ADVERTISEMENT

ಕೊನೆಗೂ 6 ವಿ.ವಿಗಳಿಗೆ ಕುಲಪತಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 19:30 IST
Last Updated 15 ಜೂನ್ 2015, 19:30 IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡಿ ವಿವರಣೆ ನೀಡಿದ  ಕೆಲವೇ ಗಂಟೆಗಳಲ್ಲಿ ರಾಜ್ಯದ ಆರು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ನೇಮಕಗೊಂಡವರಲ್ಲಿ ಬ್ರಾಹ್ಮಣ, ಲಿಂಗಾಯತ,  ಪರಿಶಿಷ್ಟ ಪಂಗಡ, ಬಲಿಜ ಜಾತಿಗೆ ಸೇರಿದ ತಲಾ ಒಬ್ಬರು ಹಾಗೂ ಪರಿಶಿಷ್ಟ ಜಾತಿ (ಎಡಗೈ)ಗೆ  ಸೇರಿದ ಇಬ್ಬರಿದ್ದಾರೆ.

ರಾಜ್ಯಪಾಲರಿಗೆ ಸಿ.ಎಂ ವಿವರಣೆ: ಸೋಮವಾರ ಸಂಜೆ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ರಾಜಭವನದಲ್ಲಿ ಎರಡು ತಾಸು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಆರು ವಿವಿಗಳ ಕುಲಪತಿಗಳ ನೇಮಕಾತಿಯಲ್ಲಿ ಆಗಿರುವ ವಿಳಂಬದ ಬಗ್ಗೆ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಅವರ ಜೊತೆಗೆ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರೂ ಇದ್ದರು. ಆದರೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲ ಇಬ್ಬರೇ ಕೆಲಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು ಎಂದು ಗೊತ್ತಾಗಿದೆ. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನು ವಿವರಣೆಗಳನ್ನು ರಾಜ್ಯಪಾಲರು ಕೇಳಿದ್ದರು. ಆ ಬಗ್ಗೆ ವಿವರ ನೀಡಿದೆ’ ಎಂದು ತಿಳಿಸಿದರು.

‘ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸೌಹಾರ್ದ ಸಂಬಂಧ ಇದೆ, ಯಾವುದೇ ರೀತಿಯ ಸಂಘರ್ಷ ಇಲ್ಲ. ಕೆಲವು ವಿಚಾರಗಳ ಬಗ್ಗೆ ರಾಜ್ಯಪಾಲರು ವಿವರಣೆ ಕೇಳುತ್ತಾರೆ. ಅದಕ್ಕೆ ಸ್ಪಷ್ಟನೆ ನೀಡುತ್ತೇವೆ. ಈ ಪ್ರಕ್ರಿಯೆಯನ್ನು ಸಂಘರ್ಷ ಎಂದು ಕರೆಯುವುದು ಸರಿಯೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಗುಜರಾತ್‌ ಅಭಿವೃದ್ಧಿಯಿಂದ ಕಡ್ಡಾಯ ಮತದಾನದವರೆಗೆ...’
ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರು ರಾಜ್ಯಪಾಲರ ಜತೆ ಮಾತನಾಡುವಾಗ ಗುಜರಾತ್‌ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಕಡ್ಡಾಯ ಮತದಾನ ಜಾರಿ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ. ‘ಗುಜರಾತ್‌ನಲ್ಲಿಯೂ ಕಡ್ಡಾಯ ಮತದಾನ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದರಿಂದ ಸಾಕಷ್ಟು ಅನುಕೂಲ ಆಯಿತು’ ಎಂದು ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ತಿಳಿಸಿದರು ಎನ್ನಲಾಗಿದೆ. 

ಈ ವರ್ಷದಿಂದ ಕರ್ನಾಟಕದಲ್ಲೂ ಕಡ್ಡಾಯ ಮತದಾನ ಜಾರಿಗೆ ತಂದಿದ್ದು, ಒಳ್ಳೆಯ ಬೆಳವಣಿಗೆ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ADVERTISEMENT

ಕುಲಪತಿಗಳು
ಕರ್ನಾಟಕ ವಿವಿ, ಧಾರವಾಡ ಪ್ರೊ. ಪ್ರಮೋದ್‌ ಬಿ. ಗಾಯಿ
ರಾಣಿ ಚನ್ನಮ್ಮ ವಿವಿ, ಬೆಳಗಾವಿ ಡಾ. ಎಸ್‌.ಬಿ. ಹೊಸಮನಿ
ಗುಲ್ಬರ್ಗ ವಿವಿ, ಕಲಬುರ್ಗಿ ಡಾ. ಎಸ್‌.ಆರ್‌.  ನಿರಂಜನ್
ಕುವೆಂಪು ವಿವಿ, ಶಂಕರಘಟ್ಟ, ಶಿವಮೊಗ್ಗ ಪ್ರೊ. ಜೋಗನ್‌ ಶಂಕರ್‌
ವಿಜಯನಗರ ಶ್ರೀಕೃಷ್ಣದೇವರಾಯ ವಿವಿ, ಬಳ್ಳಾರಿ ಡಾ. ಎಂ.ಎಸ್‌. ಸುಭಾಸ್‌
ಕರ್ನಾಟಕ ಸಂಸ್ಕೃತ ವಿವಿ, ಬೆಂಗಳೂರು ಪ್ರೊ. ಪದ್ಮಾ ಶೇಖರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.