ್ಟೇ ರುಚಿ ಬರುತ್ತೆ. ಮಹಿಳಾ ಮಣಿಗಳು ನೈಫ್ ತಗೊಂಡು ಪೀಸ್ ಪೀಸ್ ಮಾಡುವ ಬದಲು ಕನ್ನಡದ ಚಾಕು ತೆಗೆದುಕೊಂಡು ಚೂರು ಚೂರು ಮಾಡಿಕೊಳ್ಳಿ’ ಎಂದು ಮಾರ್ಮಿಕವಾಗಿ ಹೇಳಿದರು.

‘ಟಿ.ವಿ ಧಾರಾವಾಹಿಗಳಿಗೆ ಕೊನೆ ಇದೆಯೇ? ತಿಂಗಳು ಬಿಟ್ಟು ನೋಡಿದರೂ ಆ ಕಥೆ ನಿಂತಲ್ಲೇ ನಿಂತಿರುತ್ತದೆ. ಚಾನೆಲ್‌ಗಳಲ್ಲಿ ಧಾರಾವಾಹಿಗಳೇ ತುಂಬಿಕೊಂಡಿವೆ. ಧಾರಾವಾಹಿಗಳು ಕಡಿಮೆ ಆಗಬೇಕು. ಟಿ.ವಿಗಳ ಕೆಲಸ ಜ್ಞಾನ ವೃದ್ಧಿ ಮಾಡುವುದಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಮೊದಲಿಗೆ ವಸಂತ ಪ್ರಕಾಶನ ಹೊರ ತಂದಿರುವ ವೆಂಕಟಸುಬ್ಬಯ್ಯ ಅವರ ವ್ಯಕ್ತಿಚಿತ್ರಗಳ ಸಂಕಲನ ‘ಸಿರಿಗನ್ನಡ ಸಾರಸ್ವತರು’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಪ್ರೊ.ಜಿ.ಅಬ್ದುಲ್ ಬಷೀರ್, ಡಾ.ಎಸ್.ಎಸ್.ಅಂಗಡಿ, ಡಾ.ಎನ್.ಎಸ್.ಸರಸ್ವತಿ, ಡಾ.ಸರೋಜಿನಿ ಚವಲಾರ, ಡಾ.ಪ್ರದೀಪ್ ಕುಮಾರ್ ಹೆಬ್ರಿ, ಪ್ರೊ.ಸಿ.ಎಚ್.ಮರಿದೇವರು, ಡಾ.ಟಿ.ವೆಂಕಟೇಶಮೂರ್ತಿ, ಡಾ.ಎ.ಜಿ.ವಿಜಯರಾಘವನ್, ಚಂದ್ರಶೇಖರ ಅಕ್ಕಿ, ಡಾ.ಬಿ.ಯು.ಸುಮಾ, ಸವಿತಾ ಶ್ರೀನಿವಾಸ್, ಎಂ.ಜೆ.ರಾಜಶೇಖರಶೆಟ್ಟಿ ಸಂವಾದದಲ್ಲಿ ಪಾಲ್ಗೊಂಡರು.


ಕೆ.ಎಂ.ವೀರೇಶ್ ಸ್ವಾಗತಿಸಿದರು. ಬಿ.ಎಂ.ಸದಾಶಿವಪ್ಪ ಶ್ಯಾಗಲೆ ವಂದಿಸಿದರು. ಡಾ.ಬೈರಮಂಗಲ ರಾಮೇಗೌಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT