ADVERTISEMENT

ಕೊನೆಯ ಚುನಾವಣೆ: ಸಿದ್ದರಾಮಯ್ಯ ಘೋಷಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST
ಮೈಸೂರಿನಲ್ಲಿ ಬೆಂಗಳೂರಿನ ಸಮ ಸಮಾಜ ವೇದಿಕೆ ಹಾಗೂ ಕನ್ನಡ ಜಾಗೃತಿ ಸಂಘ ಮಂಗಳವಾರ ಏರ್ಪಡಿಸಿದ್ದ `ಸಮ ಸಮಾಜ ಚಿಂತಕರು-ಸಮಕಾಲೀನ ಸಂದರ್ಭ' ವಿಚಾರ ಸಂಕಿರಣದಲ್ಲಿ ಇತಿಹಾಸ ತಜ್ಞ ಡಾ.ಪಿ.ವಿ.ನಂಜರಾಜ ಅರಸ್, ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು.
ಮೈಸೂರಿನಲ್ಲಿ ಬೆಂಗಳೂರಿನ ಸಮ ಸಮಾಜ ವೇದಿಕೆ ಹಾಗೂ ಕನ್ನಡ ಜಾಗೃತಿ ಸಂಘ ಮಂಗಳವಾರ ಏರ್ಪಡಿಸಿದ್ದ `ಸಮ ಸಮಾಜ ಚಿಂತಕರು-ಸಮಕಾಲೀನ ಸಂದರ್ಭ' ವಿಚಾರ ಸಂಕಿರಣದಲ್ಲಿ ಇತಿಹಾಸ ತಜ್ಞ ಡಾ.ಪಿ.ವಿ.ನಂಜರಾಜ ಅರಸ್, ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು.   

ಮೈಸೂರು: `ನಾನು ತೀರ ಕೆಟ್ಟು ಹೋಗಿಲ್ಲ; ಲೂಟಿ ಹೊಡೆದಿಲ್ಲ. ಆದಾಗ್ಯೂ, ಇದು ನನ್ನ ಕೊನೆಯ ಚುನಾವಣೆ. ಆ ಬಳಿಕ ಯಾರು, ಎಷ್ಟೇ ಒತ್ತಡ ಹೇರಿದರೂ ಚುನಾವಣೆಗೆ ನಿಲ್ಲಲ್ಲ. ಇದ್ದಷ್ಟು ದಿನ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ..'
-ಹೀಗೆಂದು ಖಡಾಖಂಡಿತವಾಗಿ ಹೇಳಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.

ಸಿದ್ದರಾಮಯ್ಯ ರಾಜಕೀಯ ಜೀವನಕ್ಕೆ ಕಾಲಿರಿಸಿ 40 ವರ್ಷ ಸಂದ ಹಿನ್ನೆಲೆಯಲ್ಲಿ ಜೆ.ಕೆ.ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸಮ ಸಮಾಜ ವೇದಿಕೆ, ಕನ್ನಡ ಜಾಗೃತಿ ಸಂಘ ಮಂಗಳವಾರ ಏರ್ಪಡಿಸಿದ್ದ `ಸಮ ಸಮಾಜ ಚಿಂತಕರು-ಸಮಕಾಲೀನ ಸಂದರ್ಭ' ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ  ಅವರು ಮಾತನಾಡಿದರು.

`ಈಗ ಚುನಾವಣೆ ಎಂದರೆ ಹಣ ಬೇಕು. ಇಲ್ಲವಾದರೆ ಗೆಲ್ಲಲು ಸಾಧ್ಯವಾಗುವುದಿಲ್ಲ. ಬಿಜೆಪಿ ಸರ್ಕಾರ 110 ಸ್ಥಾನ ಗೆಲ್ಲಲು ರೆಡ್ಡಿ ಸಹೋದರರು ಬಿ.ಎಸ್.ಯಡಿಯೂರಪ್ಪ ಅವರಿಗೆ ರೂ 200 ಕೋಟಿ ಕೊಟ್ಟಿದ್ದಾರೆ ಎಂದು ಸ್ವತಃ ಶ್ರೀರಾಮುಲು ಹೇಳಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಶಾಸಕರನ್ನು ದನ, ಕುರಿ, ಕೋಳಿಗಳಂತೆ ಖರೀದಿಸುವ ಕೆಟ್ಟ ಪ್ರಕ್ರಿಯೆ, ಆಪರೇಷನ್ ಕಮಲದಂತಹ ರಾಜಕೀಯ ನಡೆದದ್ದು ಕೆಟ್ಟ ಬೆಳವಣಿಗೆ' ಎಂದರು.

`ನಾನು ಚುನಾವಣೆಗೆ ಸ್ಪರ್ಧಿಸಿದರೆ ಕೆಲವರು ಹಣ ತಂದು ಕೊಡುತ್ತಾರೆ. ಅದೆಲ್ಲವೂ ಕಪ್ಪು ಹಣ. ಹೀಗಾಗಿ ಒಂದರ್ಥದಲ್ಲಿ ನಾನೂ ಕೂಡ ಭ್ರಷ್ಟನೇ. ಆದರೆ, ಆ ಹಣವನ್ನು ಚುನಾವಣೆಗೆ ಖರ್ಚು ಮಾಡಿ ಬಿಡುತ್ತೇನೆ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಅವರು ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಹಣವಿಲ್ಲದೇ ಗೆಲುವು ಅಸಾಧ್ಯ ಎಂಬ ಸ್ಥಿತಿ ನಿರ್ಮಿಸಿದ್ದರು. ಆ ಚುನಾವಣೆಯಲ್ಲಿ ಕೇವಲ 257 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಆ ಸಂದರ್ಭದಲ್ಲಿ ನಾನು ಅನುಭವಿಸಿದ ನೋವು, ನರಕಯಾತನೆ ನನ್ನ ಶತ್ರುವಿಗೂ ಬರಬಾರದು ಎಂದು ಅನೇಕ ಬಾರಿ ಅಂದುಕೊಂಡಿದ್ದೇನೆ' ಎಂದರು.

ಸಂಸದರಾದ ಎಚ್.ವಿಶ್ವನಾಥ್, ಆರ್.ಧ್ರುವನಾರಾಯಣ, ಶಾಸಕರಾದ ಎಚ್.ಎಸ್.ಮಹದೇವಪ್ರಸಾದ್, ಎಚ್.ಪಿ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.