ಕೊಪ್ಪಳ: ಕೊಪ್ಪಳ ವಿಧಾನಸಭಾ ಉಪಚುನಾವಣೆ ಫಲಿತಾಂಶ ಜಾತಿ ಆಧಾರಿತ ಮತಗಳನ್ನೇ ಅವಲಂಬಿಸಿರುವುದರಿಂದ ಪ್ರಮುಖ ಪಕ್ಷಗಳು ತಮ್ಮ `ನಿಷ್ಠ~ ಜಾತಿಗಳನ್ನು ಓಲೈಸಲು ಇನ್ನಿಲ್ಲದ ಪ್ರಯತ್ನ ನಡೆಸಿವೆ.
ವಿವಿಧ ಜಾತಿಗಳ ಮತಗಳನ್ನು ತನ್ನತ್ತ ಸೆಳೆಯಲು ನಡೆಸುತ್ತಿರುವ ಕಸರತ್ತಿನಲ್ಲಿ ಬಿಜೆಪಿ ತುಸು ಮುಂಚೂಣಿಯಲ್ಲಿದ್ದರೆ ನಂತರದ ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಇವೆ.
ಈಗಾಗಲೇ ತಮ್ಮ ಪಕ್ಷಗಳಲ್ಲಿರುವ ಆಯಾ ಜಾತಿಗೆ ಸೇರಿದ ಸಚಿವರನ್ನು ಕರೆಸಿ ಸಭೆಗಳನ್ನು ನಡೆಸಿರುವ ಪಕ್ಷಗಳು ತಮ್ಮದೇ ಪಕ್ಷಕ್ಕೆ ಮತ ಹಾಕುವಂತೆ ಸಮಾಜ ಬಾಂಧವರ ಮನವೊಲಿಸುವ ಸರ್ಕಸ್ ಮಾಡಿದ್ದಾರೆ.
ಒಟ್ಟು ಮತದಾರರ ಸಂಖ್ಯೆ 1,88,196 ಇದ್ದು, ಈ ಪೈಕಿ ಲಿಂಗಾಯತರೇ ದೊಡ್ಡ ಸಂಖ್ಯೆಯಲ್ಲಿರುವ ಸಮುದಾಯ.
ಹೀಗಾಗಿ ಅಭ್ಯರ್ಥಿಯ ಗೆಲುವಿನಲ್ಲಿ ಈ ಸಮುದಾಯದ ಮತಗಳು ನಿರ್ಣಾಯಕ ಎನಿಸಿದ್ದರಿಂದ ಬಿಜೆಪಿ ಸಮಾಜದ ವಿವಿಧ ಪಂಗಡಗಳ ಓಲೈಕೆಯಲ್ಲಿ ನಿರತವಾಗಿದೆ.
ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಮತದಾರರ ಸಂಖ್ಯೆ 60 ಸಾವಿರ ಇದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಪಂಚಮಸಾಲಿ ಲಿಂಗಾಯತರ ಸಂಖ್ಯೆ 13 ಸಾವಿರಕ್ಕೂ ಹೆಚ್ಚಿದ್ದು, ಮೊದಲ ಸ್ಥಾನದಲ್ಲಿದ್ದಾರೆ.
