ADVERTISEMENT

ಕೊಪ್ಪಳ:ವಿಧಾನಸಭಾ ಉಪ ಚುನಾವಣೆ: ಸಂಗಣ್ಣ ಪಾಲಿಗೆ ಅಗ್ನಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಕೊಪ್ಪಳ: ಕೊಪ್ಪಳ ವಿಧಾನಸಭಾ ಉಪಚುನಾವಣೆ ತಮ್ಮ ಪಾಲಿನ ಅಗ್ನಿಪರೀಕ್ಷೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಆದರೆ, ಈ ಉಪ ಚುನಾವಣೆ ಮಾತ್ರ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಪಾಲಿಗೆ ನಿಜವಾಗಿಯೂ ಅಗ್ನಿ ಪರೀಕ್ಷೆಯಾಗಿದೆ.

ಸಂಗಣ್ಣ ಕರಡಿ ತಾವಾಗಿಯೇ ಈ ಉಪ ಚುನಾವಣೆಯನ್ನು ತಂದುಕೊಂಡಿದ್ದಾರೆ. ಜೆಡಿಎಸ್‌ನಿಂದ ಆಯ್ಕೆಗೊಂಡಿದ್ದರೂ ಕ್ಷೇತ್ರದ ಅಭಿವೃದ್ಧಿ ಎಂಬ ಕಾರಣ ಮುಂದೊಡ್ಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವುದರಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಸಂಗಣ್ಣ ಕರಡಿ ಅವರದು.

ಇನ್ನೊಂದೆಡೆ, ಸಂಗಣ್ಣ ಕರಡಿ ಅವರ ಗೆಲುವು ಇಲ್ಲವೇ ಸೋಲು ರಾಜ್ಯ ಸರ್ಕಾರದ ಅಸ್ತಿತ್ವದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಇನ್ನು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಯಾವುದೇ ರೀತಿ ನಷ್ಟವಾಗದು ಎಂದು ವಿಶ್ಲೇಷಿಸಲಾಗುತ್ತಿದೆ.

1994 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ ಸಂಗಣ್ಣ ಕರಡಿ, 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಆಯ್ಕೆಗೊಂಡರು. 2004ರಲ್ಲಿ ಅವರಿಗೆ ಅದೃಷ್ಟ ಕೈಕೊಟ್ಟಿತು. 2004ರಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಸಂಗಣ್ಣ ಕರಡಿ ಪರಾಭವಗೊಂಡರು. ಆದರೆ, 2008ರಲ್ಲಿ ಜೆಡಿಎಸ್‌ನಿಂದ ಆಯ್ಕೆಗೊಂಡಿದ್ದ ಸಂಗಣ್ಣ ಕರಡಿ, 2011ರ ಮಾ. 3ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದು ಈಗ ಇತಿಹಾಸ.

ಇದುವರೆಗೂ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ತನ್ನ ಖಾತೆಯನ್ನೇ ತೆರೆದಿಲ್ಲ. ಬಿಜೆಪಿಯಿಂದ 1972ರಲ್ಲಿ ಸ್ಪರ್ಧಿಸಿದ್ದ ಎಸ್.ಎಲ್.ಸಿಂಗಟಾಲೂರು, 1983ರಲ್ಲಿ ಸ್ಪರ್ಧಿಸಿದ್ದ ಡಾ.ಶಂಕರಗೌಡ ಸಿಂಗಟಾಲೂರು, 1989ರಲ್ಲಿ ಸ್ಪರ್ಧಿಸಿದ್ದ ಎಚ್.ವಿ. ವಿರೂಪಾಕ್ಷಪ್ಪ, 1994ರಲ್ಲಿ ಕಾಶಮ್ಮ ಶಂಕರಗೌಡ, 2008ರಲ್ಲಿ ಸ್ಪರ್ಧಿಸಿದ್ದ ಅಂದಾನಪ್ಪ ಅಗಡಿ ಗೆಲ್ಲುವಲ್ಲಿ ವಿಫಲರಾದರು. ಈ ಹಿಂದಿನ ಚುನಾವಣೆಗಳಲ್ಲಿ ಸೋಲನ್ನೇ ಕಂಡಿರುವ ಬಿಜೆಪಿಯಿಂದ ಈ ಬಾರಿ ಸ್ಪರ್ಧಿಸಿರುವ ಸಂಗಣ್ಣ ಕರಡಿ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾಗಿದೆ.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಕೆ.ಬಸವರಾಜ ಹಿಟ್ನಾಳ್ 2004ರಲ್ಲಿ ಸಂಗಣ್ಣ ವಿರುದ್ಧ ಗೆದ್ದಿದ್ದರು. ಈಗಲೂ ಅವರೇ ರಾಜಕೀಯವಾಗಿ ಸಂಗಣ್ಣ ಕರಡಿ ಅವರ ಸಾಂಪ್ರದಾಯಿಕ ಎದುರಾಳಿ. ಈ ಬಾರಿಯೂ ಸ್ಪರ್ಧಿಸಿರುವ ಕೆ.ಬಸವರಾಜ ಹಿಟ್ನಾಳ್ ಪ್ರಬಲ ಸ್ಪರ್ಧೆ ಒಡ್ಡುವ ಎಲ್ಲ ಲಕ್ಷಣಗಳಿವೆ.

ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದರೂ, ಕಡೆಗಣಿಸುವಂತಿಲ್ಲ. ಲಿಂಗಾಯತ ಕೋಮಿನ ಮತದಾರರೇ ಈ ಕ್ಷೇತ್ರದಲ್ಲಿ ಹೆಚ್ಚಾಗಿದ್ದಾರೆ. ಪ್ರದೀಪಗೌಡ ಮಾಲಿಪಾಟೀಲ ಸಹ ಇದೇ ಕೋಮಿಗೆ ಸೇರಿದವರಾಗಿದ್ದರಿಂದ ಜಾತಿವಾರು ಮತ ಗಳಿಕೆ ದೃಷ್ಟಿಯಿಂದ ಸಂಗಣ್ಣ ಕರಡಿ ಅವರ ಓಟಕ್ಕೆ ತಡೆ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಕುರುಬ ಸಮಾಜ ಕ್ಷೇತ್ರದಲ್ಲಿ ಎರಡನೇ ದೊಡ್ಡ ಜನಸಂಖ್ಯೆ ಹೊಂದಿದೆ. ನಂತರದ ಸ್ಥಾನದಲ್ಲಿ ಮುಸ್ಲಿಂ ಹಾಗೂ ಇತರೆ ಹಿಂದುಳಿದವರ ವರ್ಗಗಳ ಮತಗಳಿವೆ. ಇವೇ ಪಾರಂಪರಿಕ ಮತಗಳಿಂದಾಗಿ ಕಾಂಗ್ರೆಸ್‌ನ ಕೆ.ಬಸವರಾಜ ಹಿಟ್ನಾಳ್ ಸಹ ಪ್ರಬಲ ಪ್ರತಿಸ್ಪರ್ಧಿಯಾಗಬಹುದು. ಈ ಎಲ್ಲಾ ಅಂಶಗಳಿಂದ ಅವಲೋಕಿಸಿದರೆ ಇದು ಸಂಗಣ್ಣ ಕರಡಿ ಅವರದೇ ಅಗ್ನಿ ಪರೀಕ್ಷೆ ಎನ್ನಬಹುದು.

ಆದರೆ, ಸಂಗಣ್ಣ ಕರಡಿ ಅವರು 2004ರಲ್ಲಿ ಬಿಜೆಪಿ ಟಕೆಟ್‌ನಿಂದ ಸ್ಪರ್ಧಿಸಿದ್ದಕ್ಕೂ ಈಗ ಬಿಜೆಪಿಯಿಂದ ಕಣಕ್ಕಿಳಿದಿರುವುದಕ್ಕೂ ವ್ಯತ್ಯಾಸವಿದೆ. ಈಗ ಬಿಜೆಪಿ ಅಧಿಕಾರದಲ್ಲಿದೆ. ಈ ಅಂಶ ಎಷ್ಟರ ಮಟ್ಟಿಗೆ ಸಂಗಣ್ಣ ಗೆಲುವಿಗೆ ಸಹಕಾರಿಯಾಗಬಲ್ಲದು ಎಂಬುದು ಸೆ. 29ರಂದು ಗೊತ್ತಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.