ADVERTISEMENT

ಕೊಲೆ ಸುಪಾರಿ ರಹಸ್ಯ ಭೇದಿಸಿದ ಸಿಮ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 16:55 IST
Last Updated 20 ಫೆಬ್ರುವರಿ 2011, 16:55 IST

ಗುಲ್ಬರ್ಗ: ಬೆಂಗಳೂರಿನ ಕುಖ್ಯಾತ ರೌಡಿ ಬೆತ್ತನಗೆರೆ ಶೀನನ ‘ಕೊಲೆ ಸುಪಾರಿ’ ಸಂಚನ್ನು ಜೈಲಿನೊಳಗೆ ಸಿಕ್ಕಿದ ‘ಮೊಬೈಲ್ ಸಿಮ್’ ಮೂಲಕ ಭೇದಿಸಿರುವ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.ಗುಲ್ಬರ್ಗ ಜೈಲಿನಲ್ಲಿ ನಡೆಯಬೇಕಾಗಿದ್ದ ಹತ್ಯೆಗೆ ಸ್ಕೆಚ್ ಹಾಕಿದ್ದು ಧಾರವಾಡ ಜೈಲಿನಲ್ಲಿ. ಅದೂ ಜೈಲಿನೊಳಗೆ ನಿಷಿದ್ಧವಾಗಿರುವ ಮೊಬೈಲ್ ಮೂಲಕ ಎಂಬುದೇ ದೊಡ್ಡ ಅಚ್ಚರಿ!

ಘಟನೆ:
ಹಲವು ಕೊಲೆ, ದರೋಡೆ, ಬೆದರಿಕೆ ಪ್ರಕರಣಗಳ ಸಂಬಂಧ ಗುಲ್ಬರ್ಗ ಜೈಲಿನಲ್ಲಿರುವ ಬೆತ್ತನಗೆರೆ ಶೀನನನ್ನು ಕೊಲೆ ಮಾಡಲು ಆತನ ಸಮೀಪ ಸಂಬಂಧಿ ಬೆತ್ತನಗೆರೆ ಶಂಕರ ಸುಪಾರಿ ನೀಡಿದ್ದ. ಬೆತ್ತನಗೆರೆ ಶಂಕರ ಸಹ ಅಂಥದ್ದೇ ಅಪರಾಧಗಳ ಶಿಕ್ಷೆಯ ಮೇಲೆ ಧಾರವಾಡದ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಶಂಕರ ತನ್ನ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಒಂದು ಕೋಟಿ ರೂಪಾಯಿಗೆ ರೌಡಿ ತಂಡವೊಂದಕ್ಕೆ ಕೊಲೆ ಸುಪಾರಿ ನೀಡಿದ್ದ. ಇದರ ಹಿಂದೆ ಭೂಗತ ಲೋಕದ ಕೈವಾಡವೂ ಇದೆ ಎಂಬ ಶಂಕೆಯನ್ನು ಪೊಲೀಸ್ ಮೂಲಗಳು ವ್ಯಕ್ತಪಡಿಸಿವೆ.

ಸುಪಾರಿ ಪಡೆದ ಬೆಂಗಳೂರು ಮತ್ತು ಮಂಡ್ಯದ ರೌಡಿಗಳಿಬ್ಬರು ಗುಲ್ಬರ್ಗ ಜೈಲಿನಲ್ಲಿರುವ ವಿಚಾರಾಧೀನ ಕೈದಿ, ಗುಲ್ಬರ್ಗ ಮೂಲದ ರಮೇಶ ಮೂಲಕ ಹತ್ಯೆ ನಡೆಸಲು ಯೋಜನೆ ಸಿದ್ಧಗೊಳಿಸಿದ್ದರು. ಪಿಸ್ತೂಲಿನ ಟ್ರಿಗರ್ ಒತ್ತಲು ರಮೇಶ ಪಡೆಯಲಿದ್ದ ಮೊತ್ತ ಹದಿನೈದು ಲಕ್ಷ ರೂಪಾಯಿ. ಉಳಿದಂತೆ, ಈ ಕೈದಿಗಳ ಜೊತೆ ಸಂಪರ್ಕ ಸಾಧಿಸಿದ ಲಿಂಗಸಗೂರಿನ ಈರಣ್ಣ 25 ಲಕ್ಷ ರೂ ಪಡೆದಿದ್ದ ಎಂದು ತಿಳಿದುಬಂದಿದೆ.