ಆದರೆ, ಕೆಲವು ಉಪಪಂಗಡಗಳ ಮತದಾರರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಂತಹ ಮತದಾರರನ್ನು ಓಲೈಸುವ ಕಾರ್ಯ ಸದ್ದಿಲ್ಲದೇ ನಡೆದಿದೆ. ಉದಾಹರಣೆಗೆ, ಶೆಟ್ಟರ್ ಲಿಂಗಾಯತರು ಸುಮಾರು 10 ಸಾವಿರದಷ್ಟಿದ್ದು ಬಿಜೆಪಿಯಿಂದ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಈಚೆಗೆ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹಾಗೂ ಇತರ ಮುಖಂಡರು ಸಭೆ ನಡೆಸಿ ಸಮಾಜ ಬಾಂಧವರ ಅಹವಾಲು ಆಲಿಸಿದ್ದಾರೆ ಎಂದು ಬಿಜೆಪಿ ಮೂಲಗಳು `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿವೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಸೆ. 9ರಂದು ನಗರಕ್ಕೆ ಆಗಮಿಸಿದ್ದ ಜವಳಿ ಖಾತೆ ಸಚಿವ ವರ್ತೂರು ಪ್ರಕಾಶ, ಕುರುಬರು ಬಿಜೆಪಿಗೇ ಮತ ಹಾಕಬೇಕು ಹಾಗೂ ಅವರು ಬಿಜೆಪಿಯೊಂದಿಗೇ ಇದ್ದಾರೆ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಹ ಕುರುಬರಿಗೆ ಇದೇ ಧಾಟಿಯ ಫರ್ಮಾನು ಹೊರಡಿಸಿದ್ದಾರೆ ಎಂದೂ ತಿಳಿದು ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸಹ ಬಹಿರಂಗ ಸಭೆಯಲ್ಲಿ ಮಾತನಾಡಿ, ಅಬಕಾರಿ ಸಚಿವ ರೇಣುಕಾಚಾರ್ಯ ಕಾಗಿನೆಲೆ ಶ್ರೀಗಳಿಗೆ ಅವಮಾನ ಮಾಡಿಲ್ಲ ಎನ್ನುವ ಮೂಲಕ ಕುರುಬರಲ್ಲಿನ ಸಿಟ್ಟನ್ನು ಶಾಂತಗೊಳಿಸುವ ಯತ್ನ ನಡೆಸಿದರು.
ಇನ್ನು, ಅಲ್ಪಸಂಖ್ಯಾತರ ಮತಗಳ ಮೇಲೆ ನೆಚ್ಚಿಕೊಂಡಿರುವ ಕಾಂಗ್ರೆಸ್ ಸೆ. 12ರಂದು ನಡೆಸಿದ ಬಹಿರಂಗ ಸಮಾವೇಶದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರ ಮೂಲಕ ಪಕ್ಷಕ್ಕೇ ಮತ ಹಾಕುವಂತೆ ಹೇಳಿಸಿದೆ. ಅಲ್ಲದೇ, ಮಾಜಿಸಚಿವ ಇಕ್ಬಾಲ್ ಅನ್ಸಾರಿ ಮುಂದಾಳುತನದಲ್ಲಿ ಕ್ಷೇತ್ರದ ಮುಸ್ಲಿಂ ಮತದಾರರ ಓಲೈಕೆಗೂ ಕಾಂಗ್ರೆಸ್ ಮುಂದಾಗಿದೆ.
ವಿಪರ್ಯಾಸ ಎಂದರೆ ನಿರ್ಣಾಯಕ ಮತಗಳು ಎನಿಸದ ಮತದಾರರಿರುವ ಸಮಾಜಗಳೂ ಕ್ಷೇತ್ರದಲ್ಲಿವೆ.
ಬೋವಿ ಜನಾಂಗದವರು 3 ಸಾವಿರದಷ್ಟಿದ್ದಾರೆ ಎಂದು ಅಂದಾಜಿಸಲಾಗಿದ್ದರೆ, ಭಜಂತ್ರಿ-2 ಸಾವಿರ, ಜೈನರು, ಲಂಬಾಣಿ, ಆಂಧ್ರ ಜನಾಂಗದವರು ತಲಾ ಮೂರು ಸಾವಿರ ಜನ ಮತದಾರರಿದ್ದಾರೆ.
ದೇವಾಂಗ, ಸಾವಜಿ, ಗೊಲ್ಲರ, ಈಡಿಗ, ಪದ್ಮಶಾಲಿ, ಚೆನ್ನದಾಸರು, ಗೊಂದಲಿಗರು, ಕುಂಚಿಕೊರವರು, ಅಲೆಮಾರಿ ಜನಾಂಗ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಒಟ್ಟು ಜನಸಂಖ್ಯೆ 30 ಸಾವಿರ ದಾಟುವುದಿಲ್ಲ. ಈ ಚುನಾವಣೆ ಸಂದರ್ಭದಲ್ಲಾದರೂ ಪ್ರಮುಖ ಪಕ್ಷಗಳವರು ತಮ್ಮನ್ನು ಮಾತನಾಡಿಸಿ, ನಮ್ಮ ದೂರು-ದುಮ್ಮಾನು ಆಲಿಸುವರೇ ಎಂಬುದು ಈ ಎಲ್ಲ ಸಮಾಜಗಳ ಮತದಾರರ ನಿರೀಕ್ಷೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.