ADVERTISEMENT

ಕೇಂದ್ರದ ಸೇವಾ ತೆರಿಗೆ ನೀತಿಗೆ ವಿರೋಧ:ಚಿತ್ರೋದ್ಯಮ ಬಂದ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಬೆಂಗಳೂರು: ಕೇಂದ್ರ ಸರ್ಕಾರದ ಸೇವಾ ತೆರಿಗೆ ನೀತಿ ವಿರೋಧಿಸಿ ಗುರುವಾರ ಕನ್ನಡ ಚಿತ್ರೋದ್ಯಮ ಬಂದ್ ಆಚರಿಸಿತು. ಬಂದ್ ಹಿನ್ನೆಲೆಯಲ್ಲಿ ರಾಜ್ಯದ 800ಕ್ಕೂ ಹೆಚ್ಚು ಚಿತ್ರಮಂದಿರಗಳು ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ್ದವು.

ಬಹುತೇಕ ಚಿತ್ರಗಳ ಚಿತ್ರೀಕರಣ ನಡೆಯಲಿಲ್ಲ. ಬಂದ್‌ನಿಂದಾಗಿ ಉದ್ಯಮಕ್ಕೆ ಸುಮಾರು 40 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಂದಾಜಿಸಿದೆ.

ಬೆಳಿಗ್ಗೆ ಮಂಡಳಿಯ ಕೇಂದ್ರ ಕಚೇರಿ ಎದುರು ಸಮಾವೇಶಗೊಂಡ ಕಲಾವಿದರು, ತಂತ್ರಜ್ಞರು, ಚಿತ್ರೋದ್ಯಮಿಗಳು ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆ ವೇಳೆ ನಟ ಶಿವರಾಜ್‌ಕುಮಾರ್ ರೇಸ್‌ಕೋರ್ಸ್ ಬಳಿಯ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಡಳಿಯ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ನಟ ಅಂಬರೀಷ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಭಾರತೀಯ ಚಲನಚಿತ್ರ ಒಕ್ಕೂಟ ದೇಶದ್ಲ್ಲೆಲೆಡೆ ಬಂದ್‌ಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕೆ.ವಿ.ಚಂದ್ರಶೇಖರ್, `ಪ್ರಸ್ತುತ ಸಂದರ್ಭದಲ್ಲಿ ಚಿತ್ರೋದ್ಯಮ ನಷ್ಟದಲ್ಲಿದೆ. ಕೇಂದ್ರ ವಿಧಿಸುತ್ತಿರುವ ಸೇವಾ ತೆರಿಗೆಯನ್ನು ಭರಿಸುವ ಶಕ್ತಿ ಉದ್ಯಮಕ್ಕೆ ಇಲ್ಲ. ಹಾಗೆಂದು ಪ್ರೇಕ್ಷಕರ ಮೇಲೂ ತೆರಿಗೆಯ ಭಾರ ಹೊರಿಸುವಂತಿಲ್ಲ.

ಈಗಾಗಲೇ ಮನರಂಜನಾ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ಉದ್ಯಮ ಪಾವತಿಸುತ್ತಿದೆ. ಇದಕ್ಕೆ ಇನ್ನೊಂದು ತೆರಿಗೆಯೂ ಸೇರಿಕೊಂಡರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ನಟರಾದ ರವಿಚಂದ್ರನ್, ಶಿವರಾಜ್‌ಕುಮಾರ್, ಜಗ್ಗೇಶ್, ರಾಘವೇಂದ್ರ ರಾಜ್‌ಕುಮಾರ್, ಸುದೀಪ್, ಪುನೀತ್ ರಾಜ್‌ಕುಮಾರ್, ತಾರಾ, ಭಾವನಾ, ಶ್ರುತಿ, ಯಶ್, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ನಿರ್ಮಾಪಕ ಸಾ.ರಾ.ಗೋವಿಂದು, ನಿರ್ದೇಶಕ ಎಸ್.ನಾರಾಯಣ್ ಇತರರು ಇದ್ದರು.

ನಂತರ ಅಂಬರೀಷ್ ಮತ್ತಿತರರ ನಿಯೋಗ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿತು. `ರಾಜ್ಯಪಾಲರಿಗೆ ಕೂಡ ಚಿತ್ರೋದ್ಯಮದ ಪ್ರಸ್ತುತ ಸ್ಥಿತಿಗತಿಯ ಅರಿವಿದೆ. ಈ ಹಿನ್ನೆಲೆಯಲ್ಲಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧ ಪಟ್ಟವರ ಜೊತೆ ಚರ್ಚಿಸುವ ವಿಶ್ವಾಸವಿದೆ~ ಎಂದು ಚಂದ್ರಶೇಖರ್ ಪ್ರತಿಕ್ರಿಯಿಸಿದರು.

`ಕೇಂದ್ರ ಸರ್ಕಾರ ಇನ್ನಾದರೂ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಕೇಂದ್ರ ಬಜೆಟ್ ಮಂಡನೆಯಾಗುವವರೆಗೂ ಕಾದು ನೋಡಲಾಗುವುದು. ಒಂದು ವೇಳೆ ಸರ್ಕಾರ ಉದ್ಯಮದ ಪರವಾಗಿ ಸ್ಪಂದಿಸದೇ ಹೋದರೆ ಮುಂದಿನ ಕ್ರಮದ ಕುರಿತು ಚಿಂತನೆ ನಡೆಸಲಾಗುವುದು~ ಎಂದು ಅವರು ತಿಳಿಸಿದರು.

ಉಪೇಂದ್ರ, ದರ್ಶನ್, ಗಣೇಶ್, ರಮ್ಯಾ, ಹರ್ಷಿಕಾ ಪೂಣಚ್ಚ, ದಿಗಂತ್, ಐಂದ್ರಿತಾ ರೇ, ರಾಗಿಣಿ ಮತ್ತಿತರ ಕಲಾವಿದರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ.

ಏಕತೆರೆ ಚಿತ್ರಮಂದಿರಗಳ ಮಾಲೀಕರು ಬಂದ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬಹುತೇಕ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಸಂಜೆ ವೇಳೆಗೆ ಚಿತ್ರ ಪ್ರದರ್ಶನ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.