ಈ ಹತ್ಯೆಗೆ ನೆರವಾಗಲು ವಿಜಾಪುರ ಮೂಲದ ಕೈದಿಗಳಿಬ್ಬರು ಧಾರವಾಡ ಜೈಲಿನಿಂದ ವರ್ಗಾವಣೆ ಕೋರಿ ಗುಲ್ಬರ್ಗ ಜೈಲಿಗೆ ಬಂದಿದ್ದರು. ಹತ್ಯೆ ಸಂದರ್ಭ ರಮೇಶನಿಗೆ ಅವರು ನೆರವಾಗಲಿದ್ದರು. ಕೃತ್ಯದ ದಿನ ಸಮೀಪಿಸುತ್ತಿದ್ದಂತೆಯೇ ರಮೇಶನಿಗೆ ‘ಟಿಫಿನ್ ಬಾಕ್ಸ್’ನಲ್ಲಿ ಪಿಸ್ತೂಲ್ ಹಾಗೂ 8 ಸಜೀವ ಗುಂಡುಗಳು ರವಾನೆಯಾಗಿವೆ. ಅಚ್ಚರಿ ಎಂಬಂತೆ ಈ ಟಿಫಿನ್ ಬಾಕ್ಸ್ ಗುಲ್ಬರ್ಗ ಜೈಲಿನೊಳಗೂ ಬಂದಿದೆ ಎನ್ನುತ್ತವೆ ಬಲ್ಲ ಮೂಲಗಳು.

ಕೊನೆಯ ಎಡವಟ್ಟು: ಕೊನೆ ಕ್ಷಣದಲ್ಲಿ ಸಹ ಕೈದಿಯೊಬ್ಬ ಪಿಸ್ತೂಲ್ ಗಮನಿಸಿದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ.    ವಿಜಾಪುರ ಮೂಲದ ಕೈದಿ ಸುಭಾಷ ಬಳಸಿದ್ದ ಸಿಮ್ ಈ ಪಿಸ್ತೂಲ್ ಸಮೀಪವೇ ಬಿದ್ದು ಬಿಟ್ಟಿದೆ. ತನಿಖೆಗೆ ತೆರಳಿದ ಪೊಲೀಸ್ ಅಧಿಕಾರಿಗಳಿಗೆ ‘ಸಿಮ್’ ದೊರೆತಿದ್ದು, ಕೊಲೆ ಸುಪಾರಿ ಸಂಚು ಭೇದಿಸಲು ಸಹಕಾರಿಯಾಯಿತು.ಧಾರವಾಡ ಜೈಲಿನಲ್ಲಿದ್ದ ಕೈದಿಗಳ ಜತೆ ಮೊಬೈಲ್‌ಸಂಪರ್ಕ ಮಾಡಿಯೇ ವ್ಯವಹಾರ ಕುದುರಿಸಿರುವುದೂ ಬಹಿರಂಗವಾಗಿದೆ. ಈ ಎಲ್ಲ ಘಟನೆಗಳು ಜೈಲು ಸಿಬ್ಬಂದಿ ಸಹಕಾರ ಇಲ್ಲದೇ ನಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಅಪರಾಧ ತನಿಖಾ ತಜ್ಞರು.

ಆದರೆ ರೌಡಿಗಳು ಬಳಸುತ್ತಿದ್ದ ನಕಲಿ ಹೆಸರಿನ ಸಿಮ್, ಅಡ್ಡ ಹೆಸರು ಬಳಕೆ, ಅಡ್ಡೆ ಬದಲಾವಣೆಯ ಕಾರಣ ಮಾಹಿತಿ ಭೇದಿಸಲು ಪೊಲೀಸರೂ ಸಾಹಸ ಪಟ್ಟಿದ್ದಾರೆ. ಈ ಕಾರಣದಿಂದಾಗಿಯೇ ಬೆಂಗಳೂರು ಮತ್ತು ಮಂಡ್ಯ ಮೂಲದ ರೌಡಿಗಳಿಬ್ಬರ ಬಂಧನ ಸದ್ಯಕ್ಕೆ ಸಾಧ್ಯವಾಗಿಲ್ಲ. ಅವರ ಬಂಧನವಾದ ಕೂಡಲೇ ಬೆತ್ತನಗೆರೆ ಶಂಕರನನ್ನು ಧಾರವಾಡ ಜೈಲಿನಿಂದಲೇ ಗುಲ್ಬರ್ಗ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಪಾತಕಲೋಕದಲ್ಲೇ ಅಪರೂಪ ಎನಿಸಿದ ‘ಕಾರಾಗೃಹದೊಳಗೇ ಸಂಚು ರೂಪಿಸಿದ್ದ ಸುಪಾರಿ ಕೊಲೆ’ಯನ್ನು ಗುಲ್ಬರ್ಗದ ಫರಹತಾಬಾದ್ ಪೊಲೀಸರು ಭೇದಿಸಲಿದ್ದಾರೆ. ಫರಹತಾಬಾದ್ ಪಿಎಸ್‌ಐ ಶ್ರೀಮಂತ ಇಲ್ಲಾಳ್ ಈ ತನಿಖೆಯನ್ನು ಮುಂದುವರಿಸಿದ್ದಾರೆ.

ಪ್ರಕರಣದ ಹಿನ್ನೆಲೆಯಲ್ಲಿ ಕೈದಿಗಳಾದ ಸಂತೋಷ, ಸುಭಾಷ, ಮಲ್ಲಿಕಾರ್ಜುನ, ರಮೇಶ ಮತ್ತು ಲಿಂಗಸುಗೂರು ಈರಣ್ಣನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.